ಉಗ್ರರ ವಿರುದ್ಧ ಶ್ರೀಲಂಕಾ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುತ್ತಿದೆ. ಇದರ ಜೊತೆಗೆ ಲಂಕಾ ಭದ್ರತೆಗೆ ತೊಡಕಾಗುವ ಎಲ್ಲಾ ವಿಚಾರಗಳಲ್ಲಿ ಲಂಕಾ ಸರ್ಕಾರ ಯಾವುದೇ ಮುಲಾಜು ತೋರಿಸುತ್ತಿಲ್ಲ. ಇದೀಗ ISIS ಸೇರಿ 11 ಉಗ್ರ ಸಂಘಟನೆಗಳನ್ನು ಸರ್ಕಾರ ನಿಷೇಧಿಸಿದೆ.
ಕೊಲೊಂಬೊ(ಏ.15): ದೇಶದ ಭದ್ರತೆ ಕುರಿತು ಶ್ರೀಲಂಕಾ ಸರ್ಕಾರ ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಲಂಕಾದಲ್ಲಿನ ಬಾಂಬ್ ಸ್ಫೋಟಕ್ಕೆ ಬುರ್ಖಾ ಕೂಡ ಕಾರಣವಾಗಿತ್ತು ಅನ್ನೋ ಕಾರಣಕ್ಕೆ ದೇಶದಲ್ಲಿ ಬುರ್ಖಾ ಉಡುಪನ್ನು ನಿಷೇಧಿಸಿತ್ತು. ಇದೀಗ ISIS ಸೇರಿ 11 ಉಗ್ರ ಸಂಘಟನೆಗಳನ್ನು ಲಂಕಾ ಸರ್ಕಾರ ನಿಷೇಧಿಸಿದೆ.
ನೆರೆ ರಾಷ್ಟ್ರದಲ್ಲಿ ಬುರ್ಖಾ ನಿಷೇಧ, ಹಲವು ಇಸ್ಲಾಂ ಶಾಲೆಗಳ ಸ್ಥಗಿತ!
11 ಉಗ್ರ ಸಂಘಟನೆಗಳ ನಿಷೇಧ ಕಾಯ್ದೆಗೆ ಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಷೆ ಸಹಿ ಹಾಕಿದ್ದಾರೆ. 1979ರ ನಂ.48ರ ಭಯೋತ್ಪಾನೆ ತಡೆ(ತಾತ್ಕಾಲಿಕ ನಿಬಂಧನೆ)ಗೆ ಸಹಿ ಹಾಕಿದ್ದಾರೆ. ದೇಶದಲ್ಲಿ ಶಾಂತಿ ಹಾಗೂ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ರಕ್ತಚರಿತ್ರೆ ಸೃಷ್ಟಿಸಿದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಅಥವಾ ಐಸಿಸ್ ಉಗ್ರ ಸಂಘಟನೆಯನ್ನೂ ನಿಷೇಧಿಸಿದೆ.
ಯುನೈಟೆಡ್ ತವ್ಹೀದ್ (ಥೌಹೀದ್) ಜಮ್ಮಾಥ್ (UTJ), ಸಿಲೋನ್ ಥವ್ಹೀದ್ (ಥೌಹೀದ್) ಜಮ್ಮಾಥ್ (CTJ), ಶ್ರೀಲಂಕಾ ತವ್ಹೀದ್ (ಥೌಹೀದ್) ಜಮ್ಮಾಥ್ (SLTJ), ಆಲ್ ಸಿಲೋನ್ ಥವ್ಹೀದ್ (ಥೌಹೀದ್) ಜಮ್ಮಾಥ್ (ACTJ), ಜಮಿಯಾತುಲ್ ಅನ್ಸಾರಿ ಸುನ್ನತುಲ್ ಮೊಹಮ್ಮದಿಯಾ (JASM) ಅಲಿಯಾಸ್ ಜಮ್ಮಾತ್ ಅನ್ಸಾರಿಸ್ ಸುನ್ನತಿಲ್ ಮೊಹಮ್ಮದಿಯಾ ಸಂಸ್ಥೆ ಅಲಿಯಾಸ್ ಆಲ್ ಸಿಲೋನ್ ಜಾಮ್-ಇ- ಅಥು ಅನ್ಸಾರಿಸ್ ಸುನ್ನತಿಲ್ ಮೊಹಮ್ಮದಿಯಾ ಅಲಿಯಾಸ್ ಅನ್ಸಾರಿಸ್ ಸುನ್ನತಿಲ್ ಅನ್ಹಾರ್ ಮೊಹಮ್ಮದಿಯಾ ಅಸೋಸಿಯೇಷನ್, ಅಲಿಯಾಸ್ ಧರುಲ್ ಅಥರ್ ಕುರಾನ್ ಮದರಸಾ ಅಲಿಯಾಸ್ ಧರುಲ್ ಆಧಾರ್ ಅಥಾಬಾವಿಯಾ, ಶ್ರೀಲಂಕಾ ಇಸ್ಲಾಮಿಕ್ ವಿದ್ಯಾರ್ಥಿ ಚಳವಳಿ (ಎಸ್‌ಎಲ್‌ಐಎಸ್ಎಂ) ಅಲಿಯಾಸ್ ಜಾಮಿಯಾ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಅಲಿಯಾಸ್ ಅಲ್-ದಾವ್ಲಾ ಅಲ್-ಇಸ್ಲಾಮಿಯಾ ದಾವ್ಲಾ ಇಸ್ಲಾಮಿಯಾ, ಅಲ್-ಖೈದಾ, ಸೇವ್ ದಿ ಪರ್ಲ್ಸ್ ಅಲಿಯಾಸ್ ಪರ್ಲ್ ಸೊಸೈಟಿ ಮತ್ತು ಸೂಪರ್ ಮುಸ್ಲಿಂ ಸಂಘಟನೆಗಳನ್ನು ಶ್ರೀಲಂಕಾ ಸರ್ಕಾರ ನಿಷೇಧಿಸಿದೆ.