ಭಾರತದಿಂದ ಸಕ್ಕರೆ-ಹತ್ತಿ ಆಮದು ಮಾಡಲ್ಲ; ಉಲ್ಟಾ ಹೊಡೆದ ಪಾಕಿಸ್ತಾನ!

By Suvarna NewsFirst Published Apr 1, 2021, 6:48 PM IST
Highlights

2 ವರ್ಷದಿಂದ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಪಾಕಿಸ್ತಾನ ಸರ್ಕಾರ, ಭಾರತದಿಂದ ಹತ್ತಿ ಹಾಗೂ ಸಕ್ಕರೆ ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ ತೀವ್ರ ವಿರೋಧದಿಂದ ಇದೀಗ ಇಮ್ರಾನ್ ಖಾನ್ ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಕುರಿತ ವಿವರ ಇಲ್ಲಿದೆ.

ಇಸ್ಲಾಮಾಬಾದ್(ಎ.01): ಭಾರತದ ಜೊತೆಗಿನ ಮುನಿಸು ಬದಿಗಿಟ್ಟು ದೇಶದಲ್ಲಿ ಬೇಡಿಕೆ ಹಾಗೂ ಸಮತೋಲನ ಕಾಪಾಡಿಕೊಳ್ಳಲು ಭಾರತದಿಂದ ಸಕ್ಕರೆ-ಹತ್ತಿ ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಪಾಕಿಸ್ತಾನ ಕ್ಯಾಬಿನೆಟ್ ಸಭೆಯಲ್ಲಿ ಭಾರತದಿಂದ ಯಾವುದೇ ವಸ್ತು ಆಮದು ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿರ್ಬಂಧ ಬದಿಗೊತ್ತಿ ಭಾರತದಿಂದ ಸಕ್ಕರೆ, ಹತ್ತಿ ಆಮದಿಗೆ ಪಾಕ್‌ ನಿರ್ಧಾರ

ಪ್ರಧಾನಿ ಇಮ್ರಾನ್ ಖಾನ್ ನೇತತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ಮಾಡಿರುವ ದೆಹಲಿ ಸರ್ಕಾರದ ನಿರ್ಧಾರ ಬದಲಾಗುವ ವರೆಗೂ ಪಾಕಿಸ್ತಾನ ಆಮದು ನಿರ್ಬಂಧ ತೆರವುಗೊಳಿಸುವುದಿಲ್ಲ ಎಂದು ಪಾಕ್ ಸಚಿವ ಶೇಕ್ ರಶೀದ್ ಅಹಮ್ಮದ್ ಸ್ಪಷ್ಟಪಡಿಸಿದ್ದಾರೆ.

ಭಾರತದಿಂದ 5 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಳ್ಳಲು ಪಾಕಿಸ್ತಾನದ ಆರ್ಥಿಕ ಸಹಕಾರ ಸಮಿತಿ ಒಪ್ಪಿಗೆ ನೀಡಿತ್ತು. ಜೂನ್ ತಿಂಗಳಿನಿಂದ ಹತ್ತಿ ಆಮದ ಮಾಡಿಕೊಳ್ಳುವುದಾಗಿ ಪಾಕ್ ಹಣಕಾಸು ಸಚಿವ ಹಮ್ಮದ ಅಜರ್ ಘೋಷಿಸಿದ್ದರು. ಆದರೆ ಈ ಘೋಷಣೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಕ್ಕರೆ ಹಾಗೂ ಹತ್ತಿ ಕೊರತೆಯಾದರೂ ಸಹಿಸಿಕೊಳ್ಳುತ್ತೇವೆ, ಆದರೆ ಭಾರತದಿಂದ ಆಮದು ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು.

2019ರಲ್ಲಿ ನರೇಂದ್ರ ಮೋದಿ ಸರ್ಕಾರ ಜಮ್ಮ ಮುತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿತು. ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಡಿಸಿದ ಪಾಕಿಸ್ತಾನ ಭಾರತದೊಂದಿಗಿನ ಎಲ್ಲಾ ವ್ಯವಹಾರಕ್ಕೆ ಬ್ರೇಕ್ ಹಾಕಿತು. ಆಮದು, ರೈಲು ಸೇವೆ ಸೇರಿದಂತೆ ಹಲವು ದ್ವಿಪಕ್ಷೀಯ ವ್ಯವಹಾರಗಳನ್ನು ಸ್ಥಗಿತಗೊಳಿಸಿತ್ತು. 

click me!