PM Modi holds talks with Rishi Sunak: ಭಾರತೀಯ ಮೂಲದ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ ನಡೆಸಿದ್ದಾರೆ.
ನವದೆಹಲಿ (ಅ. 28): ಭಾರತೀಯ ಮೂಲದ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ (PM Rishi Sunak) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುರುವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಬದ್ಧತೆ ವ್ಯಕ್ತಪಡಿಸಿದ್ದಾರೆ. ಯುರೋಪ್‌ನಿಂದ ಬ್ರಿಟನ್ ಹೊರಗೋಗುವ ‘ಬ್ರೆಕ್ಸಿಟ್’ ನಂತರ ಬ್ರಿಟನ್ ಭಾರತದೊಂದಿಗೆ ಮಾಡಿಕೊಳ್ಳುತ್ತಿರುವ ಮೊದಲ ಮುಕ್ತ ವ್ಯಾಪಾರ ಒಪ್ಪಂದ ಇದಾಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ‘ಇಂದು ರಿಷಿ ಸುನಕ್ ಅವರೊಂದಿಗೆ ಮಾತನಾಡಿ ಸಂತೋಷವಾಯಿತು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ನಾವು ಒಟ್ಟಿಗೆ ಸೇರಿ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟುಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರವೇ ಅಂತಿಮಗೊಳಿಸಲು ನಾವು ಒಪ್ಪಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.
Glad to speak to today. Congratulated him on assuming charge as UK PM. We will work together to further strengthen our Comprehensive Strategic Partnership. We also agreed on the importance of early conclusion of a comprehensive and balanced FTA.
— Narendra Modi (@narendramodi)
* ದೊಡ್ಡ ಮನೆ ಬಿಟ್ಟು ಸುನಕ್ ‘ಚಿಕ್ಕ’ ಪ್ರಧಾನಿ ನಿವಾಸಕ್ಕೆ: ಬ್ರಿಟನ್ ರಾಜನಿಗಿಂತಲೂ ದುಪ್ಪಟ್ಟು ಸಂಪತ್ತು ಹೊಂದಿರುವ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಲಂಡನ್‌ನಲ್ಲಿರುವ ತಮ್ಮ ಐಷಾರಾಮಿ ನಿವಾಸ ಬಿಟ್ಟು ಬ್ರಿಟನ್ ಪ್ರಧಾನಿಯ ಅಧಿಕೃತ ನಿವಾಸವಾಗಿರುವ ನಂ.10 ಡೌನಿಂಗ್ ಸ್ಟ್ರೀಟ್‌ನ ಚಿಕ್ಕ ಫ್ಲಾಟಿಗೆ ಸ್ಥಳಾಂತರಗೊಂಡಿದ್ದಾರೆ.
‘ಸುನಕ್ ಕ್ಯಾಲಿಫೋರ್ನಿಯಾದಲ್ಲಿ ಪೆಂಟ್‌ಹೌಸ್, ಲಂಡನ್‌ನ ಪ್ರತಿಷ್ಠಿತ ಕೆನ್ಸಿಂಗ್ಟನ್ ಜಿಲ್ಲೆಯಲ್ಲಿ ಅಪಾರ್ಚ್‌ಮೆಂಟ್ ಹಾಗೂ ಉತ್ತರ ಇಂಗ್ಲೆಂಡಿನ ಯಾರ್ಕ್ಶೈರ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ತಮ್ಮ ಐಷಾರಾಮಿ ನಿವಾಸಗಳಿದ್ದರೂ ರಿಷಿ ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಚಿಕ್ಕ ಫ್ಲಾಟಿನಲ್ಲಿ ತಮ್ಮ ಕುಟುಂಬದ ಜತೆ ಬಂದು ನೆಲೆಸಲಿದ್ದಾರೆ’ ಎಂದು ವರದಿಗಳು ತಿಳಿಸಿವೆ.
ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಬಳಿ ಇದೆ ಟಾಟಾ ಒಡೆತನದ ಕಾರು!
ಹಿಂದಿನ ಪ್ರಧಾನಿಯ ತಪ್ಪನ್ನು ಸರಿಪಡಿಸುವೆ: ಹಿಂದಿನ ಪ್ರಧಾನಿ ಮಾಡಿದ ತಪ್ಪನ್ನು ಸರಿಪಡಿಸಲು ನನ್ನನ್ನು ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಹಾಗೂ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಆ ಕೆಲಸವನ್ನು ತಕ್ಷಣದಿಂದಲೇ ಆರಂಭಿಸುತ್ತೇನೆ. ಆರ್ಥಿಕ ಸ್ಥಿರತೆ ಹಾಗೂ ವಿಶ್ವಾಸವನ್ನು ಬ್ರಿಟನ್ ಸರ್ಕಾರದ ಜೀವಾಳವನ್ನಾಗಿಸುತ್ತೇನೆ. ಪ್ರಾಮಾಣಿಕತೆ, ವೃತ್ತಿಪರತೆ ಹಾಗೂ ಹೊಣೆಗಾರಿಕೆಯಿಂದ ಸರ್ಕಾರವನ್ನು ಮುನ್ನಡೆಸುತ್ತೇನೆ ಎಂದು ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.