ನ್ಯೂಯಾರ್ಕ್(ಫೆ.25): ರಷ್ಯಾ ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಎರಡು ಕಡೆಗಳಲ್ಲೂ ಸಾವು ನೋವುಗಳು ಹೆಚ್ಚಾಗುತ್ತಿವೆ. ಉಕ್ರೇನ್ ಅಂತು ರಷ್ಯಾದ ದಾಳಿಗೆ ಸಿಲುಕಿ ಅಕ್ಷರಶಃ ನಲುಗಿದೆ. ಈ ಎರಡು ಕಡೆಯ ಸಾವು ನೋವುಗಳನ್ನು ಕಂಡು ಇಡೀ ಜಗತ್ತೇ ನೋವಿನಿಂದ ಮರುಗುತ್ತಿದೆ. ಯುದ್ಧ ನಿಲ್ಲಿಸಬೇಕು ಎಂದು ರಷ್ಯಾವನ್ನು ಕೇಳುತ್ತಿದೆ. ಆದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯಾರ ಮನವಿಗೂ ತಲೆ ಬಾಗದೇ ಆನೆ ನಡೆದಿದ್ದೆ ಹಾದಿ ಎಂದು ಉಕ್ರೇನ್‌ನನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಈ ನಡುವೆ ಅಮೆರಿಕನ್ ನಟಿಯೊಬ್ಬರು ನಾನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಾಯಿಯಾಗಬೇಕಿತ್ತು ಎಂದು ಹೇಳಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಗಾಗಿ ಮನವಿ ಮಾಡಿದ ಈ ಅಮೆರಿಕನ್ ನಟಿ ಅನ್ನಾಲಿನ್ ಮೆಕ್‌ಕಾರ್ಡ್ (AnnaLynne McCord ) ಯುದ್ಧ ನಿಲ್ಲಿಸುವ ಸಲುವಾಗಿ ನಾನು ನಿಮ್ಮ ತಾಯಿಯಾಗಬೇಕಿತ್ತು ಎಂದು ವಿಡಿಯೋದಲ್ಲಿ ಹೇಳುತ್ತಾರೆ. ಆದರೆ ಅವರ ಈ ಆಶಯಕ್ಕೆ ನಟ್ಟಿಗರು ಹಾಸ್ಯ ಹಾಗೂ ಟೀಕಿಸುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕನ್ ಟಿವಿ ಸೀರಿಯಲ್ 90210 ಅಲ್ಲಿ ನಟಿಸಿರುವ 34 ವರ್ಷದ ಅನ್ನಾಲಿನ್ ಮೆಕ್‌ಕಾರ್ಡ್ ಯುದ್ಧ ನಿಲ್ಲಿಸಬೇಕೆಂದು ಮನವಿ ಮಾಡುತ್ತಾ 2:20 ನಿಮಿಷಗಳ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಅವರು ಕವನವೊಂದನ್ನು ಬರೆದಿದ್ದು, ಅದನ್ನು ಅವರು ಈ ವಿಡಿಯೋದ ಮೂಲಕ ವಾಚಿಸಿದ್ದಾರೆ. ಕವನದಲ್ಲಿ 'ಆತ್ಮೀಯ ವ್ಲಾದಿಮಿರ್ ಪುಟಿನ್ ನಾನು ನಿಮ್ಮ ತಾಯಿಯಾಗಲಿಲ್ಲ ಎಂಬುದಕ್ಕೆ ನನಗೆ ತುಂಬಾ ವಿಷಾದವಿದೆ. ನಾನು ನಿಮ್ಮ ತಾಯಿಯಾಗಿದ್ದರೆ, ಜಗತ್ತು ತಣ್ಣಗಾಗಿದ್ದರೆ, ನಿಮ್ಮನ್ನು ಬೆಚ್ಚಗಾಗಿಸಲು ನಾನು ಬೇಕಾದರೆ ಸಾಯುತ್ತಿದ್ದೆ, ನಿಮಗೆ ಜೀವ ನೀಡಲು ನಾನು ಸಾಯುತ್ತಿದ್ದೆ. ಆದರೆ ನಾನು ತುಂಬಾ ತಡವಾಗಿ ಜನಿಸಿದೆ. ಹೀಗಾಗಿ ರಷ್ಯಾದ ನಾಯಕನ ತಾಯಿಯಾಗಲು ಸಾಧ್ಯವಾಗಲಿಲ್ಲ' ಎಂದು ಹೇಳುತ್ತಾರೆ. ವೀಡಿಯೋದ ಉದ್ದಕ್ಕೂ, ಪುಟಿನ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದರೆ ಅವರ ಜೀವನವು ಹೇಗೆ ವಿಭಿನ್ನವಾಗಿರುತ್ತಿತ್ತು ಎಂಬುದರ ಕುರಿತು ಮೆಕ್‌ಕಾರ್ಡ್ ಮಾತನಾಡುತ್ತಾರೆ.
ಯುದ್ಧಕ್ಕೆ ಕರೆ ಕೊಟ್ಟ ಅಧ್ಯಕ್ಷ, ಉಕ್ರೇನ್‌ನ ಒಂದೊಂದೇ ಪ್ರದೇಶ ವಶಕ್ಕೆ ಪಡೆಯುತ್ತಿರುವ ರಷ್ಯಾ
ಈ ವಿಡಿಯೋಗೆ ಕೆಲವರು ಉತ್ತಮ ಪ್ರತಿಕ್ರಿಯೆ ನೀಡಿದ್ದರೆ ತುಂಬಾ ಜನ ಈ ಭಯಾನಕ ಯುದ್ಧ ಆರಂಭವಾದ ನಂತರ ವಿಡಿಯೋ ಪೋಸ್ಟ್ ಮಾಡಿರುವುದಕ್ಕೆ ಟೀಕಿಸಿದ್ದು, ಇದು ಸ್ವಂತ ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಎಂದಿದ್ದಾರೆ. ನಿಮ್ಮ ಈ ವಿಡಿಯೋದಿಂದ ಖಂಡಿತ ಪುಟಿನ್ ಯುದ್ಧ ನಿಲ್ಲಿಸುತ್ತಾರೆ. ನೀವು ತುಂಬಾ ಸ್ಟ್ರಾಂಗ್ ಹಾಗೂ ಧೈರ್ಯವಂತರು ಎಂದು ಟ್ವಿಟರ್ ಬಳಕೆದಾರರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದನ್ನು ಮುಂದಿನ ಬಾರಿ ಕಲ್ಪಿಸಿಕೊಳ್ಳಿ ಎಂದು ತಮಾಷೆ ಮಾಡಿದರು. ನೀವು ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುವುದಾದರೆ ನಿಮ್ಮ ಈ ಪ್ರಾಸಬದ್ಧ ಆಟವನ್ನು ನೀವು ಹೆಚ್ಚಿಸಬೇಕಾಗುತ್ತದೆ. ಇದು ಲಾಲಿ ಬೂಬೂ ಅಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ನಡೆಸಿದ ದಾಳಿಯಿಂದ ಇದುವರೆಗೆ ಕನಿಷ್ಠ 137 ಉಕ್ರೇನಿಯನ್ನರು ಸಾವನ್ನಪ್ಪಿದ್ದಾರೆ. ಎರಡನೇ ವಿಶ್ವಯುದ್ಧದ ನಂತರ ಒಂದು ಯುರೋಪಿಯನ್ ದೇಶದ ಮೇಲೆ ನಡೆಯುತ್ತಿರುವ ಅತೀ ದೊಡ್ಡ ದಾಳಿ ಇದಾಗಿದೆ.
Russia Ukraine Crisis: ವೈದ್ಯಕೀಯ ಶಿಕ್ಷಣಕ್ಕೆ ರಷ್ಯಾ, ಉಕ್ರೇನ್ ತೆರಳುವುದೇಕೆ?
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಘೋಷಣೆಯ ನಂತರ ರಷ್ಯಾ ಗುರುವಾರ ಭೂಮಿ, ವಾಯು ಮತ್ತು ಸಮುದ್ರದ ಮೂಲಕ ತನ್ನ ಆಕ್ರಮಣವನ್ನು ಪ್ರಾರಂಭಿಸಿತು. ಪ್ರಮುಖ ನಗರಗಳಲ್ಲಿ ಸ್ಫೋಟಗಳು ಮತ್ತು ಗುಂಡಿನ ದಾಳಿಯಿಂದಾಗಿ ಅಂದಾಜು 100,000 ಉಕ್ರೇನ್ ನಿವಾಸಿಗಳು ಜೀವ ಉಳಿಸಿಕೊಳ್ಳಲು ಬೇರೆಡೆ ಓಡಿ ಹೋಗಿದ್ದಾರೆ. ಉಕ್ರೇನ್ ರಾಜಧಾನಿ ಕೈವ್ ಅನ್ನು ವಶಪಡಿಸಿಕೊಂಡು ಅಲ್ಲಿನ ಸರ್ಕಾರವನ್ನು ಉರುಳಿಸುವ ಗುರಿಯನ್ನು ರಷ್ಯಾ ಹೊಂದಿದೆ ಎಂದು ಯುಎಸ್ ಮತ್ತು ಉಕ್ರೇನಿಯನ್ ಅಧಿಕಾರಿಗಳು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ