ಮ್ಯಾನ್ಮಾರ್ ಮಿಲಿಟರಿ ದಂಗೆ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆ ನಡೆಸುತ್ತಿರುವ ವೈಮಾನಿಕ ದಾಳಿ| ವೈಮಾನಿಕ ದಾಳಿಯಿಂದ ಪಾರಾಗಲು ಸಾವಿರಾರು ಮಂದಿ ಥಾಯ್ಲೆಂಡ್ ಕಡೆಗೆ ಪಲಾಯನ
ಯಾಂಗಾವ್(ಮಾ.30): ಮ್ಯಾನ್ಮಾರ್ ಮಿಲಿಟರಿ ದಂಗೆ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆ ನಡೆಸುತ್ತಿರುವ ವೈಮಾನಿಕ ದಾಳಿಯಿಂದ ಪಾರಾಗಲು ಸಾವಿರಾರು ಮಂದಿ ಥಾಯ್ಲೆಂಡ್ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರೆನ್ ಗ್ರಾಮದಿಂದ ಜನರ ಸಾಮೂಹಿಕ ವಲಸೆಯನ್ನು ನಿಯಂತ್ರಿಸಲು ಥಾಯ್ ಅಧಿಕಾರಿಗಳು ಇಲ್ಲಿನ ವಾಯುವ್ಯ ಗಡಿಯಲ್ಲಿ ಸೋಮವಾರದಿಂದ ಬೀಡುಬಿಟ್ಟಿದ್ದಾರೆ.
ಪ್ರಜಾಪ್ರಭುತ್ವ ಪರ ಪ್ರತಿಭಟನೆ ಹತ್ತಿಕ್ಕಲು ಮ್ಯಾನ್ಮಾರ್ ಸೇನೆ ಭಾನುವಾರ ತಡರಾತ್ರಿ 3 ಏರ್‌ಸ್ಟೆ್ರೖಕ್‌ಗಳನ್ನು ನಡೆಸಿದೆ. ಘಟನೆಯಲ್ಲಿ ಓರ್ವ ಮಗು ಗಂಭೀರವಾಗಿ ಗಾಯಗೊಂಡಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸಂತ್ರಸ್ತ ಕರೆನ್ ಗ್ರಾಮಸ್ಥರಿಗೆ ಔಷದೋಪಚಾರ ಸೇರಿದಂತೆ ವಿವಿಧ ರೀತಿಯ ನೆರವು ನೀಡುತ್ತಿರುವ ಫ್ರೀ ಬರ್ಮಾ ಸಂಸ್ಥೆ ತಿಳಿಸಿದೆ.
ಸಂಭಾವ್ಯ ದಾಳಿಯಿಂದ ಪಾರಾಗಿ ಜೀವ ಉಳಿಸಿಕೊಳ್ಳಲು ಸುಮಾರು 2500 ಸಾವಿರ ಮಂದಿ ಎರಡೂ ದೇಶಗಳನ್ನು ವಿಭಜಿಸುವ ಸಾಲ್ವೀನ್ ನದಿಯನ್ನು ದಾಟಿ ಬಂದಿದ್ದಾರೆ. ಇನ್ನೂ ಅಂದಾಜು 10,000 ಮಂದಿ ಜೀವಭಯದಲ್ಲಿ ಮ್ಯಾನ್ಮಾರ್‌ನಿಂದ ಪಲಾಯನ ಮಾಡುವ ಸಾಧ್ಯತೆ ಇದೆ ಎಂದು ಏಜೆನ್ಸಿ ತಿಳಿಸಿದೆ.
ಕರೆನ್ ಜನರಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆಂದು ಕರೆನ್ ನ್ಯಾಷನಲ್ ಆರ್ಮಿ ಪ್ರತಿಭಟನೆ ಕೈಗೊಂಡಿದ್ದು, ಈ ಪ್ರತಿಭಟನೆ ಹತ್ತಿಕ್ಕಲು ಸೇನೆ ವೈಮಾನಿಕ ದಾಳಿ ನಡೆಸಿದೆ. ಇದರಿಂದ ಜನರು ಭೀತರಾಗಿದ್ದಾರೆ.