* ನಾವೇನೂ ತಪ್ಪು ಮಾಡಿಲ್ಲ: ಕಿರಣ್ ಶಾ, ತೆಂಡೂಲ್ಕರ್
* ಪಂಡೋರಾ ಪೇಪರ್ಸ್ ಆರೋಪ ಸುಳ್ಳು
* ನಮ್ಮ ವಿದೇಶಿ ವ್ಯವಹಾರ ಸಕ್ರಮವಾಗಿದೆ
* ತೆರಿಗೆ ಸ್ವರ್ಗ ದೇಶಗಳಲ್ಲಿ ಅಂಬಾನಿಯಿಂದ 18 ಕಂಪನಿಗಳು
ನವದೆಹಲಿ(ಅ.05): ತೆರಿಗೆ ವಂಚಕರ ಕುರಿತು 2016ರಲ್ಲಿ ಬಿಡುಗಡೆಯಾಗಿದ್ದ ಪನಾಮಾ ಪೇಪರ್(Panama Papers)ಸ್ ರೀತಿಯಲ್ಲಿ ಇದೀಗ 1.2 ಕೋಟಿ ಫೈಲ್‌ಗಳನ್ನು ಒಳಗೊಂಡ ‘ಪಂಡೋರಾ ಪೇಪರ್ಸ್’(Pandora Papers) ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಇದರಲ್ಲಿ 300 ಭಾರತೀಯರೂ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಶ್ರೀಮಂತರು ‘ತೆರಿಗೆ ವಂಚಕರ ಸ್ವರ್ಗ’ ಎನ್ನಿಸಿಕೊಂಡ ದೇಶಗಳಲ್ಲಿ ಹೇಗೆ ಕಂಪನಿಗಳನ್ನು ಆರಂಭಿಸಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಈ ವಿಚಾರವು ಭಾರತವು ಸೇರಿದಂತೆ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಪ್ರಕರಣಗಳ ತನಿಖೆ ನಡೆಸಲು ನಿರ್ಧರಿಸಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದ ‘ಬಹು ಸಂಸ್ಥೆಗಳ ಸಮೂಹ’ವು ತನಿಖೆ ಕೈಗೊಳ್ಳಲಿದೆ.
undefined
ಏನಿದು ‘ಪಂಡೋರಾ ಪೇಪರ್ಸ್’?
ತೆಂಡೂಲ್ಕರ್, ಕಿರಣ್ ಷಾ ಪತಿ, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಭಾರತೀಯರು, 700ಕ್ಕೂ ಹೆಚ್ಚು ಪಾಕಿಸ್ತಾನಿಗಳು ಹಾಗೂ ಪಾಶ್ಚಿಮಾತ್ಯ ದೇಶಗಳ ಗಣ್ಯರು ತೆರಿಗೆ ಸ್ವರ್ಗ ದೇಶಗಳಲ್ಲಿ ಕಂಪನಿಗಳನ್ನು ಹುಟ್ಟುಹಾಕಿ ಅಕ್ರಮವಾಗಿ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ದಾಖಲೆಗಳನ್ನು ಬಿಡುಗಡೆ ಮಾಡಿದೆ. 2016ರಲ್ಲಿ ಇದೇ ಸಂಸ್ಥೆ ಪನಾಮಾ ಪೇಪರ್ಸ್ ಹೆಸರಿನಲ್ಲಿ ಈ ಮಾದರಿಯ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈಗ ಬಿಡುಗಡೆ ಮಾಡಿರುವ ದಾಖಲೆಗಳು ಪನಾಮಾ ಪೇಪರ್ಸ್‌ನ ಮುಂದುವರೆದ ಭಾಗವಾಗಿದ್ದು, ಇದಕ್ಕೆ ಪಂಡೋರಾ ಪೇಪರ್ಸ್ ಎಂದು ಕರೆಯಲಾಗಿದೆ. ಭಾರತದಲ್ಲಿ ಐಸಿಐಜೆ ಜತೆ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಸಹಭಾಗಿತ್ವ ಹೊಂದಿದೆ.
ತೆರಿಗೆ ಸ್ವರ್ಗ ದೇಶಗಳಲ್ಲಿ ಅಂಬಾನಿಯಿಂದ 18 ಕಂಪನಿಗಳು
2020ರಲ್ಲಿ ಫೆಬ್ರವರಿಯಲ್ಲಿ ಚೀನಾದ ನಿಯಂತ್ರಣದ ಮೂರು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ವಿಚಾರಣೆ ವೇಳೆ ತಮ್ಮ ಬಳಿ ಬಿಡಿಗಾಸೂ ಇಲ್ಲ ಲಂಡನ್ ನ್ಯಾಯಾಲಯಕ್ಕೆ ಉದ್ಯಮಿ ಅನಿಲ್ ಅಂಬಾನಿ(Anil Ambani) ತಿಳಿಸಿದ್ದರು. ಇದಾಗಿ ಮೂರು ತಿಂಗಳ ಬಳಿಕ 5300 ಕೋಟಿ ರು. ಅನ್ನು ಬ್ಯಾಂಕ್‌ಗಳಿಗೆ ಪಾವತಿಸುವಂತೆ ಅನಿಲ್ ಅಂಬಾನಿಗೆ ಆದೇಶಿಸಲಾಗಿತ್ತು. ಆದರೆ ದಿವಾಳಿಯಾಗಿರುವ ತನ್ನಿಂದ ಈ ಹಣ ಕಟ್ಟಲು ಸಾಧ್ಯವಿಲ್ಲ ಎಂದು ಅಂಗಲಾಚಿದ್ದರು. ಆದರೆ ಅನಿಲ್ ಅಂಬಾನಿ ಮತ್ತು ಆವರ ಪ್ರತಿನಿಧಿಗಳು ತೆರಿಗೆ ಸ್ವರ್ಗ ರಾಷ್ಟ್ರಗಳಾದ ಜೆರ್ಸಿ, ಬ್ರಿಟಿಷ್ ಐಲ್ಯಾಂಡ್ ಮತ್ತು ಸೈಪ್ರಸ್‌ಗಳಲ್ಲಿ 18 ಕಂಪನಿಗಳನ್ನು ಹೊಂದಿದ್ದಾರೆ ಎಂಬುದು ಭಾರತದಲ್ಲಿ ಪಂಡೋರಾ ಪೇಪರ್ಸ್ಸ್ ಬಿಡುಗಡೆ ಮಾಡಿದ ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ. 2007ರಿಂದ 2010ರ ವೇಳೆಗೆ ಸ್ಥಾಪಿಸಲಾದ ಈ ಕಂಪನಿಗಳಲ್ಲಿ ಅನಿಲ್ 1.3 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ವರ್ಜಿನ್ ಐಲ್ಯಾಂಡ್‌ನಲ್ಲಿ ಸಚಿನ್ ಹೂಡಿಕೆ
ಭಾರತದ ಕ್ರಿಕೆಟ್ ದಂತಕಥೆ ಎಂದೇ ಖ್ಯಾತರಾಗಿರುವ ರಾಜ್ಯಸಭೆಯ ಸದಸ್ಯರೂ ಆಗಿರುವ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕುಟುಂಬದ ಸದಸ್ಯರ ಜತೆಗೂಡಿ ತೆರಿಗೆ ಸ್ವರ್ಗದೇಶ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ನಲ್ಲಿ ಹೂಡಿಕೆ ಮಾಡಿದ್ದರು. ಆದರೆ 2016ರಲ್ಲಿ ಪನಾಮಾ ಪೇಪರ್ಸ್ ಬಿಡುಗಡೆಯಾದ ಬಳಿಕ ವಿದೇಶದಲ್ಲಿನ ತಮ್ಮ ಆಸ್ತಿಯನ್ನು ನಗದೀಕರಣಕ್ಕೆ ಸಚಿನ್ ಕೋರಿಕೊಂಡಿದ್ದರು. ಅಲ್ಲದೆ ಈ ಪ್ರಕಾರ 2016ರಲ್ಲೇ ತೆಂಡೂಲ್ಕರ್ ಅವರ ಒಡೆತನದ ಕಂಪನಿ ಮುಚ್ಚಿತ್ತು. ಇದರಲ್ಲಿ ಸಚಿನ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಾವ ಆನಂದ್ ಮೆಹ್ತಾ ಅವರು ಸಹ ಹೂಡಿಕೆ ಮಾಡಿದ್ದರು ಎಂದು ಗೊತ್ತಾಗಿದೆ.
ಎಲ್ಲ ಕಾನೂನುಬದ್ಧ- ಸಚಿನ್ ವಕ್ತಾರ:
‘ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ನಲ್ಲಿ ಕಾನೂನುಬದ್ಧವಾಗಿಯೇ ನಾವು ಸಾಸ್ ಇಂಟರ್‌ನ್ಯಾಷನಲ್ ಲಿ. ಕಂಪನಿ ಆರಂಭಿಸಿದ್ದೆವು. ಅದನ್ನು 2016ರಲ್ಲಿ ಕಾನೂನುಬದ್ಧವಾಗಿ ಮುಚ್ಚಿದ್ದೇವೆ. ಅದರಿಂದ ಬಂದ ಹಣದ ಬಗ್ಗೆ ಭಾರತದ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ತೆಂಡೂಲ್ಕರ್ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಈ ಕಂಪನಿಯಲ್ಲಿ ಸಚಿನ್ ತೆಂಡೂಲ್ಕರ್, ಪತ್ನಿ ಅಂಜಲಿ ಹಾಗೂ ಮಾವ ಆನಂದ ಮೆಹ್ತಾ ಷೇರುದಾರರಾಗಿದ್ದು, ಕಂಪನಿಯನ್ನು ಮುಚ್ಚಿದ ನಂತರ ಬಂದ ಹಣದ ಬಗ್ಗೆ ಮಾಹಿತಿ ಮುಚ್ಚಿಟ್ಟು ಆರ್ಥಿಕ ವಂಚನೆ ಎಸಗಿದ್ದಾರೆ ಎಂದು ಪಂಡೋರಾ ಪೇಪರ್ಸ್‌ನಲ್ಲಿ ಹೇಳಲಾಗಿತ್ತು.
ತಪ್ಪಾಗಿ ಪತಿಯ ಹೆಸರು- ಕಿರಣ್:
ಇನ್ನು, ತಮ್ಮ ಪತಿ ವಿದೇಶದಲ್ಲಿ ಸ್ಥಾಪಿಸಿರುವ ಟ್ರಸ್ಟ್ ಕಾನೂನುಬದ್ಧವಾಗಿದ್ದು, ಅದರಲ್ಲಿ ಯಾವುದೇ ವಂಚನೆ ಎಸಗಿಲ್ಲ. ಟ್ರಸ್ಟ್ ಅನ್ನು ಸ್ವತಂತ್ರ ಟ್ರಸ್ಟಿಗಳು ನಿಭಾಯಿಸುತ್ತಿದ್ದಾರೆ. ಅವರಾರಯರೂ ಭಾರತದ ಪ್ರಜೆಗಳಲ್ಲ. ಪಂಡೋರಾ ಪೇಪರ್ಸ್‌ನಲ್ಲಿ ತಪ್ಪಾಗಿ ತಮ್ಮ ಪತಿಯ ಹೆಸರು ಸೇರಿಸಲಾಗಿದೆ ಎಂದು ಕಿರಣ್ ಮಜುಂದಾರ್ ಷಾ ಟ್ವೀಟ್ ಮಾಡಿದ್ದಾರೆ.
ತೆಂಡೂಲ್ಕರ್, ಕಿರಣ್ ಷಾ ಪತಿ, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಭಾರತೀಯರು ತೆರಿಗೆ ಸ್ವರ್ಗ ದೇಶಗಳಲ್ಲಿ ಕಂಪನಿಗಳನ್ನು ಹುಟ್ಟುಹಾಕಿ ಅಕ್ರಮವಾಗಿ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ದಾಖಲೆಗಳನ್ನು ಬಿಡುಗಡೆ ಮಾಡಿದೆ. 2016ರಲ್ಲಿ ಇದೇ ಸಂಸ್ಥೆ ಪನಾಮಾ ಪೇಪರ್ಸ್ ಹೆಸರಿನಲ್ಲಿ ಈ ಮಾದರಿಯ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈಗ ಬಿಡುಗಡೆ ಮಾಡಿರುವ ದಾಖಲೆಗಳು ಪನಾಮಾ ಪೇಪರ್ಸ್‌ನ ಮುಂದುವರೆದ ಭಾಗವಾಗಿದ್ದು, ಇದಕ್ಕೆ ಪಂಡೋರಾ ಪೇಪರ್ಸ್ ಎಂದು ಕರೆಯಲಾಗಿದೆ.