
ವಾಷಿಂಗ್ಟನ್[ಅ.10]: ಅಮೆರಿಕಾದ ನಾರ್ತ್ ಕ್ಯಾರೊಲಿನಾದ ಸಮುದ್ರದ ನಡುವೆ ಆಗಸದಲ್ಲಿ ರಹಸ್ಯಕಾರಿ ಬೆಳಕು ಕಂಡು ಬಂದಿದೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸೆ. 28 ರಂದು ವಿಲಿಯಮ್ ಗೈ ಹೆಸರಿನ ವ್ಯಕ್ತಿಯೊಬ್ಬ ಯೂ ಟ್ಯೂಬ್ ನಲ್ಲಿ 30 ಸೆಕೆಂಡ್ ಗಳ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ರಿಯಲ್ ಯುಎಫ್ ಒ ಸೈಟಿಂಗ್ ಶೀರ್ಷಿಕೆಯಡಿ ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಆಗಸದಲ್ಲಿ ದೀಪದಂತಿರುವ 14 ಆಕೃತಿ ಕಂಡು ಬಂದಿವೆ. ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ವಿಲಿಯಮ್ ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ವಿಡಿಯೋದಲ್ಲಿ ವಿಲಿಯಮ್ ರವರು ಮಾತನಾಡುತ್ತಿರುವುದೂ ರೆಕಾರ್ಡ್ ಆಗಿದ್ದು, 'ಅದೇನು ಎಂದು ಯಾರಾದರೂ ನನಗೆ ಹೇಳುತ್ತೀರಾ? ನಾವು ಸಮುದ್ರದ ನಡುವೆ ಇದ್ದೇವೆ. ನಮ್ಮ ಆಸುಪಾಸಿನಲ್ಲಿ ಏನೂ ಇಲ್ಲ' ಎಂದಿದ್ದಾರೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಭಾರೀ ವೈರಲ್ ಆಗುತ್ತಿದೆ. ಸದ್ಯ ಈ 14 ಆಕೃತಿಗಳೇನು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರ ವಿಚಿತ್ರ ವದಂತಿಗಳು ಹಬ್ಬಲಾರಂಭಿಸಿವೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ವೀಕ್ಷಕರೊಬ್ಬರು 'ಇದು ಒಂದೇ ಸಮಯದಲ್ಲಿ ಲಾಂಚ್ ಮಾಡಲಾದ ಚೈನಾ ದೀಪಗಳಿರಬಹುದು' ಎಂದಿದ್ದಾರೆ. ಮತ್ತೊಬ್ಬರು 'ಯುಎಫ್ ಒಗಳು ಸಮುದ್ರದ ನೀರು ಹಾಗೂ ಮೋಡಗಳ ನಡುವೆ ಅಡಗಿಕೊಳ್ಳುವುದಕ್ಕೆ ಫೇಮಸ್' ಎಂದಿದ್ದಾರೆ.
ಹೀಗಿರುವಾಗ ಕಮೆಂಟೇಟರ್ ಡೆರಿಕ್ ಶೆನಾಲ್ಡ್ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಈ ಬೆಳಕು ಹೇಗೆ ಬಂತು ಎಂಬುವುದು ನನಗೆ ತಿಳಿದಿದೆ. ಓರ್ವ ಮಾಜಿ ನಾವಿಕನಾಗಿ ಚೆರಿ ಪಾಯಿಂಟ್ ನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನಾವು ನಿಯಮಿತವಾಗಿ ಸೈನ್ಯಾಭ್ಯಾಸಕ್ಕಾಗಿ ಸಂಜೆ ವಿಮಾನದ ಹಿಂದೆ ಫ್ಲೈಯರ್ಸ್ ನ್ನು ಬಿಡುತ್ತಿದ್ದೆವು. ಇವುಗಳಲ್ಲಿ ಒಂದು ಮಿಲಿಯನ್ ಮೇಣದ ಬತ್ತಿಗಳ ಶಕ್ತಿ ಇರುತ್ತದೆ. ಇದರ ಬೆಳಕು ಅದೆಷ್ಟು ಪ್ರಖರವಾಗಿರುತ್ತದೆ ಎಂದರೆ ಬಹಳ ದೂರದಿಂದಲೂ ಇದನ್ನು ನೋಡಬಹುದಾಗಿದೆ. ಇವುಗಳು ಪ್ಯಾರಾಚೂಟ್ ಸಹಾಯದಿಂದ ನಿಧಾನವಾಗಿ ಕೆಳ ಬೀಳುತ್ತವೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ