
ಕಾಠ್ಮಂಡು: ನೇಪಾಳ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ದಂಗೆಯೆದ್ದಿರುವ ಯುವಕರು ತಮ್ಮ ಆರಂಭಿಕ ಬೇಡಿಕೆಯಾಗಿದ್ದ ಪ್ರಧಾನಿ ಕೆ.ಪಿ.ಶರ್ಮಾ ಓಲಿಯವರ ರಾಜೀನಾಮೆ ಬಳಿಕವೂ ಹಲವು ಹೊಸ ಹೊಸ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಅಥವಾ ಸಂವಿಧಾನವನ್ನೇ ಸಂಪೂರ್ಣ ಹೊಸತಾಗಿ ಬರೆಯಬೇಕು ಎಂಬ ಪ್ರಮುಖ ಬೇಡಿಕೆಯ ಜೊತೆಗೆ ಇನ್ನಿತರ ಹಲವು ಬೇಡಿಕೆಗಳ ಜಾರಿಗೆ ಆಗ್ರಹಿಸುತ್ತಿದ್ದಾರೆ.
ನಾಗರಿಕರು, ತಜ್ಞರು ಹಾಗೂ ಯುವಕರ ಸಕ್ರಿಯ ಭಾಗವಹಿಸುವಿಕೆಯುಳ್ಳ ಹೊಸ ಸಂವಿಧಾನವನ್ನು ರಚಿಸಬೇಕು ಅಥವಾ ಸಂವಿಧಾನಕ್ಕೆ ತಿದ್ದುಪಡಿ ತರಬೇಕು, ಜನರ ವಿಶ್ವಾಸ ಕಳೆದುಕೊಂಡಿರುವ ಪ್ರಸಕ್ತ ಸಚಿವ ಸಂಪುಟವನ್ನು ತಕ್ಷಣ ವಿಸರ್ಜಿಸಬೇಕು, ಮಧ್ಯಂತರ ಅವಧಿಯ ನಂತರ ಹೊಸ ಚುನಾವಣೆಗಳನ್ನು ನಡೆಸಬೇಕು ಮತ್ತು ಅವು ಸ್ವತಂತ್ರ, ನ್ಯಾಯಯುತ ಮತ್ತು ನೇರ ಸಾರ್ವಜನಿಕ ಭಾಗವಹಿಸುವಿಕೆಯನ್ನು ಆಧರಿಸಿವೆ ಎಂದು ಖಚಿತಪಡಿಸಿಕೊಳ್ಳಬೇಕು, ನೇರವಾಗಿ ಆಯ್ಕೆಯಾದ ಕಾರ್ಯಕಾರಿ ನಾಯಕತ್ವವನ್ನು ಸ್ಥಾಪಿಸಬೇಕು,
ಕಳೆದ 3 ದಶಕಗಳಿಂದ ರಾಜಕೀಯ ನಾಯಕರು ಲೂಟಿ ಹೊಡೆದಿರುವ ಆಸ್ತಿ ಕುರಿತು ಸಮಗ್ರ ತನಿಖೆ ನಡೆಸಬೇಕು, ಅಕ್ರಮ ಆಸ್ತಿಗಳನ್ನು ರಾಷ್ಟ್ರೀಕೃತಗೊಳಿಸಬೇಕು, ಶಿಕ್ಷಣ, ಆರೋಗ್ಯ, ನ್ಯಾಯ, ಭದ್ರತೆ ಮತ್ತು ಸಂವಹನ ಎಂಬ 5 ಮೂಲಭೂತ ಕ್ಷೇತ್ರಗಳಲ್ಲಿ ರಚನಾತ್ಮಕ ಸುಧಾರಣೆ ತರಬೇಕು ಎಂಬ ಮುಖ್ಯ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ.
ಕರ್ನಾಟಕ ಎಂಟೆಕ್ ಪದವೀಧರ ರೇಸಿಂದ ಔಟ್?
ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಹುದ್ದೆಗೆ ಕರ್ನಾಟಕದ ವಿಶ್ವೇಶ್ವರಯ್ಯ ವಿವಿಯ ಎಂಟೆಕ್ ಪದವೀಧರ ಬಲೇನ್ ಶಾ ಹೆಸರು ಬಲವಾಗಿ ಕೇಳಿಬಂದಿತ್ತು. ಯುವಕರು ನಡೆಸಿದ ಸಭೆಯಲ್ಲಿಯೂ ಅವರ ಪರವಾಗಿಯೇ ಕೂಗು ಕೇಳಿಬಂದಿತ್ತು. ಆದರೆ ಬಲೇನ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದರೂ, ಅವರು ಪ್ರತಿಕ್ರಿಯಿಸದ ಕಾರಣ ಬೇರೆ ಹೆಸರನ್ನು ಆಯ್ಕೆ ಮಾಡಲಾಯಿತು ಎಂದು ಯುವಕರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ