Pakistan Satellite: ಸ್ಯಾಟಲೈಟ್ ಉಡಾವಣೆ ಆಯ್ತು, ಆದ್ರೆ ಮೊದಲ ಫೋಟೋನೇ ಫೇಕ್? ಪಾಕ್ ಬಾಹ್ಯಾಕಾಶ ಸಂಸ್ಥೆ ಮತ್ತೆ ಎಡವಟ್ಟು

Published : May 02, 2026, 01:26 PM IST
Pakistan EO 3 Satellite Launch

ಸಾರಾಂಶ

ಪಾಕಿಸ್ತಾನ ಏಪ್ರಿಲ್ 25ರಂದು ಚೀನಾದ ರಾಕೆಟ್ ಬಳಸಿ EO-3 ಸ್ಯಾಟಲೈಟ್ ಉಡಾವಣೆ ಮಾಡಿತು. ಇದು ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ SUPARCOಗೆ ಒಂದು ದೊಡ್ಡ ಹೆಜ್ಜೆ. ಆದರೆ, ಸ್ಯಾಟಲೈಟ್ ಕಳಿಸಿದ 'ಮೊದಲ ಫೋಟೋ' ಅಂತ ಹಂಚಿಕೊಂಡ ಚಿತ್ರ, ಉಡಾವಣೆಗೂ ತಿಂಗಳುಗಳ ಹಿಂದಿನದ್ದು ಎಂದು ಗೊತ್ತಾಗಿ ವಿವಾದ ಸೃಷ್ಟಿ.

ಹೊಸದಿಲ್ಲಿ: ಏಪ್ರಿಲ್ 25ರಂದು ಪಾಕಿಸ್ತಾನದ ಸೋಶಿಯಲ್ ಮೀಡಿಯಾದಲ್ಲಿ ಒಂದು ದೊಡ್ಡ ಸಂಭ್ರಮ ಮನೆ ಮಾಡಿತ್ತು. ದೇಶದ ಜನ ಇದೊಂದು ಐತಿಹಾಸಿಕ ಕ್ಷಣ ಎಂದು ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಕಾರಣ, ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ SUPARCO, ತನ್ನ EO-3 ಭೂ ವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು. ಚೀನಾದ ತೈಯುನ್ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 6 ರಾಕೆಟ್ ಮೂಲಕ ಈ ಸ್ಯಾಟಲೈಟ್‌ ಅನ್ನು ಲಾಂಚ್ ಮಾಡಲಾಗಿತ್ತು.

 

ಈ ಸಂಭ್ರಮದ ಜೊತೆಗೆ, ಪಾಕಿಸ್ತಾನದ ಜನರಿಗೆ ಇನ್ನೊಂದು ಖುಷಿ ಸುದ್ದಿ ಸಿಕ್ಕಿತ್ತು. ಅದೇನಂದ್ರೆ, ಹೊಸ ಸ್ಯಾಟಲೈಟ್ ಕಳಿಸಿದ ಮೊದಲ ಫೋಟೋ! ಕರಾಚಿ ಪೋರ್ಟ್‌ನ ಅತ್ಯಂತ ಸ್ಪಷ್ಟವಾದ, ಹೈ-ರೆಸಲ್ಯೂಷನ್ ಚಿತ್ರವದು. ಪಾಕಿಸ್ತಾನ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಹಲವರು ಬರೆದುಕೊಂಡರು.

ಆದರೆ, ಈ ಸಂಭ್ರಮ ಕೇವಲ ಕೆಲವೇ ಗಂಟೆಗಳ ಕಾಲ ಇತ್ತು. ಇಂಡಿಪೆಂಡೆಂಟ್ ರಿಸರ್ಚರ್ ಈ ಫೋಟೋವನ್ನು ಪರಿಶೀಲಿಸಿದಾಗ ಒಂದು ಆಘಾತಕಾರಿ ಸತ್ಯ ಹೊರಬಿತ್ತು. SUPARCO ವೆಬ್‌ಸೈಟ್‌ನಲ್ಲಿದ್ದ ಚಿತ್ರದ ಟೈಮ್‌ಸ್ಟ್ಯಾಂಪ್, ಸ್ಯಾಟಲೈಟ್ ಉಡಾವಣೆಗೂ ತಿಂಗಳುಗಳ ಹಿಂದಿನದ್ದು, ಅಂದರೆ 2025ರದ್ದು ಎಂದು ಗೊತ್ತಾಯ್ತು.

 

ಸಾವಿರಾರು ಮಂದಿ ಹಂಚಿಕೊಂಡಿದ್ದ ಆ ಚಿತ್ರಕ್ಕೂ, ಹೊಸದಾಗಿ ಉಡಾವಣೆಗೊಂಡ ಸ್ಯಾಟಲೈಟ್‌ಗೂ ಯಾವುದೇ ಸಂಬಂಧ ಇರಲಿಲ್ಲ. ಅದು ಹಳೆಯ ಫೋಟೋ ಆಗಿತ್ತು. ಒಂದು ಸಾಧನೆಯನ್ನು ಸಂಭ್ರಮಿಸಲು, ಇಲ್ಲದ ಸಂಗತಿಯನ್ನು ಸೃಷ್ಟಿಸುವ ಪ್ರಯತ್ನ ಇದಾಗಿತ್ತು.

ಇದು SUPARCO ಮಾಡಿದ ಮೊದಲ ತಪ್ಪೇನಲ್ಲ. ಕಳೆದ 60 ವರ್ಷಗಳಿಂದ ಈ ಸಂಸ್ಥೆ ಸಾಧನೆಗಿಂತ ಪ್ರಚಾರವನ್ನೇ ಹೆಚ್ಚು ನಂಬಿಕೊಂಡು ಬಂದಿದೆ. ಈ ನಕಲಿ ಫೋಟೋ ಪ್ರಕರಣ, ಅದರ ಹಳೆಯ ಚಾಳಿಯ ಹೊಸ ರೂಪವಷ್ಟೇ.

ಪಾಕಿಸ್ತಾನದ ಬಾಹ್ಯಾಕಾಶ ಕಾರ್ಯಕ್ರಮ 1961ರಲ್ಲಿ ಶುರುವಾಗಿತ್ತು. ಅಂದರೆ, ನಮ್ಮ ಇಸ್ರೋಗಿಂತ 8 ವರ್ಷ ಮೊದಲೇ SUPARCO ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಸಿಕ್ಕ ಅವಕಾಶವನ್ನೆಲ್ಲಾ ಅದು ದಶಕಗಳಿಂದ ಹಾಳುಮಾಡಿಕೊಳ್ಳುತ್ತಲೇ ಬಂದಿದೆ.

1984ರಲ್ಲಿ ITU ಸಂಸ್ಥೆ ಪಾಕಿಸ್ತಾನಕ್ಕೆ 5 ಆರ್ಬಿಟಲ್ ಸ್ಲಾಟ್‌ಗಳನ್ನು ಕೊಟ್ಟಿತ್ತು. ಆದರೆ, 1995ರವರೆಗೂ ಪಾಕಿಸ್ತಾನ ಯಾವುದೇ ಸ್ಯಾಟಲೈಟ್ ಉಡಾವಣೆ ಮಾಡಲಿಲ್ಲ. ಗಡುವು ವಿಸ್ತರಣೆ ಸಿಕ್ಕರೂ ಅದನ್ನು ಪೂರೈಸಲು ವಿಫಲವಾಗಿ, ತನಗೆ ಸಿಕ್ಕಿದ್ದ 4 ಪ್ರಮುಖ ಜಿಯೋಸ್ಟೇಷನರಿ ಸ್ಲಾಟ್‌ಗಳನ್ನು ಕಳೆದುಕೊಂಡಿತು. ಆ ಸ್ಲಾಟ್‌ಗಳು ಮತ್ತೆಂದೂ ಸಿಗುವುದಿಲ್ಲ.

SUPARCO ದ Badr-B ಉಡಾವಣೆ

2001ರಲ್ಲಿ, SUPARCO ಸಂಸ್ಥೆ Badr-B (Badr-2) ಸ್ಯಾಟಲೈಟ್ ಉಡಾವಣೆ ಮಾಡಿ, ಇದೊಂದು ದೊಡ್ಡ ಮೈಲಿಗಲ್ಲು ಎಂದು ದೇಶದಾದ್ಯಂತ ಪ್ರಚಾರ ಮಾಡಿತು. ಆದರೆ, ಕೆಲವೇ ದಿನಗಳಲ್ಲಿ ಅದು ನಿಯಂತ್ರಣ ತಪ್ಪಿ ಬಾಹ್ಯಾಕಾಶದಲ್ಲಿ ಕಳೆದುಹೋಯ್ತು. ಈ ಬಗ್ಗೆ ಸಂಸ್ಥೆ ಯಾವುದೇ ಸಾರ್ವಜನಿಕ ವಿವರಣೆ ನೀಡಲಿಲ್ಲ. ಆ ಸ್ಯಾಟಲೈಟ್ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿ, ಏನೂ ಆಗೇ ಇಲ್ಲ ಎಂಬಂತೆ ಮುಂದೆ ಸಾಗಿತು.

ಇಂತಹ ಅತಿಶಯೋಕ್ತಿ ಹೇಳಿಕೆಗಳು 2002ರಲ್ಲಿ ಇನ್ನೊಂದು ಹಂತಕ್ಕೆ ತಲುಪಿದವು. ಆಗಿನ ಅಧ್ಯಕ್ಷ ಪರ್ವೇಜ್ ಮುಷರಫ್, Paksat-1 ಸ್ಯಾಟಲೈಟ್ ಖರೀದಿಸಿದ ನಂತರ, 'ನಾವು ಬಾಹ್ಯಾಕಾಶದಲ್ಲಿ ಭಾರತಕ್ಕಿಂತ ಮುಂದಿದ್ದೇವೆ' ಎಂದು ಬಹಿರಂಗವಾಗಿ ಘೋಷಿಸಿದರು. ಆದರೆ, ಅವರು ಹೇಳದ ಸತ್ಯವೆಂದರೆ, Paksat-1 ಪಾಕಿಸ್ತಾನದ ಸ್ಯಾಟಲೈಟ್ ಆಗಿರಲೇ ಇಲ್ಲ.

ಅದು ಮೂಲತಃ ಇಂಡೋನೇಷ್ಯಾಕ್ಕಾಗಿ ತಯಾರಾದ ಸ್ಯಾಟಲೈಟ್. ಬ್ಯಾಟರಿ ಸಮಸ್ಯೆಯಿಂದಾಗಿ ಅದು ಭಾಗಶಃ ನಿಷ್ಕ್ರಿಯಗೊಂಡಿತ್ತು. ನಂತರ ಅದನ್ನು ಸುಮಾರು 5 ಮಿಲಿಯನ್ ಡಾಲರ್‌ಗೆ ಪಾಕಿಸ್ತಾನಕ್ಕೆ ಮಾರಲಾಯಿತು. ಪಾಕಿಸ್ತಾನ ಅದಕ್ಕೆ Paksat-1 ಎಂದು ಮರುನಾಮಕರಣ ಮಾಡಿ, ತನ್ನದೇ ದೇಶೀಯ ಸಾಧನೆ ಎಂಬಂತೆ ಜಗತ್ತಿನ ಮುಂದೆ ಬಿಂಬಿಸಿತು.

ಈಗಿನ EO-3 ಪ್ರಕರಣವೂ ಇದೇ ಸಾಲಿಗೆ ಸೇರುತ್ತದೆ. ಸ್ಯಾಟಲೈಟ್ ನಿಜಕ್ಕೂ ಪಾಕಿಸ್ತಾನದಲ್ಲೇ ತಯಾರಾಗಿದ್ದು. SUPARCOದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲೇ ಇದನ್ನು ವಿನ್ಯಾಸಗೊಳಿಸಿ, ನಿರ್ಮಿಸಲಾಗಿದೆ. ಕೃಷಿ, ವಿಪತ್ತು ನಿರ್ವಹಣೆ, ನಗರಾಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಹೈ-ರೆಸಲ್ಯೂಷನ್ ಚಿತ್ರಗಳನ್ನು ಒದಗಿಸುವುದು ಇದರ ಉದ್ದೇಶ.

ಆದರೆ, ಇವತ್ತಿನ ಡಿಜಿಟಲ್ ಯುಗದಲ್ಲಿ ಇಂಥ ಸುಳ್ಳುಗಳು ಹೆಚ್ಚು ಕಾಲ ನಿಲ್ಲುವುದಿಲ್ಲ. ಓಪನ್-ಸೋರ್ಸ್ ತಜ್ಞರು ಕೆಲವೇ ಗಂಟೆಗಳಲ್ಲಿ ಫೋಟೋದ ಮೆಟಾಡೇಟಾ ಪರಿಶೀಲಿಸಿ, ಅಸಲಿಯತ್ತನ್ನು ಬಯಲು ಮಾಡುತ್ತಾರೆ. ಹಾಗೆ ಮಾಡಿದಾಗ, ನಿಜವಾದ ಸಾಧನೆಯೂ ಮಣ್ಣುಪಾಲಾಗುತ್ತದೆ.

ಪಾಕಿಸ್ತಾನ ಯಶಸ್ವಿಯಾಗಿ ಒಂದು ಸ್ಯಾಟಲೈಟ್ ಅನ್ನು ಕಕ್ಷೆಗೆ ಸೇರಿಸಿದೆ. ಇದು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಮೂಹದ ಮೂರನೇ ಸ್ಯಾಟಲೈಟ್. ಈ ಸಾಧನೆಯನ್ನು ಸರಿಯಾಗಿ ಹೇಳಿಕೊಳ್ಳುವ ಬದಲು, SUPARCO ಒಂದು ಸುಳ್ಳು ಫೋಟೋ ಹರಿಬಿಟ್ಟು ವಿಮರ್ಶಕರಿಗೆ ಆಹಾರವಾಗಿದೆ. ದಶಕಗಳಿಂದ ಇದೇ ತಪ್ಪು ಮರುಕಳಿಸುತ್ತಿದೆ.

ಸ್ಯಾಟಲೈಟ್‌ಗಳ ಹೆಸರುಗಳು ಬದಲಾಗಬಹುದು. ಆದರೆ, ವಾಸ್ತವವನ್ನು ವರದಿ ಮಾಡುವ ಬದಲು, ಅದಕ್ಕೆ ಬಣ್ಣ ಬಳಿಯುವ ಚಾಳಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ, ಎಂಥಾ ಕರ್ಮ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಹುಚ್ಚರ ಕೈಗೆ ಅಣ್ವಸ್ತ್ರ ಸಿಗಬಾರದು..' ಇರಾನ್ ಶಾಂತಿ ಪ್ರಸ್ತಾವನೆ ತಿರಸ್ಕರಿಸಿ ಸಮರ ಸಾರಿದ ಡೊನಾಲ್ಡ್ ಟ್ರಂಪ್!
ವಿಶ್ವಪಟಲ ಸೇರಿದ ಕರ್ನಾಟಕದ ನೀರ್​ ದೋಸೆ: 100ರ ಟಾಪ್​ ಲಿಸ್ಟ್​ನಲ್ಲಿ ಭಾರತದ 11 ತಿಂಡಿಗಳು- List ಇಲ್ಲಿದೆ