ನಿರ್ಬಂಧ ಬದಿಗೊತ್ತಿ ಭಾರತದಿಂದ ಸಕ್ಕರೆ, ಹತ್ತಿ ಆಮದಿಗೆ ಪಾಕ್‌ ನಿರ್ಧಾರ

By Suvarna NewsFirst Published Apr 1, 2021, 11:59 AM IST
Highlights

‌: ಕಾಶ್ಮೀರದಲ್ಲಿ ಬಿಕ್ಕಟ್ಟಿನ ಕಾರಣ ಕಳೆದ 2 ವರ್ಷದಿಂದ ಹೇರಿದ್ದ ಆಮದು ಮೇಲಿನ ನಿರ್ಬಂಧ| ನಿರ್ಬಂಧ ಬದಿಗೊತ್ತಿ ಭಾರತದಿಂದ ಸಕ್ಕರೆ, ಹತ್ತಿ ಆಮದಿಗೆ ಪಾಕ್‌ ನಿರ್ಧಾರ| 

ಇಸ್ಲಮಾಬಾದ್(ಏ.01): ಕಾಶ್ಮೀರದಲ್ಲಿ ಬಿಕ್ಕಟ್ಟಿನ ಕಾರಣ ಕಳೆದ 2 ವರ್ಷದಿಂದ ಹೇರಿದ್ದ ಆಮದು ಮೇಲಿನ ನಿರ್ಬಂಧವನ್ನು ತೆಗೆದುಹಾಕಿ, ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದೆ.

ಪಾಕ್‌ ನೂತನ ಹಣಕಾಸು ಸಚಿವ ಹಮ್ಮದ್‌ ಅಜಾರ್‌ ಅವರು ಬುಧವಾರ ಈ ಘೋಷಣೆ ಮಾಡಿದರು.

ಖಾಸಗಿ ವಲಯಗಳು 5 ಲಕ್ಷ ಟನ್‌ ಸಕ್ಕರೆಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಆರ್ಥಿಕ ಸಹಕಾರ ಸಮಿತಿ (ಇಸಿಸಿ) ಒಪ್ಪಿಗೆ ನೀಡಿದೆ. ಭಾರತದಲ್ಲಿ ಸಕ್ಕರೆ ದರ ಕಡಿಮೆ ಇದೆ. ಹಾಗಾಗಿ ಭಾರತದೊಂದಿಗೆ ಮತ್ತೆ ಸಕ್ಕರೆ ವ್ಯವಹಾರ ನಡೆಸಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು. ಇದೇ ವೇಳೆ ಇದೇ ಜೂನ್‌ನಿಂದ ಭಾರತದ ಹತ್ತಿಯನ್ನು ಆಮದು ಮಾಡಿಕೊಳ್ಳುವುದಾಗಿ ತಿಳಿಸಿದರು.

ಪಾಕಿಸ್ತಾನದ ಈ ನಿರ್ಧಾರವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲಿದೆ ಎಂದು ಅಲ್ಲಿನ ಪ್ರತಿಷ್ಠಿತ ಡಾನ್‌ ಪತ್ರಿಕೆ ವಿಶ್ಲೇಷಿಸಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಪರಿಚ್ಛೇದ-370 ಅನ್ನು 2019ರಲ್ಲಿ ಭಾರತ ಸರ್ಕಾರ ರದ್ದು ಮಾಡಿತ್ತು. ಇದರಿಂದ ಸಿಟ್ಟಾದ ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದಗಳನ್ನು ಮುರಿದು, ಇಸ್ಲಮಾಬಾದ್‌ನಲ್ಲಿದ್ದ ಭಾರತದ ಹೈಕಮಿಷನರ್‌ಅನ್ನು ಹೊರದಬ್ಬಿತ್ತು. ನಂತರ ಭಾರತದೊಂದಿಗಿನ ಎಲ್ಲಾ ವ್ಯಾಪಾರ ಮತ್ತು ರೈಲ್ವೆ ಸೇವೆಯನ್ನು ಸ್ಥಗಿತ ಮಾಡಿತ್ತು.

click me!