ಮಿತ್ರ ರಾಷ್ಟ್ರ ಮ್ಯಾನ್ಮಾರ್‌ಗೂ ಚೀನಾ ಕಿರುಕುಳ

By Kannadaprabha NewsFirst Published Jul 3, 2020, 7:38 AM IST
Highlights

‘ಬಲಶಾಲಿ ಶಕ್ತಿಗಳು’ ತಮ್ಮ ದೇಶದ ಕೆಲ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಚೀನಾದ ಹೆಸರು ಹೇಳದೆ ಆಪಾದಿಸಿದ್ದಾರೆ. ಇದನ್ನು ತಡೆಯಲು ಜಾಗತಿಕ ಸಮುದಾಯ ತಮ್ಮ ನೆರವಿಗೆ ಬರಬೇಕು ಎಂದು ಸ್ವತಃ ಮ್ಯಾನ್ಮಾರ್‌ನ ಸೇನಾಪಡೆಯ ಮುಖ್ಯಸ್ಥ ಮಿನ್‌ ಆಂಗ್‌ ಹೇಲಿಯಾಂಗ್‌ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜು.03): ದಕ್ಷಿಣ ಏಷ್ಯಾದಲ್ಲಿ ಚೀನಾದ ಅತ್ಯಂತ ನಿಕಟ ಸ್ನೇಹಿತನಾಗಿರುವ ಮ್ಯಾನ್ಮಾರ್‌ ಕೂಡ ಈಗ ಚೀನಾದ ವಿರುದ್ಧ ತಿರುಗಿನಿಂತಿದೆ. ನೇಪಾಳಕ್ಕೆ ನೆರವು ನೀಡುವ ನೆಪದಲ್ಲಿ ಅಲ್ಲಿನ ಭೂಮಿಯನ್ನೇ ಕಬಳಿಸಿದ ಚೀನಾ ಇದೀಗ ಮ್ಯಾನ್ಮಾರ್‌ನಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುವ ಮೂಲಕ ಮ್ಯಾನ್ಮಾರ್‌ ಸರ್ಕಾರಕ್ಕೆ ಕಿರುಕುಳ ನೀಡಲು ಆರಂಭಿಸಿದೆ.

ಈ ವಿಷಯವನ್ನು ಸ್ವತಃ ಮ್ಯಾನ್ಮಾರ್‌ನ ಸೇನಾಪಡೆಯ ಮುಖ್ಯಸ್ಥ ಮಿನ್‌ ಆಂಗ್‌ ಹೇಲಿಯಾಂಗ್‌ ಅವರೇ ರಷ್ಯಾದ ಟೀವಿ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದು, ‘ಬಲಶಾಲಿ ಶಕ್ತಿಗಳು’ ತಮ್ಮ ದೇಶದ ಕೆಲ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಚೀನಾದ ಹೆಸರು ಹೇಳದೆ ಆಪಾದಿಸಿದ್ದಾರೆ. ಇದನ್ನು ತಡೆಯಲು ಜಾಗತಿಕ ಸಮುದಾಯ ತಮ್ಮ ನೆರವಿಗೆ ಬರಬೇಕು ಎಂದೂ ಕೋರಿದ್ದಾರೆ.

ಚೀನಾ ಮೇಲೆ ಭಾರತದ ರಾಜತಾಂತ್ರಿಕ ‘ದಾಳಿ’

ಮ್ಯಾನ್ಮಾರ್‌ನ ಅರಕನ್‌ ಆರ್ಮಿ ಎಂಬ ಬಂಡುಕೋರ ಸಂಘಟನೆಯ ಬಳಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಮ್ಯಾನ್ಮಾರ್‌ ಜೊತೆಗೆ ‘ಚೀನಾ-ಮ್ಯಾನ್ಮಾರ್‌ ಆರ್ಥಿಕ ಕಾರಿಡಾರ್‌’ ನಿರ್ಮಾಣದ ಕುರಿತು ಒಪ್ಪಂದ ಮಾಡಿಕೊಳ್ಳಲು ಚೀನಾ ಒತ್ತಡ ಹೇರುತ್ತಿದ್ದು, ತನ್ಮೂಲಕ ಮ್ಯಾನ್ಮಾರನ್ನು ತನ್ನ ಸಾಲದಲ್ಲಿ ಕೆಡವಲು ಯತ್ನಿಸುತ್ತಿದೆ. ಈ ಒಪ್ಪಂದ ಏರ್ಪಟ್ಟರೆ ಬಂಗಾಳ ಕೊಲ್ಲಿಗೆ ಹಾಗೂ ಹಿಂದೂ ಮಹಾಸಾಗರದ ಪೂರ್ವ ಭಾಗಕ್ಕೆ ಚೀನಾದ ಪ್ರವೇಶ ಸುಲಭವಾಗುತ್ತದೆ. ಇದು ಭಾರತಕ್ಕೆ ಅಪಾಯಕಾರಿ. ಚೀನಾದ ಈ ಪ್ರಯತ್ನಕ್ಕೆ ಮ್ಯಾನ್ಮಾರ್‌ ಸೊಪ್ಪುಹಾಕುತ್ತಿಲ್ಲ. ಹೀಗಾಗಿ ಮ್ಯಾನ್ಮಾರ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಚೀನಾ ಕುಮ್ಮಕ್ಕು ನೀಡುತ್ತಿದೆ.
 

click me!