
ಸೋಲ್(ಮೇ.13): ಜಗತ್ತಿನಲ್ಲಿ ಕೋವಿಡ್ ಚೊಚ್ಚಲ ಪ್ರಕರಣ ಪತ್ತೆಯಾದ ಎರಡೂವರೆ ವರ್ಷಗಳ ಬಳಿಕ ತನ್ನಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ಉತ್ತರ ಕೊರಿಯಾ ಘೋಷಣೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಸೋಂಕು ತಡೆಗೆ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದೆ.
ಈ ನಡುವೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮಾಸ್‌್ಕ ಧರಿಸಿ ಲಾಕ್‌ಡೌನ್ ಕುರಿತು ಸಭೆ ನಡೆಸುತ್ತಿರುವ ಫೋಟೋವೊಂದು ಬಿಡುಗಡೆಯಾಗಿದೆ. ಪ್ರಾಯಶಃ ಕಿಮ್ ಮಾಸ್‌್ಕ ಧರಿಸಿದ್ದು ಇದೇ ಮೊದಲು ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಉತ್ತರ ಕೊರಿಯಾದಲ್ಲಿ ಎಷ್ಟುಮಂದಿಗೆ ಸೋಂಕು ಹರಡಿದೆ, ಅದು ಯಾವ ಪ್ರಮಾಣದಲ್ಲಿ ಹಬ್ಬುತ್ತಿದೆ ಎಂಬೆಲ್ಲಾ ವಿವರಗಳು ಲಭ್ಯವಾಗಿಲ್ಲ. ಅಧಿಕೃತ ಸುದ್ದಿಸಂಸ್ಥೆಯ ಮಾಹಿತಿ ಪ್ರಕಾರ, ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಒಂದಷ್ಟುಮಂದಿಗೆ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಒಮಿಕ್ರೋನ್ ರೂಪಾಂತರಿ ಕೊರೋನಾ ಪತ್ತೆಯಾಗಿದೆ.
‘ಉತ್ತರ ಕೊರಿಯಾದಲ್ಲಿ ಆರೋಗ್ಯ ವ್ಯವಸ್ಥೆ ಅತ್ಯಂತ ಕಳಪೆ ಮಟ್ಟದಲ್ಲಿದೆ. 2.6 ಕೋಟಿ ಜನರು ವಾಸಿಸುತ್ತಿರುವ ದೇಶದಲ್ಲಿ ಯಾರೊಬ್ಬರೂ ಲಸಿಕೆ ಪಡೆದಿಲ್ಲ. ಹೀಗಾಗಿ ಕೊರೋನಾ ದೃಢಪಟ್ಟಿದೆ ಎಂದು ಹೇಳುವ ಮೂಲಕ ವಿಶ್ವ ಸಮುದಾಯದ ನೆರವನ್ನು ಉತ್ತರ ಕೊರಿಯಾ ನಿರೀಕ್ಷಿಸುತ್ತಿರಬಹುದು’ ಎಂದು ತಜ್ಞರು ಹೇಳಿದ್ದಾರೆ.
ವಿಶ್ವಸಂಸ್ಥೆ ಬೆಂಬಲಿತ ಕೋವ್ಯಾಕ್ಸ್ ಲಸಿಕೆ ವಿತರಣೆ ವ್ಯವಸ್ಥೆಯಡಿ ಉತ್ತರ ಕೊರಿಯಾಕ್ಕೆ ಲಸಿಕೆ ಒದಗಿಸುವ ಆಫರ್ ನೀಡಲಾಗಿತ್ತಾದರೂ ಆ ದೇಶ ಲಸಿಕೆ ಪಡೆಯಲು ಸ್ಪಷ್ಟವಾಗಿ ನಿರಾಕರಿಸಿತ್ತು.
2019ರಲ್ಲಿ ಮೊದಲ ಕೋವಿಡ್ ಸೋಂಕು ಚೀನಾದಲ್ಲಿ ಪತ್ತೆಯಾಗಿತ್ತು. ಅದು ವಿಶ್ವಾದ್ಯಂತ ಹಬ್ಬಿ ಘೋರ ಅನಾಹುತಗಳನ್ನು ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ಗಡಿಗಳನ್ನು ಬಂದ್ ಮಾಡಿಸಿದ್ದ ಕಿಮ್ ಜಾಂಗ್ ಉನ್, ಯಾರೇ ಗಡಿ ದಾಟಿ ಒಳಪ್ರವೇಶಿಸಲು ಯತ್ನಿಸಿದರೆ ಗುಂಡಿಟ್ಟು ಕೊಲ್ಲಲು ಆದೇಶಿಸಿದ್ದರು. ತನ್ನಲ್ಲಿ ಕೋವಿಡ್ ಪತ್ತೆಯಾಗೇ ಇಲ್ಲ ಎಂದು ವಾದಿಸಿಕೊಂಡು ಆ ದೇಶ ಬಂದಿತ್ತಾದರೂ, ಇದನ್ನು ಬಹುತೇಕ ಮಂದಿ ನಂಬಿರಲಿಲ್ಲ.
ಕೋವಿಡ್ ಎಲ್ಲೆಲ್ಲಿ ಪತ್ತೆ ಇಲ್ಲ?
ಸರ್ವಾಧಿಕಾರಿ ಆಡಳಿತವಿರುವ ತುರ್ಕಮೆನಿಸ್ತಾನ ಕೂಡ ತನ್ನಲ್ಲಿ ಕೋವಿಡ್ ಸೋಂಕು ಪತ್ತೆ ಕುರಿತ ವಿಷಯವನ್ನು ಈವರೆಗೂ ಬಹಿರಂಗಪಡಿಸಿಲ್ಲ. 12 ಸಾವಿರ ಜನಸಂಖ್ಯೆ ಹೊಂದಿರುವ ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪ ದೇಶ ತುವಲು ತನ್ನಲ್ಲಿ ಸೋಂಕು ದೃಢಪಟ್ಟಿಲ್ಲ ಎಂದು ಹೇಳಿಕೊಂಡಿದೆ. ಇದಲ್ಲದೆ ನೌರು, ಮೈಕ್ರೋನೇಸಿಯಾ ಹಾಗೂ ಮಾರ್ಷಲ್ ಐಲ್ಯಾಂಡ್‌ಗಳು ಕೂಡ ಕೋವಿಡ್‌ನಿಂದ ಈವರೆಗೂ ಬಚಾವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ