
ಇಸ್ಲಾಮಾಬಾದ್ (ಮೇ.13): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೆಲೆಯೇರಿಕೆ, ವಿದ್ಯುತ್ ಹಾಗೂ ವಿವಿಧ ಸಮಸ್ಯೆಗಳ ವಿರುದ್ಧ ಸಿಡಿದೆದ್ದು ಜನತೆ ನಡೆಸುತ್ತಿರುವ ಹಿಂಸಾತ್ಮಕ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದೆ. ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಭಾರಿ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ ಮತ್ತು ಪೊಲೀಸರು ಸೇರಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದೇ ವೇಳೆ, ಮುಜಫ್ಫರಾಬಾದ್ ಮತ್ತು ರಾವಲ್‌ಕೋಟ್‌ನಲ್ಲಿ ಸ್ಥಳೀಯರು ಭದ್ರತಾ ಪಡೆಗಳ ನಡುವೆ ಘರ್ಷಣೆಗೆ ಇಳಿದಿದ್ದು, ಭಾರತದೊಂದಿಗೆ ವಿಲೀನಕ್ಕೆ ಒತ್ತಾಯಿಸುವ ಪೋಸ್ಟರ್‌ಗಳನ್ನು ಜನರು ಹಾಕಿದ್ದಾರೆ. ‘ಇದು ಪಾಕಿಸ್ತಾನ ಸರ್ಕಾರವು ಆಕ್ರಮಿತ ಕಾಶ್ಮಿರದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ದ್ಯೋತಕ’ ಎಂದು ಕೆಲವು ಪಾಕಿಸ್ತಾನಿ ಅಧಿಕಾರಿಗಳೇ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಪಿಒಕೆ ಮರುವಶ: ಅಮಿತ್ ಶಾ
ಓರ್ವ ಪೊಲೀಸ್ ಸಾವು: ಮೀರ್‌ಪುರದ ಇಸ್ಲಾಂಘರ್ ಎಂಬಲ್ಲಿ ಪ್ರತಿಭಟನಾಕಾರರು ಮುಜಫ್ಫರಾಬಾದ್ ಚಲೋ ನಡೆಸುತ್ತಿದ್ದ ವೇಳೆ ಅದನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದ್ದಾರೆ. ಆಗ ಎದೆಗೆ ತಾಗಿದ ಗುಂಡೇಟಿಗೆ ಸಬ್ ಇನ್ಸ್‌ಪೆಕ್ಟರ್ ಅದ್ನಾನ್ ಖುರೇಷಿ ಬಲಿಯಾಗಿದ್ದಾರೆ. ಡಿಯಾಲ್ ಎಂಬಲ್ಲಿ ಶಾಂತಿಯುತ ಪ್ರತಿಭಟನಾಕಾರರ ಗುಂಪಿಗೆ ಅಶ್ರುವಾಯು ಶೆಲ್‌ಗಳು ಸಿಡಿಸಲಾಗಿದೆ. ಜಮ್ಮು-ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಕೋಟ್ಲಿ, ಪೂಂಛ್, ಮುಜಫ್ಫರಾಬಾದ್ ಸೇರಿ ಅನೇಕ ಕಡೆ ಪ್ರತಿಭಟನೆ ನಡೆಸಿದ್ದು ಭಾನುವಾರ ಕೂಡ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅನೇಕ ಕಡೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆದಿದೆ.
ಪ್ರತಿಭಟನೆ ತಡೆಗೆ ಇಂಟರ್ನೆಟ್ ಬಂದ್, ಅರೆಸೇನೆ: ಬೃಹತ್ ಪ್ರತಿಭಟನೆಗಳನ್ನು ನಿಲ್ಲಿಸಲು ಪ್ರಾದೇಶಿಕ ಸರ್ಕಾರವು ಅರೆಸೇನಾ ಪಡೆ ಮತ್ತು ಪೊಲೀಸರ ಭಾರೀ ತುಕಡಿಗಳನ್ನು ನಿಯೋಜಿಸಿದೆ. ಭಿಂಬರ್ ಮತ್ತು ಬಾಗ್ ಪಟ್ಟಣಗಳು ಸೇರಿದಂತೆ ಪಿಒಕೆಯ ವಿವಿಧ ಭಾಗಗಳಲ್ಲಿ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೇವೆಗಳನ್ನು ಭಾನುವಾರ ಸ್ಥಗಿತಗೊಳಿಸಲಾಗಿದೆ. ಮೀರ್‌ಪುರದಲ್ಲಿ, ಎಲ್ಲಾ ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
Karnataka MLC Election 2024: ಜೆಡಿಎಸ್-ಬಿಜೆಪಿ ಮೈತ್ರಿಗೆ ಅಭ್ಯಂತರ ಇಲ್ಲ: ಡಿ.ಕೆ.ಶಿವಕುಮಾರ್
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಸೋಮವಾರ ಅಧ್ಯಕ್ಷರ ಭವನದಲ್ಲಿ ಪ್ರದೇಶದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸಂಬಂಧಿಸಿದಂತೆ ತುರ್ತು ಸಭೆಯನ್ನು ಕರೆದಿದ್ದಾರೆ. ಸಮಸ್ಯೆಪರಿಹರಿಸಲು ಪ್ರಸ್ತಾವನೆಗಳನ್ನು ತರಲು ಮಧ್ಯಸ್ಥಗಾರರಿಗೆ ಸೂಚಿಸಿದ್ದಾರೆ. ವಿದ್ಯುತ್ ಸಮಸ್ಯೆ ಇತ್ಯರ್ಥ, ಗೋಧಿ ಹಿಟ್ಟು ಸಬ್ಸಿಡಿ ದರದಲ್ಲಿ ವಿತರಣೆ, ಗಣ್ಯರ ಸವಲತ್ತು ಕಡಿತ- ಇವು ಪ್ರತಿಭಟನಾಕಾರರ ಬೇಡಿಕೆಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ