
ನವದೆಹಲಿ(ಮಾ.02): ಯುದ್ಧಪೀಡಿತ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಮರಳಿ ಕರೆತರಲು ಭಾರತ ಸರ್ಕಾರ ನಡೆಸುತ್ತಿರುವ ಆಪರೇಷನ್ ಗಂಗಾ ಕಾರ್ಯಾಚರಣೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಲಿಷ್ಠ ದೇಶಗಳಾದ ಅಮೆರಿಕ, ಬ್ರಿಟನ್, ಚೀನಾ ದೇಶಗಳು ಮಾಡಲಾದ ಸಾಧನೆಯನ್ನು ಭಾರತ ಮಾಡಿದೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ.
ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ನಿಮ್ಮ ತೆರವು ಹೊಣೆ ನಿಮ್ಮದೆ ಎಂದು ಹೇಳಿಕೊಂಡಿದೆ. ಜೊತೆಗೆ ಸಾಕಷ್ಟುಕಷ್ಟಪಟ್ಟು ಉಕ್ರೇನ್‌ನಿಂದ ಪಾರಾಗಲು ನೆರೆಯ ದೇಶಗಳ ಗಡಿಗೆ ಬಂದವರು ಕೂಡಾ ಗಡಿಯಲ್ಲಿ ದೀರ್ಘಕಾಲ ಕಾಯುವ ಪರಿಸ್ಥಿತಿ ಇದೆ. ಕಾರಣ ಅವರಿಗೆ ಅಲ್ಲಿ ರಾಯಭಾರ ಕಚೇರಿಯ ಯಾವುದೇ ನೆರವು ಸಿಗುತ್ತಿಲ್ಲ. ಇನ್ನು ಬ್ರಿಟನ್ ಸಹ ತನ್ನ ಪ್ರಜೆಗಳಿಗೆ ಸರಿಯಾದ ನೆರವು ನೀಡಲಾಗುತ್ತಿಲ್ಲ ಎಂದು ಹೇಳಿಕೊಂಡಿದೆ. ಮತ್ತೊಂದೆಡೆ ಚೀನಾ ತೆರವು ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಜೊತೆಗೆ ಯಾವುದೇ ಪ್ರಯಾಣ ಸಲಹೆ ಮತ್ತು ಬೆಂಬಲ ಕಾರ್ಯವಿಧಾನಗಳನ್ನು ನೀಡಿಲ್ಲ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತ ಸರ್ಕಾರ, ಉಕ್ರೇನ್‌ನ ನಾಲ್ಕು ನೆರೆಯ ದೇಶಗಳಿಂದ ಈಗಾಗಲೇ ತೆರವು ಆರಂಭಿಸಿದೆ. ಹಲವು ಅಧಿಕಾರಿಗಳನ್ನು ರೈಲ್ವೆ ನಿಲ್ದಾಣ, ಗಡಿಗೆ ನಿಯೋಜಿಸಿದೆ. ಜೊತೆಗೆ ಪ್ರತಿ ದಿನವೂ ವಿದ್ಯಾರ್ಥಿಗಳಿಗೆ ಸ್ಥಿತಿಗತಿ ಕುರಿತು ಮುಂಜಾಗ್ರತೆ ನೀಡುವ ಮೂಲಕ ಜೀವರಕ್ಷಣೆಗೆ ನೆರವು ನೀಡುತ್ತಿದೆ ಎಂಬ ಮೆಚ್ಚುಗೆ ಮಾತು ಕೇಳಿಬಂದಿದೆ.
ಹೀಗೆ ನಡೆಯುತ್ತಿದೆ ಆಪರೇಷನ್ ಗಂಗಾ
ಯುದ್ಧಪೀಡಿತ ಉಕ್ರೇನ್‌ನಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಭಾರತ ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಏರ್‌ಲಿಫ್ಟ್ ಕಾರಾರಯಚರಣೆ ಆರಂಭಿಸಿದೆ. ಈ ಪ್ರಕ್ರಿಯೆ ಹೇಗಿರುತ್ತದೆ ಎಂಬ ವಿವರ ಇಲ್ಲಿದೆ.
- ಉಕ್ರೇನ್‌ನೊಂದಿಗೆ ಗಡಿ ಹಂಚಿಕೊಂಡಿರುವ ನಾಲ್ಕು ದೇಶಗಳಿಗೆ ಸ್ಥಳೀಯ ಭಾಷೆ ಬಲ್ಲ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಆಯಾ ದೇಶಗಳ ಅಧಿಕಾರಿಗಳ ಜೊತೆಗಿನ ಸಂವಹನ ಪ್ರಕ್ರಿಯೆ ಸುಲಭ ಮಾಡಲಾಗಿದೆ.
- ರಾಯಭಾರ ಕಚೇರಿ ಅಧಿಕಾರಿಗಳು, ಭಾರತೀಯರು ಹೆಚ್ಚಾಗಿರುವ ಪ್ರದೇಶಗಳಿಗೆ ತೆರಳಿ ಅವರಿಗೆ ಅಲ್ಲಿಂದ ಬಸ್ ಅಥವಾ ರೈಲಿನ ಮೂಲಕ ನೆರೆಯ ದೇಶಗಳ ಗಡಿ ತಲುಪಲು ವ್ಯವಸ್ಥೆ ಮಾಡುತ್ತಿದ್ದಾರೆ.
- ಮತ್ತೊಂದು ತಂಡ ಗಡಿಯಲ್ಲಿ ಬೀಡುಬಿಟ್ಟು, ಬೇರೆ ಬೇರೆ ಪ್ರದೇಶಗಳಿಂದ ಬಂದ ಭಾರತೀಯರನ್ನು ಸ್ವೀಕರಿಸಿ, ಅವರಿಗೆ ವಿಮಾನ ಏರಲು ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.
- ಅಧಿಕಾರಿಗಳ ಜೊತೆಗೆ ಇದೀಗ ಕೇಂದ್ರ ಸಚಿವರಾದ ಹರ್‌ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ವಿ.ಕೆ.ಸಿಂಗ್ ಕೂಡಾ ರೊಮೇನಿಯಾ, ಹಂಗೇರಿ, ಮಾಲ್ಡೋವಾ, ಸ್ಲೋವೇನಿಯಾ, ಪೋಲೆಂಡ್‌ನಲ್ಲಿ ಬೀಡುಬಿಟ್ಟು ಸಮನ್ವಯದ ಕೆಲಸ ಮಾಡುತ್ತಿದ್ದಾರೆ.
ಏರ್‌ಲಿಫ್ಟ್ ವಿಳಂಬ: ವಿಪಕ್ಷಗಳ ಕಟು ಟೀಕೆ
ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಮರಳಿ ಕರೆತರುತ್ತಿರುವ ವಿಚಾರವಾಗಿ ಮತ್ತು ರಷ್ಯಾ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವುದರ ವಿರುದ್ಧ ವಿಪಕ್ಷಗಳ ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬಹಳಷ್ಟುನಾಯಕರು ಭಾರತೀಯರನ್ನು ಸುರಕ್ಷಿತ ಕರೆತರುವ ನಿಟ್ಟಿನಲ್ಲಿ ಸಮರ್ಪಕವಾದ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳವಾರ ಮೃತಪಟ್ಟವಿದ್ಯಾರ್ಥಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ ರಾಹುಲ್ ಗಾಂಧಿ, ನವೀನ್ ಸಾವಿನಿಂದ ದುಃಖವಾಗಿದೆ. ಕೇಂದ್ರ ಸರ್ಕಾರ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಾಧ್ಯವಾದಷ್ಟುಬೇಗೆ ಭಾರತೀಯರನ್ನು ಸರ್ಕಾರ ಸ್ಥಳಾಂತರಿಸಬೇಕು ಎಂದು ಹೇಳಿದ್ದಾರೆ.
ಉಕ್ರೇನನಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸರಿಯಾದ ಸಹಾಯ ದೊರೆಯುತ್ತಿಲ್ಲ. ಇದರ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಭಾರತೀಯರನ್ನು ಸ್ಥಳಾಂತರ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಆದರೆ ಮೋದಿ ಅವರು ಈ ಸ್ಥಳಾಂತರವನ್ನು ಜನರನ್ನು ಮೆಚ್ಚಿಸುವ ಸಲುವಾಗಿ ಮಾಡುತ್ತಿದ್ದಾರೆ. ಎಲ್ಲಾ ಯುದ್ಧಗಳ ಸಮಯದಲ್ಲೂ ಭಾರತ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದೆ. ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ