
ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಎಂಬ ಗಾದೆ ಮಾತಿದೆ. ಅದೇ ರೀತಿ ಇಲ್ಲೊಬ್ಬ ಮಗ ಹಣಕ್ಕಾಗಿ ಸತ್ತ ಅಮ್ಮನನ್ನೇ ಜೀವಂತವಾಗಿಸಿದ್ದಾನೆ..! ಹೌದು ಇಂತಹ ವಿಚಿತ್ರ ಘಟನೆ ನಡೆದಿರೋದು ಇಟಲಿಯಲ್ಲಿ. ಉತ್ತರ ಇಟಲಿಯ 56 ವರ್ಷದ ವ್ಯಕ್ತಿಯೊಬ್ಬ ಕೆಲವು ವರ್ಷಗಳ ಹಿಂದೆಯೇ ನಿಧನರಾದ ತನ್ನ ತಾಯಿಯ ಹೆಸರಿನಲ್ಲಿ ಬರುವ ಪಿಂಚಣಿ ಹಣವನ್ನು ಪಡೆಯುವುದಕ್ಕಾಗಿ ಆತ ಆಕೆಯಂತೆ ವೇಷ ಧರಿಸಿದ್ದಾನೆ. ಈ ಮೂಲಕ ಆತ ಸಾವಿರಾರು ಯುರೋಗಳಷ್ಟು ಮೌಲ್ಯದ ವಾರ್ಷಿಕ ಪಿಂಚಣಿಯನ್ನು ಪಡೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ದಿ ಗಾರ್ಡಿಯನ್ ವರದಿಯ ಪ್ರಕಾರ, ಮಾಂಟುವಾ ಬಳಿಯ ಬೊರ್ಗೊ ವರ್ಜಿಲಿಯೊ ನಿವಾಸಿಯೋರ್ವ ಈ ಕೃತ್ಯವೆಸಗಿದವ. ಆತ 2022ರಲ್ಲಿ ಮೃತರಾದ ತನ್ನ ತಾಯಿಯ ಸಾವನ್ನು ವರದಿ ಮಾಡುವ ಬದಲು ಆಕೆಯ ಶವವನ್ನು ಮನೆಯಲ್ಲಿ ಅಡಗಿಸಿಟ್ಟುಕೊಂಡು ಆಕೆಗೆ ಬರುತ್ತಿದ್ದ ಎಲ್ಲಾ ಪಿಂಚಣಿ ಹಣವನ್ನು ಈತ ಬಳಸಿಕೊಳ್ಳುತ್ತಿದ್ದ ಎಂದು ವರದಿಯಾಗಿದೆ .
ಆದರೆ ಮೃತ ಮಹಿಳೆಯ ಗುರುತಿನ ಚೀಟಿ ಅವಧಿ ಮುಗಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೆ ಗುರುತಿನ ಚೀಟಿ ಪಡೆಯುವುದಕ್ಕಾಗಿ ಈ ಕಿಲಾಡಿ ಮಗ ತನ್ನ ತಾಯಿಯಂತೆ ಕಾಣಲು ಮೇಕಪ್, ವಿಗ್ ಮತ್ತು ಮಹಿಳೆಯರ ಬಟ್ಟೆಗಳನ್ನು ಧರಿಸಿದ್ದನೆಂದು ವರದಿಯಾಗಿದೆ. ಪುರಸಭೆಯ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ಈ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳು ಈಗಾಗಲೇ ಮೃತಪಟ್ಟಿರುವ ನಿಜವಾದ ಮಹಿಳೆಯ ಫೋಟೋವನ್ನು ಅವಳಂತೆ ನಟಿಸಿಕೊಂಡು ಬಂದ ಪುರುಷನೊಂದಿಗೆ ಹೋಲಿಸಿದರು. ನಂತರ ಅನುಮಾನಗೊಂಡು ಅಧಿಕಾರಿಗಳು ಆತನ ಮನೆಗೆ ಹೋದಾಗ ತಾಯಿಯ ಶವವನ್ನು ಲಾಂಡ್ರಿ ಕೋಣೆಯಲ್ಲಿ ಮರೆ ಮಾಡಿರುವುದು ಬೆಳಕಿಗೆ ಬಂದಿದೆ.
ಲಿಪ್‌ಸ್ಟಿಕ್ ನೇಲ್ ಪಾಲಿಸ್ ಹೆಣ್ಣಿನಂತೆ ವಾಯ್ಸ್:
ಘಟನೆಗೆ ಸಂಬಂಧಿಸಿದಂತೆ ಬೊರ್ಗೊ ವರ್ಜಿಲಿಯೊದ ಮೇಯರ್ ಫ್ರಾನ್ಸೆಸ್ಕೊ ಅಪೋರ್ಟಿ ಮಾತನಾಡಿ, ಆ ವ್ಯಕ್ತಿ ವೃದ್ಧ ಮಹಿಳೆಯಂತೆ ಉಡುಗೆ ತೊಟ್ಟು ಕೌನ್ಸಿಲ್ ಕಚೇರಿಗೆ ಹೋಗಿದ್ದರು. ಅವರು ಲಿಪ್ಸ್ಟಿಕ್, ಉಗುರುಗಳಿಗೆ ನೈಲ್ ಪಾಲಿಸ್, ಆಭರಣಗಳು ಮತ್ತು ಹಳೆಯ ಶೈಲಿಯ ಕಿವಿಯೋಲೆಗಳನ್ನು ಧರಿಸಿದ್ದರು ಮತ್ತು ಗಾಢ ಕಂದು ಬಣ್ಣದ ವಿಗ್ ಹೊಂದಿದ್ದರು ಎಂದು ಅವರು ಹೇಳಿದ್ದಾರೆ. ಆ ವ್ಯಕ್ತಿ ಮಹಿಳೆಯ ಸ್ವರವನ್ನು ಅನುಕರಿಸಲು ಪ್ರಯತ್ನಿಸಿದರು. ಆದರೆ ಸಾಂದರ್ಭಿಕವಾಗಿ ಕೆಲವು ಪುರುಷ ಸ್ವರಗಳು ಬರುತ್ತಿದ್ದವು. ಈ ವೇಳೆ ಕೌನ್ಸಿಲ್ ಕೆಲಸಗಾರನೊಬ್ಬ ಅವನ ಕುತ್ತಿಗೆ ತುಂಬಾ ದಪ್ಪವಾಗಿ ಕಾಣುತ್ತಿರುವುದನ್ನು, ಅವನ ಸುಕ್ಕುಗಳು ವಿಚಿತ್ರವಾಗಿ ಕಾಣುತ್ತಿದ್ದವು, ಅವನ ಕೈಗಳ ಮೇಲಿನ ಚರ್ಮವು 85 ವರ್ಷ ವಯಸ್ಸಿನ ಮಹಿಳೆಯಂತೆ ಕಾಣುತ್ತಿಲ್ಲ ಎಂಬುದನ್ನು ಗಮನಿಸಿದರು ಎಂದು ಅವರು ಹೇಳಿದ್ದಾರೆ.
ವರದಿಗಳ ಪ್ರಕಾರ ಆ ವ್ಯಕ್ತಿ ನಿರುದ್ಯೋಗಿ ನರ್ಸ್ ಆಗಿದ್ದು, ತನ್ನ ತಾಯಿಯ ಪಿಂಚಣಿ ಮತ್ತು ಮೂರು ಆಸ್ತಿಗಳಿಂದ ಬರುವ ಆದಾಯವನ್ನು ಬಳಸಿಕೊಂಡು ವರ್ಷಕ್ಕೆ ಸುಮಾರು $61,000 ಡಾಲರ್ ಅಂದರೆ ಸುಮಾರು ರೂ. 50 ಲಕ್ಷ ರೂ ಗಳಿಸುತ್ತಿದ್ದ. ಅಧಿಕಾರಿಗಳು ಹೇಳುವಂತೆ ಆ ವ್ಯಕ್ತಿ ತನ್ನ ತಾಯಿಯಂತೆ ವೇಷ ಧರಿಸಿದ್ದು, ಡೌಟ್‌ಫೈರ್ ಸಿನಿಮಾದಂತೆ ಈತನ ಕತೆ ಇದೆ ಆ ಸಿನಿಮಾದಲ್ಲಿ ರಾಬಿನ್ ವಿಲಿಯಮ್ಸ್ ಎಂಬ ಪಾತ್ರವು ಮಹಿಳೆಯ ವೇಷ ಧರಿಸುತ್ತದೆ.
ಈ ವ್ಯಕ್ತಿಯ ತಾಯಿ ಬಹುಶಃ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿರಬಹುದು, ಮರಣೋತ್ತರ ಪರೀಕ್ಷೆಯಿಂದ ಇದು ದೃಢವಾಗುತ್ತದೆ. ಇದು ತುಂಬಾ ವಿಚಿತ್ರವಾದ ಹಾಗೂ ತುಂಬಾ ದುಃಖಕರ ಘಟನೆಯಾಗಿದೆ ಎಂದು ಮೇಯರ್ ಹೇಳಿದ್ದಾರೆ. ತಾಯಿಯ ದೇಹವನ್ನು ಮರೆ ಮಾಡುವುದು, ರಾಜ್ಯದ ವಿರುದ್ಧ ವಂಚನೆ ಮಾಡುವುದು, ಅಧಿಕೃತ ದಾಖಲೆಗಳನ್ನು ನಕಲಿ ಮಾಡುವುದು, ಬೇರೊಬ್ಬರಂತೆ ನಟಿಸುವುದು ಸೇರಿದಂತೆ ಆತ ಈಗ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನ ತಾಯಿಯ ದೇಹ ಕೊಳೆಯದಂತೆ ತಡೆಯಲು ಸಿರಿಂಜ್ ಬಳಸಿ ದೇಹದಿಂದ ದ್ರವಗಳನ್ನು ಹೊರತೆಗೆದ ಆರೋಪವೂ ಆತನ ಮೇಲಿದೆ. ಅವಳು ಹೇಗೆ ಸತ್ತಳು ಎಂಬುದನ್ನು ಕಂಡುಹಿಡಿಯಲು ಶವಪರೀಕ್ಷೆಗೆ ಆದೇಶಿಸಲಾಗಿದೆ. ಪ್ರಸ್ತುತ ಆತನ ತಾಯಿಯ ಸಾವು ಹೇಗೆ ಸಂಭವಿಸಿರಬಹುದು ಎಂದು ತಿಳಿದುಕೊಳ್ಳಲು ಅಧಿಕಾರಿಗಳು ಶವಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಆತನನ್ನು ಜೈಲಿಗಟ್ಟಲಾಗಿದೆ.
ಇದನ್ನೂ ಓದಿ: ಬಾಸ್ಕೆಟ್‌ಬಾಲ್ ಕಂಬವಾಯ್ತು ಯಮಪಾಶ: ಯುವ ಆಟಗಾರ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ