
ವಾಷಿಂಗ್ಟನ್ (ಫೆ.25): ಸಾರ್ವಭೌಮ ರಾಷ್ಟ್ರ ಉಕ್ರೇನ್ ನ (Ukraine ) ಮೇಲೆ ರಷ್ಯಾ ಸೇನಾಪಡೆಗಳ (Russia Army) ಆಕ್ರಮಣದ ವಿಚಾರ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ. ಉಕ್ರೇನ್ ನ ಮೇಲಿನ ಆಕ್ರಮಣವನ್ನು ಖಂಡಿಸುವ ಮೂಲಕ ಜವಾಬ್ದಾರಿಯುತ ದೇಶಗಳು ತನ್ನ ಜವಾಬ್ದಾರಿಯನ್ನು ಪ್ರದರ್ಶನ ಮಾಡಬೇಕು ಎಂದು ಅಮೆರಿಕ ಹೇಳಿದ್ದರೆ, ಇನ್ನೊಂದೆಡೆ ಭಾರತ, ರಷ್ಯಾದ ಆಕ್ರಮಣವನ್ನು ಈವರೆಗೂ ಖಂಡಿಸಿಲ್ಲ. ಗುರುವಾರ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi ), ಹಿಂಸಾಚಾರವನ್ನು ಕಡಿಮೆ ಮಾಡಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವಂತೆ ಮನವಿ ಮಾಡಿದ್ದರು.
ಇದರ ನಡುವೆಯೇ ಗುರುವಾರ ಶ್ವೇತಭವನದಲ್ಲಿ (White House) ರಷ್ಯಾ-ಉಕ್ರೇನ್ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗೆ, ರಷ್ಯಾದ ಕ್ರಮದ ಕುರಿತಾಗಿ ಭಾರತದ ನಿಲುವಿನ ಬಗ್ಗೆಯೂ ಪ್ರಶ್ನೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಭಾರತದ ನಿಲುವು ಏನು ಎನ್ನುವ ವಿಚಾರ ಸಂಪೂರ್ಣವಾಗಿ ಬಗೆಹರಿದಿಲ್ಲ' ಎಂದು ಹೇಳಿದರು. ರಷ್ಯಾದಿಂದ ಸೇನಾ ಕಾರ್ಯಾಚರಣೆಯ ನಂತರ ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗೆ ಸಮಾಲೋಚನೆ ನಡೆಸಲಿದೆ ಎಂದಷ್ಟೇ ಹೇಳಿದರು.
ಗುರುವಾರ ಟಿವಿ ಭಾಷಣದಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಕ್ರಮವು ನೆರೆಯ ದೇಶದಿಂದ ಹೊರಹೊಮ್ಮುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಂದಿದೆ ಎಂದು ಹೇಳಿದರು. ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ ಆ ದೇಶಗಳು ಈವರೆಗೂ ನೋಡದ ಪರಿಣಾಮಗಳನ್ನು ಎದುರಿಸುತ್ತಾರೆ ಎಂದು ಜಗತ್ತಿನ ಇತರ ದೇಶಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು.
“ನಾವು ಭಾರತದೊಂದಿಗೆ (ಉಕ್ರೇನಿಯನ್ ಬಿಕ್ಕಟ್ಟಿನ ಬಗ್ಗೆ) ಸಮಾಲೋಚನೆ ನಡೆಸಲಿದ್ದೇವೆ. ನಾವು ಅದನ್ನು ಸಂಪೂರ್ಣವಾಗಿ ಪರಿಹರಿಸಿಲ್ಲ, ”ಉಕ್ರೇನಿಯನ್ ಬಿಕ್ಕಟ್ಟಿನ ಕುರಿತು ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಬಿಡೆನ್ ಸುದ್ದಿಗಾರರಿಗೆ ತಿಳಿಸಿದರು. ರಷ್ಯಾದ ಆಕ್ರಮಣದ ಕುರಿತು ಭಾರತವು ಸಂಪೂರ್ಣವಾಗಿ ಅಮೆರಿಕದ ಪರವಾಗಿ ನಿಲ್ಲಲಿದೆಯೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದರು. ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಒಂದೇ ರೀತಿಯ ನಿಲುವು ಹೊಂದಿಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ನಾನು ಪುಟಿನ್ ತಾಯಿಯಾಗಿರಬೇಕಿತ್ತು ಎಂದ ಅಮೆರಿಕನ್ ನಟಿ.. ನೆಟ್ಟಿಗರಿಂದ ಫುಲ್ ಟ್ರೋಲ್
ಇನ್ನು ರಷ್ಯಾದೊಂದಿಗೆ ಭಾರತದ ಸಂಬಂಧ ಇಂದು ನಿನ್ನೆಯದಲ್ಲ. ಐತಿಹಾಸಿಕ ಭಾರತ ಹಾಗೂ ರಷ್ಯಾ ಹಲವು ವಿಚಾರದಲ್ಲಿ ಒಂದಾಗಿ ಯೋಚನೆ ಮಾಡಿವೆ. ಇದೇ ಸಮಯದಲ್ಲಿ ಭಾರತವು, ಅಮೆರಿಕದೊಂದಿಗಿನ ಪಾಲುದಾರಿಕೆಯು ಕಳೆದ ಒಂದು ದಶಕದ ಅವಧಿಯಲ್ಲಿ ಅಭೂತಪೂರ್ವವಾಗಿ ಬೆಳೆದಿದೆ. ಶ್ವೇತಭವನ, ವಿದೇಶಾಂಗ ಇಲಾಖೆ ಮತ್ತು ಅದರ ರಾಷ್ಟ್ರೀಯ ಭದ್ರತಾ ಮಂಡಳಿಯಿಂದ ಹಿಡಿದು ವಿವಿಧ ಹಂತಗಳಲ್ಲಿ ಬಿಡೆನ್ ಆಡಳಿತವು ಉಕ್ರೇನಿಯನ್ ಬಿಕ್ಕಟ್ಟಿನ ಬಗ್ಗೆ ಸಂಪೂರ್ಣ ಬೆಂಬಲವನ್ನು ಕೋರಿ ಹಲವಾರು ಹಂತಗಳಲ್ಲಿ ತಮ್ಮ ಭಾರತೀಯ ಬೆಂಬಲವನ್ನು ಕೇಳಿದೆ ಎಂದು ಹೇಳಲಾಗಿದೆ.
ಉಕ್ರೇನ್ ಬಿಕ್ಕಟ್ಟಿನ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ನಿಲುವೇನು ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರಿಗೆ ಕೇಳಲಾಯಿತು. ಈ ವೇಳೆ ಅವರು ಯಾವುದೇ ಉತ್ತರ ನೀಡಲು ನಿರಾಕರಿಸಿದ್ದಾರೆ. ಒಟ್ಟಾರೆಯಾಗಿ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ವಿಚಾರದಲ್ಲಿ ಭಾರತದ ಮೌನಕ್ಕೆ ಅಮೆರಿಕ ಬೇಸರ ವಹಿಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ತನ್ನದೇ ಆದ ಸ್ವತಂತ್ರ ನಿಲುವುಗಳನ್ನು ಹೊಂದಲು ಶಕ್ತವಾಗಿದೆ ಎಂದು ಹೇಳಲಾಗಿದೆ.
Russia Ukraine War: ಉಕ್ರೇನ್ ಜನವಸತಿ ಪ್ರದೇಶಗಳಲ್ಲಿ ಬೆಂಕಿ, ಆಕ್ರಂದನ, ನರಳಾಟ
ಅದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು, ಈ ಸಮಯದಲ್ಲಿ ಅವರು ರಷ್ಯಾ ಮತ್ತು ನ್ಯಾಟೋ ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮತ್ತು ನಂಬಿಕಸ್ತ ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂಬ ಭಾರತದ ದೀರ್ಘಕಾಲದ ನಂಬಿಕೆಯನ್ನು ಪುನರುಚ್ಚರಿಸಿದರು. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರಧಾನಿ ಮನವಿ ಮಾಡಿದರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಪ್ರಕಟಣೆಯ ಪ್ರಕಾರ ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳಿಗೆ ಮೋದಿ ಕರೆ ನಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ