ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಬಹಳ ದಿನಗಳ ನಂತರ ದ್ವಿಪಕ್ಷೀಯ ಮಾತುಕತೆ ನಡೆದಿದೆ.
ಜೋಹಾನ್ಸ್‌ಬರ್ಗ್: ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಬಹಳ ದಿನಗಳ ನಂತರ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಚೀನಾ ಮತ್ತು ಭಾರತ ನಡುವಿನ ವಾಸ್ತವ ಗಡಿ ರೇಖೆಯ ಬಳಿ ಮತ್ತಷ್ಟು ಸೇನೆ ಹಿಂಪಡೆದು ಪರಿಸ್ಥಿತಿ ತಿಳಿಗೊಳಿಸಲು ಒಪ್ಪಿಕೊಂಡಿದ್ದಾರೆ.
2020ರಲ್ಲಿ ನಡೆದ ಗಲ್ವಾನ್ ವ್ಯಾಲಿ ಘರ್ಷಣೆಯ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಗಡಿಯಲ್ಲಿ ಉಭಯ ಸೇನೆಗಳು ಭಾರಿ ಸಂಖ್ಯೆಯ ಸೇನೆಯನ್ನು ನಿಯೋಜಿಸಿದ್ದವು. ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಸೇನಾ ಮಟ್ಟದ ಮಾತುಕತೆಗಳು ನಡೆದಿದ್ದರೂ ನಿರೀಕ್ಷಿತ ಫಲ ಕೊಟ್ಟಿಲ್ಲ. ಹೀಗಾಗಿ ಉಭಯ ದೇಶಗಳ ನಾಯಕರೇ ಈಗ ತಮ್ಮ ವೈಯಕ್ತಿಕ ಮುನಿಸು ಮರೆತು ಎದುರು ಬದುರಾಗಿ ಮಾತನಾಡಿ ಸೇನಾ ಹಿಂತೆಗೆತದ ನಿರ್ಧಾರ ಕೈಗೊಂಡಿರುವುದು ಮಹತ್ವ ಪಡೆದಿದೆ.
ಬಿಕ್ಸ್ ಶೃಂಗದಲ್ಲಿ ಚೀನಾ ಅಧ್ಯಕ್ಷಗೆ ಮುಜುಗರ: ಜಿನ್‌ಪಿಂಗ್ ಗಾರ್ಡ್ ತಡೆದ ಸಿಬ್ಬಂದಿ: ವೈರಲ್ ವೀಡಿಯೋ
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS summit) ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿಯಾಗಿರುವ ಉಭಯ ನಾಯಕರು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈ ವೇಳೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ (Vinay Kwatra) ಹೇಳಿದ್ದಾರೆ. ಬ್ರಿಕ್ಸ್ ಸಭೆಯ ವೇಳೆ ಕ್ಸಿ ಜಿನ್‌ಪಿಂಗ್(Xi Jinping) ಅವರ ಜೊತೆ ಮಾತನಾಡಿದ ಪ್ರಧಾನಿ ಮೋದಿ ಲಡಾಖ್ ಗಡಿಯ (Ladakh border) ಬಳಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಗಡಿ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕ್ರಮಗಳನ್ನು ಕೈಗೊಳ್ಳಲು ಮೋದಿ ಸೂಚನೆ ನೀಡಿದರು. ಬಳಿಕ ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು ಎಂದು ಕ್ವಾತ್ರಾ ಹೇಳಿದ್ದಾರೆ.