
ಕಾಠ್ಮಂಡು (ಸೆ.09) ನೇಪಾಳದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಕಾರರ ಬೇಡಿಕೆ ಈಡೇರಿದ್ದರೂ ಪ್ರತಿಭಟನೆ, ಹಿಂಸಾಚಾರ ನಿಲ್ಲುತ್ತಿಲ್ಲ. ನೇಪಾಳ ಸೇನೆ ದೇಶದ ಜನತೆಯನ್ನುದ್ದೇಶಿ ಮಹತ್ವದ ಕರೆ ನೀಡಿದೆ. ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಇತ್ತ ನೇಪಾಳದ ಮಾಜಿ ಪ್ರಧಾನಿಗಳು, ಅವರ ಕುಟುಂಬದ ಮೇಲೆ ಹಲ್ಲೆಯಾಗಿದೆ. ಮಾಜಿ ಪ್ರಧಾನಿ ಪತ್ನಿಯನ್ನು ಜೀವಂತ ಸುಡಲಾಗಿದೆ. ನೇಪಾಳ ಸರ್ಕಾರದ ಸಚಿವರನ್ನು ಅಟ್ಟಾಡಿಸಿಕೊಂಡು ಥಳಿಸುತ್ತಿದ್ದಾರೆ. ಈ ಘಟನೆ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ನೇಪಾಳ ಮತ್ತೆ ಹಿಂದೂ ದೇಶ ಎಂದು ಘೋಷಣೆ ಮಾಡಿ ರಾಜರ ಆಡಳಿತ ಮರುಕಳಿಸುತ್ತಾ? ಈ ಮಾತುಗಳು ಬಲವಾಗತೊಡಗಿದೆ.
2008ರ ವರೆಗೆ ನೇಪಾಳ ವಿಶ್ವದ ಏಕೈಕ ಹಿಂದೂ ದೇಶವಾಗಿತ್ತು. ಇಷ್ಟೇ ಅಲ್ಲ 2008ರ ವರೆಗೆ ನೇಪಾಳದಲ್ಲಿ ರಾಜರ ಆಡಳಿತವಿತ್ತು. 240 ವರ್ಷಕ್ಕೂ ಹೆಚ್ಚು ಕಾಲ ನೇಪಾಳದಲ್ಲಿ ರಾಜರ ಆಡಳಿತವಿತ್ತು. ಇದರ ನಡುವೆ ಹಲವು ಪ್ರತಿಭಟನೆ ಹೋರಾಟಗಳು ನಡೆದಿದೆ. ಕೊನೆಗೆ 2008ರಲ್ಲಿ ನೇಪಾಳ ಪ್ರಜಾಪ್ರಭುತ್ವ ದೇಶವಾಗಿ ಬದಲಾಗಿತ್ತು. ಈ ವೇಳೆ ಹಿಂದೂ ದೇಶ ಅನ್ನೋ ಸ್ಥಾನಮಾನ ತೆಗೆದು ಹಾಕಲಾಗಿತ್ತು. ರಾಜ ಆಡಳಿತ, ರಾಜಮನೆತನ ಅಂತ್ಯಗೊಳ್ಳುತ್ತಿದ್ದಂತೆ ರಾಜರ ಕುಟುಂಬ ಛಿದ್ರವಾಗಿತ್ತು. ಹಲವರು ನೇಪಾಳ ತೊರೆದರೆ, ಮತ್ತೆ ಕೆಲವರು ನೇಪಾಳದಲ್ಲಿ ಸಾಮಾನ್ಯ ನಾಗರೀಕರಂತೆ ಜೀವನ ಸಾಗಿಸುತ್ತಿದ್ದಾರೆ. ಇದೀಗ ನೇಪಾಳದಲ್ಲಿ ಮತ್ತೆ ರಾಜರ ಆಡಳಿತ ಬೇಕು ಅನ್ನೋ ಕೂಗು ಜೋರಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಈ ಹೋರಾಟ ನಡೆದಿತ್ತು. ಇದೀಗ ಕೆಪಿ ಶರ್ಮಾ ಒಲಿ ರಾಜೀನಾಮೆಯಿಂದ ಮತ್ತೆ ರಾಜರ ಆಡಳಿತ ಮರುಸ್ಥಾಪನೆಯಾಗಬೇಕು ಅನ್ನೋ ಒತ್ತಾಯ ಕೇಳಿಬರುತ್ತಿದೆ.
ನೇಪಾಳ ಮಾಜಿ ಪ್ರಧಾನಿ ಪತ್ನಿಯನ್ನೇ ಜೀವಂತ ಸುಟ್ಟ ಪ್ರತಿಭಟನಕಾರರು; ವರದಿ
ರಾಜಧಾನಿ ಕಾಠ್ಮಂಡು, ಅರಮನೆಯಿಂದ ದೂರ ಉಳಿದಿದ್ದ ಗ್ಯಾನೇಂದ್ರ ಕುಮಾರ್ ಶಾ ಮಾರ್ಚ್ ತಿಂಗಳಲ್ಲಿ ಮರಳಿದ್ದರು. ಕಾಠ್ಮಂಡುವಿನಲ್ಲಿ ಮಹತ್ವದ ಸಭೆ ನಡೆಸಿದ್ದರು. ಕೆಪಿ ಒಲಿ ಶರ್ಮಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜರ ಆಡಳಿತ, ರಾಜ ಮನೆತನ, ಹಿಂದೂ ರಾಜ್ಯ ಸ್ಥಾಪನೆಯಾಗಬೇಕು. ರಾಜರಿಗೆ ಸುದೀರ್ಘ ಆಯಸ್ಸು ಸಿಗಲಿ ಎಂದು ಘೋಷಣೆ ಕೂಗಲಾಗಿತ್ತು. ರಾಜರೇ ಮತ್ತೆ ಬನ್ನಿ, ನೇಪಾಳ ಉಳಿಸಿ ಎಂಬು ಘೋಷಣೆ ಕೂಗಲಾಗಿತ್ತು. ರಾಜರ ಆಡಳಿತ ಪರ, ಹಿಂದೂ ರಾಜ್ಯದ ಪರ ಹೋರಾಟ ನಡೆದಿತ್ತು. ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಇಬ್ಬರು ಮೃತಪಟ್ಟಿದ್ದರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದೀಗ ನೇಪಾಳದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಯುವ ಸಮೂಹ ಕೆಪಿ ಒಲಿ ಶರ್ಮಾ ಹಾಗೂ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ರಾಜರ ಆಡಳಿತದ ಒತ್ತಾಯ, ಆಗ್ರಹಗಳು ಕೇಳಿಬರುತ್ತಿದೆ. ನೇಪಾಳದ ಬಲಪಂಥೀಯ ಪಕ್ಷ ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ(ಆರ್‌ಪಿಪಿ) ರಾಜರ ಆಡಳಿತಕ್ಕೆ ಬೆಂಬಲ ನೀಡಿದೆ.
2008ರಲ್ಲಿ ರಾಜಮನೆತನ ಅಂತ್ಯಗೊಂಡ ಬಳಿಕ ಅಂದಿನ ರಾಜ ಗ್ಯಾನೇಂದ್ರ ಕುಮಾರ್ ಶಾ, ಇದೀಗ ನೇಪಾಳದಲ್ಲಿ ಪ್ರತ್ಯೇಕವಾಗಿದ್ದಾರೆ. ಅರಮನೆ, ರಾಜ ಕುಟುಂಬದಿಂದ ದೂರ ಉಳಿದಿದ್ದಾರೆ. ಇನ್ನು ತಾಯಿ ಹಾಗೂ ರಾಣಿ ರತ್ನ ಈಗಲೂ ರಾಜರ ಅರಮನೆ ಮಹೇಂದ್ರ ಮಂಜಿಲ್‌ನಲ್ಲಿ ವಾಸವಿದ್ದಾರೆ. ಇನ್ನು ರಾಜ ಕುಟುಂಬದ ಇತರ ಸದಸ್ಯರಾದ ಮಾಜಿ ರಾಜನಾಗಿದ್ದ ಪರಾಸ್ ಹಾಗೂ ರಾಣಿ ಹಿಮಾನಿ ಪುತ್ರಿ ಕೃತಿಕಾ ಶಾ 2008ರಲ್ಲೇ ಕುಟುಂಬ ಸಮೇತ ಸಿಂಗೂಪುರದಲ್ಲಿ ನೆಲೆಸಿದ್ದಾರೆ. ಈಕೆಯ ಹಿರಿಯ ಸಹೋದರಿ, ರಾಣಿ ಪೂರ್ಣಿಕಾ ಶಾ ಕೂಡ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಗ್ಯಾನೇಂದ್ರ ಕಮಾರ್ ಶಾ ಮೊಮ್ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ.
ನೇಪಾಳ ಪ್ರತಿಭಟನೆ ಬೆನ್ನಲ್ಲೇ ಭಾರತ ಅಲರ್ಟ್, ಭಾರತೀಯರಿಗೆ ಮಾರ್ಗಸೂಚಿ ಪ್ರಕಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ