
ಭಾರತದ ನೆರೆಯ ನೇಪಾಳ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ನೇಪಾಳದ ಯುವ ಪ್ರತಿಭಟನಾಕಾರರು ಸರ್ಕಾರವನ್ನೇ ಉರುಳಿಸಿದ್ದಾರೆ. 19 ಜನರು ಹಿಂಸಾಚಾರಕ್ಕೆ ಪ್ರಾಣ ಕಳೆದುಕೊಂಡಿದ್ದು, ಹೋರಾಟದ ಕಿಚ್ಚಿಗೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತನ್ನ ಬಾಗಿಲ ಬಳಿ ನಡೆಯುತ್ತಿರುವ ಇಂತಹ ಕೋಲಾಹಲ ಭಾರತದ ಪಾಲಿಗೂ ಗಂಭೀರ ಎಚ್ಚರಿಕೆಯ ವಿಚಾರವಾಗಿದೆ.
ನೇಪಾಳದ ಯುವ ಜನರು ಒಂದು ಸರಳ ವಿಚಾರದಿಂದ ಆಕ್ರೋಶಗೊಂಡರು. ಅದೇನೆಂದರೆ, ನೇಪಾಳದ ಸರ್ಕಾರ ಆಡಳಿತದೊಡನೆ ನೋಂದಣಿ ನಡೆಸಿರದ ಕಾರಣ ನೀಡಿ, ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಮತ್ತು ಯೂಟ್ಯೂಬ್ ಗಳಂತಹ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ದೇಶದಲ್ಲಿ ನಿಷೇಧಿಸಿತು. ಆದರೆ, ಇಂತಹ ಡಿಜಿಟಲ್ ಹತ್ತಿಕ್ಕುವಿಕೆಯೇ ನೇಪಾಳದ ಹತಾಶ ಯುವ ಜನರ ಆಕ್ರೋಶದ ಕಟ್ಟೆ ಒಡೆಯಲು ಕಾರಣವಾಯಿತು.
ದೇಶದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ, ನಿರುದ್ಯೋಗಗಳಿಂದ ರೋಸಿಹೋಗಿದ್ದ ಜನರೇಶನ್ ಜಿ಼ (Gen Z) ಪ್ರತಿಭಟನಾಕಾರರು ಬದಲಾವಣೆಯನ್ನು ಆಗ್ರಹಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ಸಾಮಾಜಿಕ ಜಾಲತಾಣಗಳ ನಿಷೇಧದ ವಿರುದ್ಧದ ಪ್ರತಿಭಟನೆ ಎಂದು ಆರಂಭಗೊಂಡ ಚಳವಳಿ ಇದ್ದಕ್ಕಿದ್ದಂತೆ ಬೃಹತ್ತಾಗಿ ಸ್ಫೋಟಗೊಂಡಿತು. ಈ ಪ್ರತಿಭಟನೆ ಭ್ರಷ್ಟಾಚಾರ, ನಿರುದ್ಯೋಗ ಮತ್ತು ನೇಪಾಳಿಗರು 'ನೆಪೊ ಕಿಡ್ಸ್' ಎಂದು ಕರೆಯುವ (ಜನ ಸಾಮಾನ್ಯರು ಕಷ್ಟಕರ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಐಷಾರಾಮಿಯಾಗಿ ಬಾಳುತ್ತಿರುವ ರಾಜಕಾರಣಿಗಳ ಮಕ್ಕಳು) ಜನರ ವಿರುದ್ಧದ ರಾಷ್ಟ್ರವ್ಯಾಪಿ ಕ್ರಾಂತಿಯಾಗಿ ರೂಪುಗೊಂಡಿತು.
ಸೋಮವಾರದಂದು ಸಂಸತ್ತಿನತ್ತ ನುಗ್ಗಲು ಪ್ರಯತ್ನ ನಡೆಸಿದ ಪ್ರತಿಭಟನಾಕಾರರತ್ತ ಪೊಲೀಸರು ಗುಂಡು ಹಾರಿಸಿದ ಪರಿಣಾಮವಾಗಿ, ಓರ್ವ 12 ವರ್ಷದ ವಿದ್ಯಾರ್ಥಿ ಸೇರಿದಂತೆ, 19 ಜನರು ಪ್ರಾಣ ಕಳೆದುಕೊಂಡರು. ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಕೈಗೊಂಡ ಈ ಉಗ್ರ ಕ್ರಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.
ಮಂಗಳವಾರದ ವೇಳೆಗೆ, ಆಕ್ರೋಶಗೊಂಡ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗಳತ್ತ ನುಗ್ಗಲು ಆರಂಭಿಸಿ, ಸಂಸತ್ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ನೇಪಾಳದಾದ್ಯಂತ ರಾಜಕೀಯ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದರು. ಇದೊಂದು 'ಅಸಾಧಾರಣ ಸನ್ನಿವೇಶ' ಎಂದು ಕರೆದ ಪ್ರಧಾನ ಮಂತ್ರಿ ಓಲಿ ರಾಜೀನಾಮೆ ಸಲ್ಲಿಸಿದರು. ಇಷ್ಟಾದರೂ ಪ್ರತಿಭಟನಾಕಾರರ ಹಿಂಸಾಚಾರ ಕೊನೆಯಾಗಲಿಲ್ಲ.
ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ರಾಜಕಾರಣಿಗಳನ್ನು ಸೇನಾ ಹೆಲಿಕಾಪ್ಟರ್‌ಗಳು ಸುರಕ್ಷಿತ ಸ್ಥಳಗಳಿಗೆ ರವಾನಿಸಿದವು. ಜಗತ್ತಿಗೆ ಶಾಂತಿಯನ್ನು ಬೋಧಿಸಿದ ಬುದ್ಧನನ್ನು ನೀಡಿದ ನಾಡಾದ ನೇಪಾಳ ಈಗ ಆಕ್ರೋಶದ ಬೆಂಕಿಗೆ ಸಿಲುಕಿ ಉರಿಯುತ್ತಿದೆ.
ಪ್ರತಿಭಟನಾಕಾರರಿಗೆ ಯಾವುದೇ ಸ್ಪಷ್ಟ ನಾಯಕತ್ವ ಇರಲಿಲ್ಲ. ಆದರೆ, ಅವರ ಸಂದೇಶ ಮಾತ್ರ ಅತ್ಯಂತ ಸ್ಪಷ್ಟವಾಗಿತ್ತು. ಯುವ ಪ್ರತಿಭಟನಾಕಾರರಿಗೆ ದೇಶದಲ್ಲಿ ಭ್ರಷ್ಟಾಚಾರ ಕೊನೆಯಾಗಬೇಕು, ಯುವಕರಿಗೆ ಉದ್ಯೋಗ ಲಭಿಸಬೇಕು, ಮತ್ತು ದೇಶ ಬಡತನದಲ್ಲಿ ಸಿಲುಕಿ ಒದ್ದಾಡುತ್ತಿದ್ದಾಗ ಶ್ರೀಮಂತರಾದ, ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ನ್ಯಾಯ ಎದುರಿಸಬೇಕು ಎನ್ನುವುದು ಅವರ ಉದ್ದೇಶವಾಗಿತ್ತು.
ಗಡಿ ಭದ್ರತೆಯ ತಲೆನೋವು: ನೇಪಾಳದ ಘಟನೆಯ ಬೆನ್ನಲ್ಲೇ ಭಾರತ ನೇಪಾಳದ ಜೊತೆಗಿನ ತನ್ನ 1,751 ಕಿಲೋಮೀಟರ್ ಗಡಿಯಾದ್ಯಂತ ಭದ್ರತೆಯನ್ನು ಬಲಪಡಿಸಿದೆ. ಗಡಿ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಈ ಗಡಿಯ ಅತ್ಯಂತ ಉದ್ದನೆಯ ಸಾಲು ಬಿಹಾರದ ಮೂಲಕ ಹಾದು ಹೋಗಿದ್ದು, 726 ಕಿಲೋಮೀಟರ್ ಉದ್ದವಿದೆ. ಇದು ಭಾರತದ ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿ ಮಾರ್ಪಟ್ಟಿದೆ.
ಆರ್ಥಿಕ ಅಡಚಣೆ: ಭಾರತ ಮತ್ತು ನೇಪಾಳದ ಗಡಿಯ ಎಲ್ಲ ಮಾರುಕಟ್ಟೆಗಳೂ ಈಗ ಮೌನವಾಗಿವೆ. ಇದರಿಂದ ಸ್ಥಳೀಯ ಪ್ರದೇಶಗಳಲ್ಲಿ ಆರ್ಥಿಕ ನಿಶ್ಚಲತೆ ಉಂಟಾಗಿದೆ. ಭಾರತ ನೇಪಾಳದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿದ್ದು, 2025ನೇ ಆರ್ಥಿಕ ವರ್ಷದಲ್ಲಿ 7.32 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ನೇಪಾಳಕ್ಕೆ ರಫ್ತು ಮಾಡಿದೆ. ಆದರೆ, ನೇಪಾಳದಿಂದ ಕೇವಲ 1.2 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ವ್ಯಾಪಾರ ಮಾರ್ಗಗಳಲ್ಲಿ ಅಥವಾ ಗಡಿಯಾಚೆಗಿನ ಸಂಚಾರದಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡರೆ, ಅದು ಭಾರತದ ರಫ್ತುದಾರರಿಗೆ ಮತ್ತು ಭಾರತೀಯ ಸರಕುಗಳ ಮೇಲೆ ಅವಲಂಬಿತರಾಗಿರುವ ನೇಪಾಳಿಗರಿಗೆ ಸಮಸ್ಯೆ ಉಂಟುಮಾಡಲಿದೆ.
ವಿಮಾನ ಸಂಚಾರ ವ್ಯತ್ಯಯ: ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್ ಸೇರಿದಂತೆ, ಎಲ್ಲ ಭಾರತೀಯ ವಿಮಾನಯಾನ ಸಂಸ್ಥೆಗಳೂ ನೇಪಾಳಕ್ಕೆ ವಿಮಾನ ಹಾರಾಟವನ್ನು ರದ್ದುಗೊಳಿಸಿವೆ. ಸಾವಿರಾರು ಪ್ರಯಾಣಿಕರು ಈಗ ಪ್ರಯಾಣ ಬೆಳೆಸಲು ಸಾಧ್ಯವಿಲ್ಲದಂತಾಗಿದೆ. ಇದರಿಂದ, ಭಾರತ ಮತ್ತು ನೇಪಾಳ ಎರಡು ದೇಶಗಳಿಗೂ ಮುಖ್ಯವಾದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ.
ಕಾರ್ಯತಂತ್ರದ ಆತಂಕ: ನೇಪಾಳ ಏನಾದರೂ ರಾಜಕೀಯವಾಗಿ ಅಸ್ಥಿರಗೊಂಡರೆ, ಅದು ವಿದೇಶೀ ಶಕ್ತಿಗಳಿಗೆ, ಅದರಲ್ಲೂ ಚೀನಾಗೆ ಒಳ ನುಸುಳಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಚೀನಾ ನೇಪಾಳದ ಮೇಲೆ ತನ್ನ ಪ್ರಭಾವ ಹೆಚ್ಚಿಸಬಹುದು. ಇದು ದಕ್ಷಿಣ ಏಷ್ಯಾದಲ್ಲಿ ಭಾರತ ಸಾಂಪ್ರದಾಯಿಕವಾಗಿ ಹೊಂದಿದ್ದ ಅಧಿಕಾರದ ಸಮತೋಲನವನ್ನು ಹಾಳುಗೆಡವಬಲ್ಲದು.
ಭಾರತದ ವಿದೇಶಾಂಗ ಸಚಿವಾಲಯ ಭಾರತೀಯ ಪ್ರಯಾಣಿಕರಿಗೆ ಸೂಚನೆ ನೀಡಿದೆ. ಭಾರತೀಯರಿಗೆ ನೇಪಾಳಕ್ಕೆ ಪ್ರಯಾಣಿಸುವುದು ಬೇಡ ಎಂದು ಸಲಹೆ ಮಾಡಿದ್ದು, ಈಗಾಗಲೇ ನೇಪಾಳದಲ್ಲಿ ಇರುವ ಭಾರತೀಯರಿಗೆ ಮನೆಗಳಿಂದ ಅಥವಾ ವಸತಿ ತಾಣಗಳಿಂದ ಹೊರ ಬರದಂತೆ ಎಚ್ಚರಿಕೆ ನೀಡಿದೆ. ಕಠ್ಮಂಡುವಿನ ಭಾರತೀಯ ದೂತಾವಾಸ ಕಚೇರಿ ನೆರವಿನ ಅವಶ್ಯಕತೆ ಇರುವ ಭಾರತೀಯರಿಗೆ ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಿದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲ ಪೊಲೀಸ್ ಪಡೆಗಳನ್ನು ಗಡಿ ಜಿಲ್ಲೆಗಳಲ್ಲಿ ನಿಯೋಜಿಸಿ, 24 ಗಂಟೆ ಬಿಗಿ ಪಹರೆ ಏರ್ಪಡಿಸಿದ್ದಾರೆ. ಎಲ್ಲ ಮೀಸಲು ಪಡೆಗಳನ್ನೂ ಸೇವೆಗೆ ನಿಯೋಜಿಸಲಾಗಿದೆ. ಭಾರತದ ಸಂದೇಶ ಸ್ಪಷ್ಟವಾಗಿದ್ದು, ತಾನು ನೇಪಾಳದ ಘಟನೆಯ ಪರಿಣಾಮಗಳಿಗೆ ಒಳಪಡುವುದಿಲ್ಲ ಎಂದು ತೋರಿಸಿದೆ.
ನೇಪಾಳದ ಬಿಕ್ಕಟ್ಟು ದಕ್ಷಿಣ ಏಷ್ಯಾದಲ್ಲಿ ಪರಿಸ್ಥಿತಿ ಎಷ್ಟು ವೇಗವಾಗಿ ಬದಲಾಗಬಹುದು ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. 2008ರಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾದ ನೇಪಾಳ, ಇಲ್ಲಿಯತನಕ 14 ಪ್ರಧಾನ ಮಂತ್ರಿಗಳನ್ನು ಕಂಡಿದೆ. ಆದರೆ, ಈಗಿನ ಹೋರಾಟ ಮತ್ತು ಪ್ರತಿಭಟನೆ ವಿಭಿನ್ನವಾಗಿದೆ. ನೇಪಾಳದಲ್ಲಿ ಯುವಕರ ನಿರುದ್ಯೋಗ ದರ 20% ದಾಟಿದ್ದು, ಪ್ರತಿದಿನವೂ 2,000ಕ್ಕೂ ಹೆಚ್ಚು ಯುವ ನೇಪಾಳಿಗರು ವಿದೇಶಗಳಲ್ಲಿ ಉದ್ಯೋಗ ಅರಸಿ ದೇಶ ಬಿಟ್ಟು ತೆರಳುತ್ತಿದ್ದಾರೆ. ಇದು ದೇಶದಲ್ಲಿ ಆಂತರಿಕ ಕೋಪ ಮಡುಗಟ್ಟುವಂತೆ ಮಾಡಿದೆ.
ಭಾರತಕ್ಕೆ ನೇಪಾಳದ ಅಸ್ಥಿರತೆ ನಿಜಕ್ಕೂ ಆತಂಕದ ವಿಚಾರವಾಗಿದ್ದು, ಇದಕ್ಕೆ ಒಂದಕ್ಕೊಂದು ಮಿಳಿತವಾದ ಆರ್ಥಿಕತೆ ಮತ್ತು ಮುಕ್ತ ಗಡಿ ಮುಖ್ಯ ಕಾರಣವಾಗಿವೆ. ನೇಪಾಳಕ್ಕೆ ಸೀನು ಬಂದರೆ, ಭಾರತಕ್ಕೆ ನೆಗಡಿಯಾಗುತ್ತದೆ! ಈಗಿನ ಪರಿಸ್ಥಿತಿಯಲ್ಲಂತೂ ನೇಪಾಳಕ್ಕೆ ಸುಡು ಜ್ವರವೇ ಬಂದಿದೆ!
ಭಾರತದ ರಕ್ಷಣದ ಆದ್ಯತೆ ನೇಪಾಳದಲ್ಲಿ ಆರಂಭಗೊಂಡಿರುವ ಬಿಕ್ಕಟ್ಟು ಬೇರೆಡೆಗೆ ಹಬ್ಬದಂತೆ ಖಾತ್ರಿ ಪಡಿಸುವುದಾಗಿದ್ದು, ನೇಪಾಳದ ರಾಜಕೀಯ ಪಕ್ಷಗಳು ಒಂದು ಶಾಂತಿಯುತ ಪರಿಹಾರ ಕಂಡುಕೊಳ್ಳಬಹುದು ಎನ್ನುವುದು ಭಾರತದ ನಿರೀಕ್ಷೆಯಾಗಿದೆ. ಆದರೆ ನೇಪಾಳದ ಸಂಸತ್ ಕಟ್ಟಡ ಇನ್ನೂ ಹೊಗೆ ಉಗುಳುತ್ತಿದ್ದು, ಆಕ್ರೋಶಭರಿತ ಯುವ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಶಾಂತಿಯುತ ಪರಿಹಾರ ದೂರದ ಹಾದಿಯಂತೆ ತೋರುತ್ತಿದೆ.
ನೇಪಾಳದ ಜೆನ್ ಜೀ಼ (Gen Z) ಪ್ರತಿಭಟನೆ ಕೇವಲ ಸಾಮಾಜಿಕ ಜಾಲತಾಣಗಳ ನಿಷೇಧ ಅಥವಾ ಭ್ರಷ್ಟಾಚಾರಕ್ಕೆ ಸೀಮಿತವಾಗಿಲ್ಲ. ಇದು ತನ್ನ ನಾಯಕರಲ್ಲಿ ವಿಶ್ವಾಸ ಕಳೆದುಕೊಂಡಿರುವ ಒಂದು ತಲೆಮಾರಿನ ಕಥೆಯೂ ಹೌದು. ಒಂದು ವೇಳೆ ನೆರೆ ರಾಷ್ಟ್ರದ ಈ ಬಿಕ್ಕಟ್ಟನ್ನು ಭಾರತ ಸರಿಯಾಗಿ ನಿರ್ವಹಿಸಿದೆ ಹೋದರೆ, ಇದು ಭಾರತಕ್ಕೂ ತಲೆನೋವಾಗಿ ಪರಿಣಮಿಸಬಹುದು. ಮುಂದಿನ ದಿನಗಳು ಎರಡೂ ದೇಶಗಳ ಬಿಕ್ಕಟ್ಟು ನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ