Russia- Ukraine War: ಉಕ್ರೇನ್‌ ಪ್ರಮುಖ ನಗರ ರಷ್ಯಾ ಕೈವಶ!

Published : Apr 22, 2022, 04:47 AM IST
Russia- Ukraine War: ಉಕ್ರೇನ್‌ ಪ್ರಮುಖ ನಗರ ರಷ್ಯಾ ಕೈವಶ!

ಸಾರಾಂಶ

* ಸತತ ಒಂದೂವರೆ ತಿಂಗಳಿಂದ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದ್ದ ರಷ್ಯಾ * ರಷ್ಯಾಕ್ಕೆ ಗುರುವಾರ ಮಹತ್ವದ ಜಯ  * ಉಕ್ರೇನ್‌ ಪ್ರಮುಖ ನಗರ ರಷ್ಯಾ ಕೈವಶ, ಮರಿಯುಪೋಲ್‌ ತೆಕ್ಕೆಗೆ

ಮರಿಯುಪೋಲ್‌(ಏ.22): ಸತತ ಒಂದೂವರೆ ತಿಂಗಳಿಂದ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದ್ದ ರಷ್ಯಾಕ್ಕೆ ಗುರುವಾರ ಮಹತ್ವದ ಜಯ ಸಿಕ್ಕಿದೆ. ಬಂದರು ನಗರಿ ಮರಿಯುಪೋಲ್‌ ತನ್ನ ಕೈವಶವಾಗಿದೆ ಎಂದು ರಷ್ಯಾ ಘೋಷಿಸಿದೆ. ಇದು ಕಳೆದ ಒಂದೂವರೆ ತಿಂಗಳ ಯುದ್ಧದಲ್ಲಿ ರಷ್ಯಾ ಕೈವಶವಾದ ಪ್ರಮುಖ ನಗರವಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಮರಿಯುಪೋಲ್‌ ವಿಮೋಚನೆ ಯಶಸ್ವಿಯಾಗಿದೆ’ ಎಂದು ಘೋಷಿಸಿದ್ದಾರೆ. ಆದರೆ ನಗರದ ಅಜೋವ್‌ಸ್ಟಾಲ್‌ ಉಕ್ಕು ಸ್ಥಾವರ ಈಗಲೂ ಉಕ್ರೇನ್‌ ಸೈನಿಕರು ವಶದಲ್ಲಿದೆ. ಆದಾಗ್ಯೂ ಉಕ್ಕು ಸ್ಥಾವರದ ಮೇಲೆ ಮೇಲೆ ದಾಳಿ ನಡೆಸದಂತೆ, ಆದರೆ ಅಲ್ಲಿಂದ ಒಂದು ಧೂಳಿನ ಕಣ ಕೂಡ ಪರಾರಿಯಾಗದಂತೆ ನೋಡಿಕೊಳ್ಳಬೇಕೆಂದು ಸೇನೆಗೆ ಪುಟಿನ್‌ ತಾಕೀತು ಮಾಡಿದ್ದಾರೆ.

ಮರಿಯುಪೋಲ್‌ ಏಕೆ ಮಹತ್ವದ್ದು?:

ಮರಿಯುಪೋಲ್‌ ಅಜೋವ್‌ ನದಿಯ ಮೇಲಿನ ಆಯಕಟ್ಟಿನ ಸ್ಥಳವಾಗಿದೆ. 2014ರಲ್ಲಿ ಉಕ್ರೇನ್‌ನಿಂದ ವಶಪಡಿಸಿಕೊಂಡಿರುವ ಕ್ರಿಮಿಯಾ ಮತ್ತು ಉಕ್ರೇನಿ ಬಂಡುಕೋರರ ವಶದಲ್ಲಿರುವ ಡೋನ್ಬಾಸ್‌ ಪ್ರಾಂತ್ಯದ ನಡುವೆ ನೇರ ಭೂಸಂಪರ್ಕ ಸಾಧ್ಯವಾಗಲಿದೆ. ಮರಿಯುಪೋಲ್‌ ಉಕ್ರೇನ್‌ನ ಅತಿದೊಡ್ಡ ಕೈಗಾರಿಕಾ ಪ್ರದೇಶಗಳ ಪೈಕಿ ಒಂದು. ಅದು ಕೈತಪ್ಪಿದರೆ ಉಕ್ರೇನ್‌ಗೆ ಆರ್ಥಿಕವಾಗಿ ಹೊಡೆತ ಬೀಳಲಿದೆ. ಮರಿಯುಪೋಲ್‌ ಕೈತಪ್ಪಿದರೆ ದೇಶದ ದಕ್ಷಿಣ ಭಾಗದ ಪ್ರಮುಖ ಬಂದರಿನಿಂದ ಉಕ್ರೇನ್‌ ವಂಚಿತವಾಗಲಿದೆ. ಕ್ರಿಮಿಯಾ ಪ್ರದೇಶಕ್ಕೆ ಇದ್ದ ಬಹುದೊಡ್ಡ ಸಮಸ್ಯೆಯಾದ ಕುಡಿಯುವ ನೀರಿನ ಪೂರೈಕೆ ಸುಲಲಿತವಾಗಲಿದೆ.

ಮತ್ತಷ್ಟು ಶವ ಪತ್ತೆ:

ಈ ನಡುವೆ, ರಷ್ಯಾದ ಪಡೆಗಳು ಕೀವ್‌ ನಗರದಿಂದ ಹಿಂದೆ ಸರಿದ ಮೇಲೆ ಕೀವ್‌ನ ಶವಾಗಾರದಲ್ಲಿ 1020 ಮೃತದೇಹಗಳನ್ನು ಇಡಲಾಗಿದೆ ಎಂದು ಉಕ್ರೇನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ದೇಹಗಳು ಸಾಮಾನ್ಯ ನಾಗರಿಕರದ್ದಾಗಿವೆ. ಇದು ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ಭೀಕರ ದಾಳಿಯನ್ನು ಜಗಜ್ಜಾಹೀರು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಂದೇ ದಿನ 1001 ಸ್ಥಳಗಳ ಮೇಲೆ ರಷ್ಯಾ ಭಾರಿ ದಾಳಿ

ಕೀವ್‌: ಉಕ್ರೇನ್‌ ಮೇಲಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದ ರಷ್ಯಾ, ಬುಧವಾರ ಒಂದೇ ದಿನ ಉಕ್ರೇನ್‌ನ 1001 ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಉಕ್ರೇನ್‌ನ ವಿವಿಧ ನಗರಗಳು, ಆಯಕಟ್ಟಿನ ಸ್ಥಳಗಳು, ರಷ್ಯಾದ ಮೇಲೆ ದಾಳಿ ನಡೆಸುತ್ತಿರುವ ಸ್ಥಳಗಳು ಸೇರಿದಂತೆ ಒಟ್ಟು 1001 ಸ್ಥಳಗಳ ಮೇಲೆ ಇಡೀ ದಿನ ದಾಳಿ ನಡೆಸಲಾಯಿತು ಎಂದು ರಷ್ಯಾ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ಮಾರಕ ಕ್ಷಿಪಣಿ ಪ್ರಯೋಗಿಸಿದ ರಷ್ಯಾ

 

ಉಕ್ರೇನ್‌ ಜೊತೆಗಿನ ಯುದ್ಧ ಮತ್ತು ಅದಕ್ಕೆ ಅಮೆರಿಕ ಹಾಗೂ ಯುರೋಪಿಯನ್‌ ದೇಶಗಳ ಬೆಂಬಲದ ನಡುವೆಯೇ, ಭೂಮಿಯ ಯಾವುದೇ ಭಾಗ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ಸಮ್ರ್ಯಾಟ್‌ ಎಂಬ ಭಾರೀ ಶಕ್ತಿಶಾಲಿ ಕ್ಷಿಪಣಿಯನ್ನು ರಷ್ಯಾ ಬುಧವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಮ್ಮ ದೇಶದ ಮೇಲೆ ಪರಮಾಣು ಪ್ರಯೋಗದ ಬೆದರಿಕೆ ಹಾಕುವ ಶತ್ರು ರಾಷ್ಟ್ರಗಳು ಎರಡೆರಡು ಬಾರಿ ಯೋಚನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

200 ಟನ್‌ ತೂಕದ ಈ ಕ್ಷಿಪಣಿಯು ಅಸಂಖ್ಯಾತ ಸಿಡಿತಲೆಗಳನ್ನು ಹೊತ್ತೊಯ್ಯುವ ಮತ್ತು ಭೂಮಿಯ ಮೇಲಿನ ಯಾವುದೇ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ದಾಳಿ ತೀವ್ರ: ಈ ನಡುವೆ ಕಲ್ಲಿದ್ದಲು ಗಣಿಗಳು ಮತ್ತು ಕಾರ್ಖಾನೆಗಳನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಉಕ್ರೇನಿನ ನಗರಗಳು ಮತ್ತು ಸೇನಾನೆಲೆಗಳ ಮೇಲಿನ ದಾಳಿಯನ್ನು ರಷ್ಯಾ ಇನ್ನಷ್ಟುತೀವ್ರಗೊಳಿಸಿದೆ. ಜೊತೆಗೆ ತನ್ನ ಮಿಲಿಟರಿ ಶಕ್ತಿಯನ್ನು ದ್ವಿಗುಣಗೊಳಿಸಿ ನಗರಗಳ ಸರ್ವನಾಶಕ್ಕೆ ಪಣತೊಟ್ಟಿದೆ. ಒಂದೊಮ್ಮೆ ಡೋನ್ಬಾಸ್‌ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರೆ ಉಕ್ರೇನ್‌ ರಾಜಧಾನಿ ಕೀವ್‌ ವಶಕ್ಕೆ ಪಡೆಯುವಲ್ಲಿ ವಿಫಲವಾಗಿರುವ ರಷ್ಯಾ ಪಡೆಗಳಿಗೆ ಮಹತ್ವದ ವಿಜಯ ಲಭಿಸಿದಂತಾಗಲಿದೆ. ಅಲ್ಲಿನ ಗಣಿಗಳು, ಲೋಹಗಳು ಮತ್ತು ಭಾರೀ ಉಪಕರಣಗಳ ಕಾರ್ಖಾನೆಗಳು ರಷ್ಯಾ ಕೈವಶವಾಗಲಿವೆ.

ಇನ್ನು ಬಂದರು ನಗರಿ ಮರಿಯುಪೋಲ್‌ ಮೇಲೆ ರಷ್ಯಾ ಪಡೆಗಳು ಬಹುತೇಕ ಹಿಡಿತ ಸಾಧಿಸಿದ್ದು, ಉಕ್ಕಿನ ಸ್ಥಾವರದ ಮೇಲೆ ರಷ್ಯಾ ಪಡೆಗಳು ಭಾರೀ ಬಾಂಬ್‌ ದಾಳಿ ನಡೆಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!