
ನವದೆಹಲಿ(ಮೇ.26): 13,500 ಕೋಟಿ ರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ದೇಶಭ್ರಷ್ಟಉದ್ಯಮಿ ಮೇಹುಲ್ ಚೋಕ್ಸಿ, ಇದೀಗ ಆ್ಯಂಟಿಗುವಾ ಹಾಗೂ ಬಾರ್ಬುಡಾದಿಂದಲೂ ಪರಾರಿಯಾಗಿದ್ದಾನೆ.
ಪಿಎನ್‌ಬಿ ಹಗರಣ ಬೆಳಕಿಗೆ ಬರುವ ಸುಳಿವು ಸಿಗುತ್ತಲೇ ಭಾರತದಿಂದ ಈತ ಪರಾರಿಯಾಗಿದ್ದ. 2018ರಲ್ಲಿ ಆತ ಆ್ಯಂಟಿಗುವಾ ಹಾಗೂ ಬಾರ್ಬುಡಾದಲ್ಲಿ ನೆಲೆಸಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆ ದೇಶದಿಂದ ಆತನನ್ನು ಗಡಿಪಾರು ಮಾಡಲು ಭಾರತ ಸರ್ಕಾರ ನ್ಯಾಯಾಲಯ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಯತ್ನ ಆರಂಭಿಸಿತ್ತು.
ಅದರ ಬೆನ್ನಲ್ಲೇ ಕಳೆದ ಭಾನುವಾರ ಮನೆಯಿಂದ ಕಾರಿನಲ್ಲಿ ತೆರಳಿದ್ದ ಮೇಹುಲ್ ಬಳಿಕ ನಾಪತ್ತೆಯಾಗಿದ್ದಾನೆ. ಆತನ ಕಾರು ಪತ್ತೆ ಆಗಿದೆಯೇ ವಿನಾ ಚೋಕ್ಸಿ ಪತ್ತೆಯಾಗಿಲ್ಲ ಎಂದು ಆ್ಯಂಟೀಗಾ ಪೊಲೀಸರು ಹೇಳಿದ್ದಾರೆ. ಚೋಕ್ಸಿ ನಾಪತ್ತೆ ಆಗಿದ್ದಾನೆ. ನೋಡಿದವರು ಸುಳಿವು ನೀಡಿ ಎಂದು ಆತನ ಫೋಟೋ ಹಾಕಿ ಭಿತ್ತಿಚಿತ್ರಗಳನ್ನು ಕೂಡ ಪೊಲೀಸರು ಅಂಟಿಸಿದ್ದಾರೆ. ಆತ ಕ್ಯೂಬಾಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಭಾರತದಲ್ಲಿರುವ ಆತನ ವಕೀಲ ವಿಜಯ್ ಅಗರ್‌ವಾಲ್ ಅವರು ಇದನ್ನು ಖಚಿತಪಡಿಸಿದ್ದಾರೆ. ಭಾನುವಾರದಿಂದ ಆತ ಕಾಣೆಯಾಗಿದ್ದಾನೆ. ಆ್ಯಂಟಿಗುವಾ ಆತನಿಗೆ ಶೋಧಕಾರ‍್ಯ ಆರಂಭಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
62 ವರ್ಷದ ಮೇಹುಲ್ ಚೋಕ್ಸಿ ಹಾಗೂ ಆತನ ಬಂಧು ನೀರವ್ ಮೋದಿ 2018ರಲ್ಲೇ ಭಾರತದಿಂದ ಪರಾರಿ ಆಗಿದ್ದರು. ಚೋಕ್ಸಿ ಆ್ಯಂಟಿಗುವಾದಲ್ಲಿ ಆಶ್ರಯ ಪಡೆದಿದ್ದರೆ, ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಲಾಗಿತ್ತು.
ಇಂಟರ್‌ಪೋಲ್‌ಗೆ ಸೂಚನೆ: ಈ ನಡುವೆ ಪಿಎನ್‌ಬಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಮೇಹುಲ್ ಚೋಕ್ಸಿ ಪರಾರಿ ವಿಷಯವನ್ನು ಇಂಟರ್‌ಪೋಲ್ ಗಮನಕ್ಕೆ ತಂದಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ