ವಾಷಿಂಗನ್ : ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಜೋಹ್ರಾನ್ ಮಮ್ದಾನಿ ಅವರು ತಮ್ಮ ರಾಜಕೀಯ ವೈರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಶುಕ್ರವಾರ ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದ್ದಾರೆ. ‘ಇದು ಅತ್ಯುತ್ತಮ, ಅದ್ಭುತ ಸಭೆಯಾಗಿತ್ತು. ಈ ಭೇಟಿಯನ್ನು ಆನಂದಿಸಿದೆ. ಅಮೆರಿಕದ ಹಿತ ಕಾಯಲು ನಾವು ಕೆಲವು ಸಾಮಾನ್ಯ ದೃಷ್ಟಿಕೋನ ಹೊಂದಿದ್ದೇವೆ. ಪರಸ್ಪರ ಒಟ್ಟಾಗಿ ಅಭಿವೃದ್ಧಿಗಾಗಿ ಕೆಲಸ ಮಾಡೋಣ’ ಎಂದು ಟ್ರಂಪ್ ಈ ವೇಳೆ ಹೇಳಿದ್ದಾರೆ.
ಮೇಯರ್ ಚುನಾವಣೆ ವೇಳೆ ಟ್ರಂಪ್ ಹಾಗೂ ಮಮ್ದಾನಿ ನಡುವೆ ಭಾರಿ ವಾಕ್ಸಮರ ನಡೆದಿತ್ತು. ಟ್ರಂಪ್ ಬಲಪಂಥೀಯರಾದರೆ ಮಮ್ದಾನಿ ಎಡಪಂಥೀಯ ವ್ಯಕ್ತಿ. ಇದು ವೈಮನಸ್ಯಕ್ಕೆ ನಾಂದಿ ಹಾಡಿತ್ತು. ಆದರೆ ಈಗ ಚುನಾವಣೆ ಮುಗಿದ ನಂತರ ಇಬ್ಬರೂ ಸೌಹಾರ್ದದ ಭೇಟಿ ಆಗಿರುವುದು ಅನೇಕರ ಹುಬ್ಬೇರಿಸಿದೆ.
ಇದಲ್ಲದೆ ತಮ್ಮನ್ನು ಫ್ಯಾಸಿಸ್ಟ್ ಎಂದು ಮಮ್ದಾನಿ ಕರೆದಿದ್ದ ಬಗ್ಗೆ ಅವರ ಎದುರೇ ಪ್ರತಿಕ್ರಿಯೆ ನೀಡಿದ ಟ್ರಂಪ್, ‘ಚುನಾವಣೆ ವೇಳೆ ಹೀಗೆಲ್ಲ ಆಗುತ್ತದೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ’ ಎಂದು ನಗೆಗಡಲಿನ ಮಧ್ಯೆ ಹೇಳಿ ಸ್ನೇಹಹಸ್ತ ಚಾಚಿದ್ದಾರೆ.
ನವದೆಹಲಿ : ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ವಿರೋಧಿಯಾದ ನ್ಯೂಯಾರ್ಕ್ ಮೇಯರ್ ಮಮ್ದಾನಿ ಅವರ ನಡುವೆ ನಡೆದ ಸ್ನೇಹಪರ ಭೇಟಿಯನ್ನು ಕೊಂಡಾಡಿದ್ದಾರೆ. ಇದಲ್ಲದೆ ಇದನ್ನು ಭಾರತದ ರಾಜಕೀಯಕ್ಕೆ ಸಮೀಕರಿಸಿ ಭಾರತದ ರಾಜಕಾರಣಿಗಳು ಇದನ್ನು ಕಲಿಯಬೇಕು ಎಂದು ಕರೆ ನೀಡಿದ್ದಾರೆ.
ತರೂರ್ ಯಾರನ್ನು ಉದ್ದೇಶಿಸಿ ಈ ಟ್ವೀಟ್ ಮಾಡಿದ್ದಾರೆ ಎಂದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ‘ರಾಹುಲ್ ಗಾಂಧಿಗೆ ಹೇಳಿ’ ಎಂದು ತರೂರ್‌ಗೆ ಬಿಜೆಪಿ ಕಿಚಾಯಿಸಿದೆ.ಮಮ್ದಾನಿ-ಟ್ರಂಪ್ ಭೇಟಿಯನ್ನು ಶ್ಲಾಘಿಸಿರುವ ತರೂರ್, ‘ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಹೋರಾಡಬೇಕು. ಆದರೆ ಅದು ಮುಗಿದ ನಂತರ ರಾಷ್ಟ್ರದ ಸಾಮಾನ್ಯ ಹಿತಾಸಕ್ತಿ ರಕ್ಷಿಸಲು ಒಂದಾಗಬೇಕು. ಭಾರತದಲ್ಲಿ ಇದನ್ನು ಇನ್ನಷ್ಟು ನೋಡಲು ನಾನು ಇಷ್ಟಪಡುತ್ತೇನೆ ಮತ್ತು ನಾನು ನನ್ನ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ