Coronavirus:  ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ  ಪ್ರಕರಣ, ಮತ್ತೊಂದು ಎಚ್ಚರಿಕೆ ಕೊಟ್ಟ WHO

By Kannadaprabha News  |  First Published Mar 17, 2022, 5:44 AM IST

*  ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ  ಪ್ರಕರಣ

* ವಿಶ್ವದ ಕೋವಿಡ್‌ ಕೇಸಲ್ಲಿ 8% ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ

*  ಪಶ್ಚಿಮ ಪೆಸಿಫಿಕ್‌ನಲ್ಲಿ ಶೇ.29, ಆಫ್ರಿಕಾದಲ್ಲಿ ಶೇ.12ರಷ್ಟುಹೆಚ್ಚಳ

* ಒಮಿಕ್ರೋನ್‌ ಈಗಳೂ ಪ್ರಬಲ ತಳಿ


ಜಿನೇವಾ(ಮಾ. 17) ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ ಕೋವಿಡ್‌ (Coronavirus)ಪ್ರಕರಣಗಳು ದಾಖಲಾಗಿದ್ದು, ಕೋವಿಡ್‌ ಪ್ರಕರಣಗಳಲ್ಲಿ ಶೇ. 8 ರಷ್ಟುಏರಿಕೆ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಮಾಡಿದೆ.

ಆದರೆ, ಇದೇ ವೇಳೆ ಕೇವಲ 43,000 ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ಸೋಂಕಿನಲ್ಲಿ ಏರಿಕೆಯಾದರೂ ಕೋವಿಡ್‌ ಮರಣದ (Death Rate) ದರ ಶೇ. 17 ರಷ್ಟುಇಳಿಕೆಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

Latest Videos

ಪಶ್ಚಿಮ ಫೆಸಿಪಿಕ್‌ನಲ್ಲಿ ಸೋಂಕು ಶೇ. 29ರಷ್ಟುಹಾಗೂ ಆಫ್ರಿಕಾದಲ್ಲಿ ಶೇ. 12ರಷ್ಟುಏರಿಕೆಯಾಗಿದೆ. ಅದೇ ನೈಋುತ್ಯ ಏಷ್ಯಾದಲ್ಲಿ ಸೋಂಕು ಶೇ. 20ರಷ್ಟುಇಳಿಕೆ ದಾಖಲಿಸಿದೆ. ಕೆಲವು ದಿನಗಳ ಹಿಂದೆ ಸ್ವೀಡನ್‌ ಹಾಗೂ ಬ್ರಿಟನ್‌ ಕೋವಿಡ್‌ ಪರೀಕ್ಷೆ ನಡೆಸುವುದನ್ನೇ ಕೈ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಯುರೋಪಿನಲ್ಲಿ ಶೇ.2ರಷ್ಟುಮಾತ್ರ ಕೋವಿಡ್‌ ಸೋಂಕಿನಲ್ಲಿ ಏರಿಕೆ ದಾಖಲಾಗಿದೆ.

ಜಗತ್ತಿನ ಹಲವಾರು ದೇಶಗಳು ಕಡಿಮೆ ಪ್ರಮಾಣದಲ್ಲಿ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಸೋಂಕಿತರೂ ಪರೀಕ್ಷೆಗೊಳಗಾಗದೇ ಮುಕ್ತವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಕೂಡಾ ಕೋವಿಡ್‌ ಪ್ರಕರಣ ಏರಿಕೆಯಾಗುವುದಕ್ಕೆ ಕಾರಣವಾಗಬಹುದು ಎಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿದೆ.

ಒಮಿಕ್ರೋನ್‌ ಈಗ ಜಗತ್ತಿನ ಪ್ರಬಲ ತಳಿ: ಜಗತ್ತಿನಾದ್ಯಂತ ಒಮಿಕ್ರೋನ್‌ ರೂಪಾಂತರಿ ತೀವ್ರವಾಗಿ ಹರಡುತ್ತಿದ್ದು, ಕಳೆದ ತಿಂಗಳಿನಲ್ಲಿ ನಡೆಸಲಾದ 4 ಲಕ್ಷಕ್ಕೂ ಅಧಿಕ ಕೋವಿಡ್‌ ಪರೀಕ್ಷೆಗಳಲ್ಲಿ ಶೇ. 99.9 ಒಮಿಕ್ರೋನ್‌ ಕೇಸುಗಳು ವರದಿಯಾಗಿವೆ ಎಂದು ವೈರಾಣು ತಜ್ಞೆ ಮರೀನಾ ವಾನ್‌ ಖೆರ್ಕೋವ್‌ ಬುಧವಾರ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಒಮಿಕ್ರೋನ್‌ನ ಬಿ 1 ಹಾಗೂ ಬಿ 2 ಉಪ ತಳಿಗಳು ಜಗತ್ತಿನಲ್ಲಿ ಪ್ರಬಲ ತಳಿಗಳಾಗಿ ಹೊರಹೊಮ್ಮಿವೆ.

ಜಾಗತಿಕವಾಗಿ ಕೋವಿಡ್‌ ಸಂಬಂಧಿ ನಿರ್ಬಂಧಗಳನ್ನು ತೆರವು ಮಾಡಿದ್ದರಿಂದ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ, ಆದರೆ ಲಸಿಕಾಕರಣ ಪ್ರಕ್ರಿಯೆ ಪೂರ್ಣಗೊಳಿಸಿದ ದೇಶಗಳಲ್ಲಿ ಕೋವಿಡ್‌ ಸೋಂಕಿನ ತೀವ್ರತೆ ಹಾಗೂ ಸಾವಿನ ಪ್ರಮಾಣ ಕನಿಷ್ಟವಾಗಿದೆ. ಇದು ಲಸಿಕೆಯ ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ ಎಂದು ಮರೀನಾ ಅಭಿಪ್ರಾಯ ಪಟ್ಟಿದ್ದಾರೆ.

ಚೀನಾದಲ್ಲಿ(China) ಕೋವಿಡ್‌ ಹೆಚ್ಚಳ: ಕೇಂದ್ರದ ಎಚ್ಚರಿಕೆ: ಚೀನಾ, ಪೂರ್ವ ಏಷ್ಯಾ ರಾಷ್ಟ್ರಗಳು ಮತ್ತು ಯುರೋಪ್‌ನಲ್ಲಿ ಕೋವಿಡ್‌ ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕರಾಗಿರುವಂತೆ ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಅನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌ ಹೆಚ್ಚಾಗುತ್ತಿರುವುದರಿಂದ ಉನ್ನತ ಮಟ್ಟದ ಸಭೆ ನಡೆಸಿದ ಮಾಂಡವೀಯ ಅವರು, ಅಂತಾರಾಷ್ಟ್ರೀಯ ವಿಮಾನ ಪುನಾರಂಭ, ಲಸಿಕಾಕರಣದ ಪರಿಸ್ಥಿತಿ ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಮೇಲೆ ಕಣ್ಗಾವಲು ಕುರಿತಾಗಿ ಚರ್ಚೆ ನಡೆಸಿದರು.

Coronavirus:  ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ  ಪ್ರಕರಣ, ಮತ್ತೊಂದು ಎಚ್ಚರಿಕೆ ಕೊಟ್ಟ WHO

‘ಚೀನಾ, ಸಿಂಗಾಪುರ್‌, ಹಾಂಗ್‌ಕಾಂಗ್‌, ವಿಯೆಟ್ನಾಂ ಮತ್ತು ಯುರೋಪಿನ ಕೆಲವು ದೇಶಗಳಲ್ಲಿ ಕೋವಿಡ್‌ ಹೆಚ್ಚಾಗುತ್ತಿದೆ. ಹಾಗಾಗಿ ಜಾಗರೂಕರಾಗಿರಬೇಕು ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಅನ್ನು ಪರಿಣಾಮಕಾರಿಯಾಗಿ ನಡೆಸಬೇಕು’ ಎಂದು ಹೇಳಿದರು.

ಈ ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ಡಾ.ರಾಜೇಶ್‌ ಗೋಖಲೆ, ಏಮ್ಸ್‌ನ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಸೇರಿದಂತೆ ಹಲವು ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.

click me!