
ಕರಾಚಿ(ಅ.22): ಪಾಕಿಸ್ತಾನದಲ್ಲಿ ಹೊಸ ಹೈಡ್ರಾಮಾವೊಂದು ಶುರುವಾಗಿದ್ದು, ಪ್ರಬಲ ಸೇನೆಯ ವಿರುದ್ಧ ಪೊಲೀಸ್ ಪಡೆ ದಂಗೆ ಎದ್ದಿರುವ ಘಟನೆ ನಡೆದಿದೆ. ಪ್ರಕರಣವೊಂದರ ಸಂಬಂಧ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಳಿಯನನ್ನು ಬಂಧಿಸಲೇಬೇಕೆಂಬ ಜಿದ್ದಿಗೆ ಬಿದ್ದ ಸೇನಾಪಡೆಗಳು, ಸಿಂಧ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರನ್ನು ಅಪಹರಿಸಿ ಬಲವಂತದಿಂದ ಬಂಧನ ಆದೇಶಕ್ಕೆ ಸಹಿ ಹಾಕಿಸಿಕೊಂಡಿವೆ. ಈ ವಿಷಯ ತಿಳಿಯುತ್ತಿದ್ದಂತೆ, ಸೇನೆಯ ವಿರುದ್ಧ ಪೊಲೀಸರು ಸಿಡಿದೆದ್ದಿದ್ದು ಸಾಮೂಹಿಕ ರಜೆ ಹಾಕಿದ್ದಾರೆ.
ಇಮ್ರಾನ್ ಖಾನ್ ಪ್ರಧಾನಿಯಾದ ಎರಡು ವರ್ಷಗಳ ನಂತರ ಪಾಕಿಸ್ತಾನಕ್ಕೆ ಎದುರಾಗಿರುವ ಮೊದಲ ಗಂಭೀರ ಬಿಕ್ಕಟ್ಟು ಇದಾಗಿದೆ. ರಾಜಕೀಯದಲ್ಲಿ ಸೇನೆ ಮೂಗು ತೂರಿಸುತ್ತಿದೆ, ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಈಗಾಗಲೇ 11 ರಾಜಕೀಯ ಪಕ್ಷಗಳು ಒಗ್ಗೂಡಿ ದೇಶವ್ಯಾಪಿ ಪ್ರತಿಭಟನೆ ಆರಂಭಿಸಿವೆ. ಇದೇ ಸಂದರ್ಭದಲ್ಲಿ ಪೊಲೀಸ್ ಮುಖ್ಯಸ್ಥರ ಅಪಹರಣ ಘಟನೆ ನಡೆದಿರುವುದು ಇಮ್ರಾನ್ ಸರ್ಕಾರ ಹಾಗೂ ಸೇನೆಗೆ ಭಾರಿ ಮುಳುವಾಗಿದೆ. ಈ ಘಟನೆ ಬಗ್ಗೆ ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸಿವೆ. ಸಾಮಾನ್ಯವಾಗಿ ಇಂತಹದ್ದಕ್ಕೆಲ್ಲಾ ಮಣಿಯದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ, ಒಟ್ಟಾರೆ ಘಟನೆಯ ಕುರಿತು ತನಿಖೆಗೆ ಆದೇಶಿಸುವ ಮೂಲಕ ಪರಿಸ್ಥಿತಿ ತಣ್ಣಗಾಗಿಸಲು ಯತ್ನಿಸಿದ್ದಾರೆ.
ಷರೀಫ್ ಅಳಿಯನ ಬಂಧನಕ್ಕೆ ಹಟ
ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ‘ಪಾಕಿಸ್ತಾನ ಪ್ರಜಾಸತ್ತಾತ್ಮಕ ಚಳವಳಿ’ ಹೆಸರಿನಲ್ಲಿ 11 ಪಕ್ಷಗಳು ಒಗ್ಗೂಡಿವೆ. ಇದರಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್- ಎನ್ ಕೂಡ ಭಾಗಿಯಾಗಿದೆ. ಈ ಒಕ್ಕೂಟ 2 ರಾರಯಲಿಗಳನ್ನು ನಡೆಸಿದ್ದು, ಹತ್ತಾರು ಸಹಸ್ರಾರು ಜನರು ಸೇರಿದ್ದರು. ಈ ಪೈಕಿ ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ನಡೆದ ರಾರಯಲಿ ವೇಳೆ ಪಾಕಿಸ್ತಾನ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ಅವರ ಸಮಾಧಿ ಸ್ಥಳದಲ್ಲಿ ಭಾನುವಾರ ನವಾಜ್ ಷರೀಫ್ ಅಳಿಯ (ಮಾರ್ಯಂ ನವಾಜ್ ಪತಿ) ಮುಹಮ್ಮದ್ ಸಫ್ದರ್ ರಾಜಕೀಯ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇಮ್ರಾನ್ ಸರ್ಕಾರ ಹಾಗೂ ಸೇನೆ ವಿರುದ್ಧ ಸಮಾಧಿ ಸ್ಥಳದಲ್ಲಿ ಘೋಷಣೆ ಕೂಗಿದ್ದಾರೆ ಎಂದು ದೂರಲಾಗಿತ್ತು. ಹೀಗಾಗಿ ಅವರನ್ನು ಬಂಧಿಸುವ ಜಿದ್ದಿಗೆ ಸೇನೆ ಬಿದ್ದಿತ್ತು.
ಪೊಲೀಸ್ ಮುಖ್ಯಸ್ಥನ ಅಪಹರಣ
ಸೋಮವಾರ ಸಫ್ದರ್ ಬಂಧನವಾಗಿತ್ತು. ಕೆಲವೇ ತಾಸಿನಲ್ಲಿ ಬಿಡುಗಡೆಯೂ ಆಗಿತ್ತು. ಆದರೆ ಸಫ್ದರ್ ಬಂಧನ ಕುರಿತಂತೆ ಸಿಂಧ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಮುಷ್ತಾಖ್ ಮೆಹರ್ ಅವರ ಮನೆಗೆ ಅರೆಸೇನಾ ಪಡೆಯಾದ ರೇಂಜರ್‌ನ ಯೋಧರು ನುಗ್ಗಿದ್ದಾರೆ. ಅವರನ್ನು ಅಪಹರಿಸಿ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದು ಪೊಲೀಸ್ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಸಿಡಿದೆದ್ದ ಪೊಲೀಸರು
ಸಿಂಧ್‌ನ ವಿವಿಧ ಭಾಗಗಳ 3 ಐಜಿಗಳು, 25 ಡಿಐಜಿಗಳು, 30 ವಿಶೇಷ ಪೊಲೀಸ್ ಅಧೀಕ್ಷಕರು, 12 ಎಸ್‌ಪಿಗಳು, ಡಿಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳು ಸಾಮೂಹಿಕ ರಜೆ ಹಾಕಿದ್ದು, ತಮ್ಮ ಐಜಿಪಿಯನ್ನು ಅಪಹರಿಸಿ, ಅವಾನ್ ಬಂಧನಕ್ಕೆ ಬಲವಂತದಿಂದ ಸರ್ಕಾರ ಸಹಿ ಹಾಕಿಸಿಕೊಂಡಿದೆ ಎಂದು ಸೇನೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆಗೆ ಮಣಿದ ಸೇನಾ ಮುಖ್ಯಸ್ಥ ಬಾಜ್ವಾ ತನಿಖೆಗೆ ಆದೇಶಿಸಿದ್ದಾರೆ. ಒಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯ ವಿರುದ್ಧ ಪ್ರಬಲ ಹೋರಾಟವೊಂದು ಆರಂಭವಾಗಿದ್ದು, ಇದು ಎಲ್ಲಿ ಹೋಗಿ ನಿಲ್ಲಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ