* ಉಕ್ರೇನ್‌ನಲ್ಲಿ ರಷ್ಯಾ ದಾಳಿಯ ನೈಜ ಚಿತ್ರಣ ಬಿಚ್ಚಿಟ್ಟರಷ್ಯಾ ಯೋಧ
* ಸಾಮಾನ್ಯ ನಾಗರಿಕರ ಗುರಿಯಾಗಿಸಿ ರಷ್ಯಾ ದಾಳಿ ಬಗ್ಗೆ ಸ್ಪಷ್ಟಮಾಹಿತಿ
ಮಾಸ್ಕೋ(ಮಾ.02): ‘ಅಮ್ಮ ನಾನು ಉಕ್ರೇನ್‌ನಲ್ಲಿದ್ದೇನೆ. ಇಲ್ಲಿ ನಿಜವಾದ ಯುದ್ಧ ನಡೆಯುತ್ತಿದೆ. ನಾವು ಉಕ್ರೇನ್‌ನ ಎಲ್ಲಾ ನಗರಗಳ ಮೇಲೆ ನಾಗರಿಕರನ್ನು ಗುರಿಯಾಗಿಸಿಕೊಂಡು ಬಾಂಬ್ ಹಾಕುತ್ತಿದೇವೆ’ ಎಂದು ರಷ್ಯಾದ ಯೋಧನೊಬ್ಬ ತನ್ನ ತಾಯಿಗೆ ಕಳುಹಿಸಿರುವ ಕಡೆಯ ಮೊಬೈಲ್ ಸಂದೇಶದಲ್ಲಿ ಹೇಳಿದ್ದಾನೆ.
ಏಕೆ ಇಷ್ಟೊತ್ತಾದರೂ ನೀನು ಉತ್ತರಿಸುತ್ತಿಲ್ಲ? ನೀನು ನಿಜಕ್ಕೂ ಸೈನಿಕ ತರಬೇತಿಯಲ್ಲಿದ್ದೀಯಾ? ಎಂದು ಪ್ರಶ್ನಿಸಿರುವ ತಾಯಿಗೆ ಉತ್ತರಿಸಿರುವ ರಷ್ಯಾದ ಸೈನಿಕ, ‘ಅಮ್ಮ! ನಾನು ಈಗ ಕ್ರೆಮಿಯಾದಲ್ಲಿಲ್ಲ. ನಾನು ಸೈನಿಕ ತರಬೇತಿಯಲ್ಲಿಲ್ಲ. ನಾನು ಉಕ್ರೇನ್‌ನಲ್ಲಿದ್ದೇನೆ. ರಷ್ಯಾ ನಡೆಸುತ್ತಿರುವ ನಿಜವಾದ ಯುದ್ಧದಲ್ಲಿ ಭಾಗಿಯಾಗಿದ್ದೇನೆ. ನನಗೆ ಭಯವಾಗುತ್ತಿದೆ. ನಾವು ಎಲ್ಲಾ ನಗರಗಳ ಮೇಲೆ ಬಾಂಬ್ ದಾಳಿ ಮಾಡುತ್ತಿದ್ದೇವೆ. ನಾಗರಿಕರನ್ನೂ ಸಹಾ ಗುರಿಯಾಗಿಸಿ ದಾಳಿ ನಡೆಯುತ್ತಿದೆ. ನಾವು ದಾಳಿ ಆರಂಭಿಸಿದ ನಂತರ ಉಕ್ರೇನ್ ಅವರು ನಮಗೆ ಶರಣಾಗುತ್ತಾರೆ ಎಂದು ಹೇಳಿದ್ದರು. ಆದರೆ ಅವರು ದಾಳಿಗೆ ಸಾಯುತ್ತಿದ್ದಾರೆ. ನಮ್ಮ ಸೇನಾ ವಾಹನಗಳಿಗೆ ಸಿಲುಕಿಕೊಂಡರೂ ನಮ್ಮನ್ನು ಮುಂದೆ ಹೋಗಲು ಬಿಡುತ್ತಿಲ್ಲ’ ಎಂದು ಹೇಳಿದ್ದಾರೆ. ಹೀಗೆ ಸಂದೇಶ ಕಳುಹಿಸಿದ ರಷ್ಯಾ ಯೋಧ ಬಳಿಕ ಉಕ್ರೇನ್ ದಾಳಿಯಲ್ಲಿ ಹತನಾಗಿದ್ದಾನೆ.
ಈ ಸಂದೇಶವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಓದಿದ ಉಕ್ರೇನ್‌ನ ರಾಯಭಾರಿ ಸೆರ್ಗೀಯ್ ಕಿಸ್ಲಿತ್ಸ್ಯಾ, ಉಕ್ರೇನ್‌ನಲ್ಲಿ ಭೀಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲೂ ಉಕ್ರೇನ್-ರಷ್ಯಾ ಸಮರ
ಅತ್ತ ಉಕ್ರೇನ್‌ನಲ್ಲಿ ಕಾದಾಡುತ್ತಿರುವ ರಷ್ಯಾ ಹಾಗೂ ಉಕ್ರೇನ್ ವಿಶ್ವಸಂಸ್ಥೆಯಲ್ಲೂ ಮಾತಿನ ಸಮರ ನಡೆಸಿವೆ. ‘ಉಕ್ರೇನ್ ನ್ಯಾಟೋ ಸೇರಲು ಮುಂದಾಗಿದ್ದೇ ರಷ್ಯಾಗೆ ದಾಳಿ ಮಾಡಲು ಪ್ರಚೋದಿಸಿತು’ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯ ತುರ್ತು ಅಧಿವೇಶನದಲ್ಲಿ ರಷ್ಯಾದ ರಾಯಭಾರಿ ವ್ಯಾಸಿಲಿ ನೆಬೆಂಜಿಯಾ ಖಾರವಾಗಿ ಹೇಳಿದ್ದಾರೆ.
ಇತ್ತ ಉಕ್ರೇನ್ ರಾಯಭಾರಿ ಸರ್ಗೈ ಮಾತನಾಡಿ, ‘ರಷ್ಯಾ ಅಣ್ವಸ್ತ್ರ ಬೆದರಿಕೆ ಹಾಕುತ್ತಿದೆ, ಎಂಥ ಹುಚ್ಚುತನ. ಉಕ್ರೇನ್‌ನ 2 ಭಾಗಗಳ ಮೇಲೆ ಹಿಡಿತ ಸಾಧಿಸುವ ಘೋಷಣೆ ಹಿಂಪಡೆಯುವಂತೆ ರಷ್ಯಾಗೆ ವಿಶ್ವಸಂಸ್ಥೆ ಹೇಳಬೇಕು. ಉಕ್ರೇನ್ ಉಳಿದರೆ ಇಂದು ವಿಶ್ವಸಂಸ್ಥೆ, ಪ್ರಜಾಸತ್ತೆ ಉಳಿದಂತೆ’ ಎಂದಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ರಷ್ಯಾ ರಾಯಭಾರಿ ವ್ಯಾಸಿಲಿ, ‘ರಷ್ಯಾ ಒಕ್ಕೂಟವು ಈ ಶತ್ರುತ್ವವನ್ನು ಆರಂಭಿಸಿಲ್ಲ. ಉಕ್ರೇನ್ ಹಾಗೂ ಜಾರ್ಜಿಯಾ ನ್ಯಾಟೋ ಒಕ್ಕೂಟವನ್ನು ಸೇರಲು ಮುಂದಾಗಿದ್ದವು. ರಷ್ಯಾ ವಿರೋಧಿ ಉಕ್ರೇನ್‌ನನ್ನು ಸೃಷ್ಟಿಸುವ ಯೋಜನೆಯೊಂದಿಗೆ ಅವರು (ಅಮೆರಿಕ) ಉಕ್ರೇನಿಗೆ ನ್ಯಾಟೋ ಸೇರಲು ಪ್ರಚೋದಿಸಿದ್ದಾರೆ. ನ್ಯಾಟೋ ಸೇರಲು ಮುಂದಾಗಿ ಉಕ್ರೇನ್ ಕೆಂಪು ಗೆರೆಯನ್ನು ದಾಟಿದೆ’ ಎಂದು ಕಿಡಿಕಾರಿದರು.
‘ಇದನ್ನು ತಡೆಯಲು ರಷ್ಯಾ ಉಕ್ರೇನ್ ವಿರುದ್ಧ ಕ್ರಮ (ಯುದ್ಧ) ಕೈಗೊಂಡಿದೆ. ಉಕ್ರೇನ್‌ನನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ರಷ್ಯಾ ಹೊಂದಿಲ್ಲ. ರಷ್ಯಾ ಕೂಡಾ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ’ ಎಂದಿದ್ದಾರೆ.