Kentucky Tornadoes:ಅಮೆರಿಕದಲ್ಲಿ ಸುಂಟರಗಾಳಿಗೆ 70 ಬಲಿ, ಪೀಡಿತ ಪ್ರದೇಶಕ್ಕೆ ಅಧ್ಯಕ್ಷ ಬೈಡೆನ್ ಭೇಟಿ!

By Suvarna NewsFirst Published Dec 12, 2021, 9:10 AM IST
Highlights

* ಅಮೆರಿಕದ ಕೆಂಟುಕಿ ರಾಜ್ಯದಲ್ಲಿ ಸುಂಟರಗಾಳಿ

* ಸುಂಟರಗಾಳಿಯಿಂದಾಗಿ ಸತ್ತವರ ಸಂಖ್ಯೆ 70 ಕ್ಕೆ ಏರಿಕೆ

* ಚಂಡಮಾರುತ ಪೀಡಿತ ರಾಜ್ಯಗಳಿಗೆ ಭೇಟಿ ಕೊಟ್ಟ ಯುಎಸ್ ಅಧ್ಯಕ್ಷ ಜೋ ಬೈಡೆನ್

ವಾಷಿಂಗ್ಟನ್(ಡಿ.12): ಅಮೆರಿಕದ ಕೆಂಟುಕಿ ರಾಜ್ಯದಲ್ಲಿ ಸುಂಟರಗಾಳಿಯಿಂದಾಗಿ ಸತ್ತವರ ಸಂಖ್ಯೆ 70 ಕ್ಕೆ ಏರಿದೆ. ಸಾವಿನ ಸಂಖ್ಯೆ 100 ಕ್ಕೂ ಹೆಚ್ಚು ತಲುಪುವ ನಿರೀಕ್ಷೆಯಿದೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಚಂಡಮಾರುತ ಪೀಡಿತ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.

ಚಂಡಮಾರುತದಿಂದಾಗಿ ಅಧಿಕಾರಿಗಳು ಕಠಿಣ ಸವಾಲು ಎದುರಿಸುತ್ತಿದ್ದಾರೆ. ಮೇಫೀಲ್ಡ್‌ನಲ್ಲಿರುವ ಪೊಲೀಸ್ ಠಾಣೆಗಳು ಧ್ವಂಸವಾಗಿವೆ. ಅಗ್ನಿಶಾಮಕ ಯಂತ್ರಗಳಿಗೂ ಹಾನಿಯಾಗಿದೆ. ಕೆಂಟುಕಿ ರಾಜ್ಯದಲ್ಲಿ ಲಕ್ಷಾಂತರ ಜನರು ವಿದ್ಯುತ್ ಮತ್ತು ನೀರಿಲ್ಲದೆ ಪರದಾಡುತ್ತಿದ್ದಾರೆ. ಸುಂಟರಗಾಳಿಯಿಂದಾಗಿ ಅಮೆರಿಕದ ಇತರ ರಾಜ್ಯಗಳಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಇಲಿನಾಯ್ಸ್‌ನ ಅಮೆಜಾನ್ ಗೋದಾಮಿನಲ್ಲಿ 6 ಜನರು ಸಾವನ್ನಪ್ಪಿದ್ದಾರೆ.

ಶನಿವಾರ ಬೆಳಗ್ಗೆ ಗಂಟೆಗೆ ಸುಮಾರು 365 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದ್ದು, ಸಾವಿರಾರು ಮಂದಿ ತತ್ತರಿಸಿಹೋಗಿದ್ದಾರೆ. 60 ಸಾವಿರಕ್ಕೂ ಅಧಿಕ ಮಂದಿ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದಾರೆ. ಎಷ್ಟೋ ದೊಡ್ಡದೊಡ್ಡ ಕಟ್ಟಡಗಳ ಛಾವಣಿಯೇ ಹಾರಿಹೋಗಿದ್ದು, ಕೆಲವು ಕಟ್ಟಡಗಳು ಬಿರುಗಾಳಿ ಹೊಡೆತಕ್ಕೆ ಧ್ವಂಸಗೊಂಡಿವೆ.

ನೂರಕ್ಕೂ ಅಧಿಕ ಎಮರ್ಜೆನ್ಸಿ ವಾಹನಗಳನ್ನು ತುರ್ತು ನೆರವಿಗಾಗಿ ಇಲ್ಲಿಗೆ ಕಳುಹಿಸಲಾಗಿದೆ. ನಾರ್ಥರ್ನ್​ ಅರ್ಕಾನ್ಸಾಸ್​ನಲ್ಲಿ ಮೊನೆಟ್ ಮಾನರ್ ನರ್ಸಿಂಗ್ ಹೋಮ್ ಕಟ್ಟಡ ಕುಸಿದಿದ್ದು, ಕನಿಷ್ಠ 20 ಮಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಚಂಡಮಾರುತದಿಂದ ಸತ್ತವರಿಗಾಗಿ ಪ್ರಾರ್ಥಿಸುತ್ತಿರುವುದಾಗಿ ಅಧ್ಯಕ್ಷ ಬೈಡೆನ್ ಹೇಳಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಲು ಫೆಡರಲ್ ಸರ್ಕಾರವು ಎಲ್ಲವನ್ನೂ ಮಾಡುತ್ತದೆ. ಮನೆಗಳು ನಾಶವಾದ ಅಥವಾ ಕೆಟ್ಟದಾಗಿ ಹಾನಿಗೊಳಗಾದವರಿಗೆ ತಾತ್ಕಾಲಿಕ ವಸತಿ ಸಹಾಯ ಸೇರಿದಂತೆ ಹೆಚ್ಚುವರಿ ಸಂಪನ್ಮೂಲಗಳನ್ನು ನೀಡಲು ತುರ್ತು ಏಜೆನ್ಸಿ FEMA ದ ತಂಡಗಳು ಭಾನುವಾರ ಕೆಂಟುಕಿಗೆ ಭೇಟಿ ನೀಡುತ್ತವೆ. ಮಿಸೌರಿ, ಅರ್ಕಾನ್ಸಾಸ್, ಇಲಿನಾಯ್ಸ್, ಟೆನ್ನೆಸ್ಸೀ ಮತ್ತು ಮಿಸ್ಸಿಸ್ಸಿಪ್ಪಿ - ಇತರ ಪೀಡಿತ ರಾಜ್ಯಗಳಿಗೆ ತುರ್ತು ನಿಧಿಗಳನ್ನು ಸಹ ಲಭ್ಯಗೊಳಿಸಲಾಗಿದೆ.

click me!