
ವಿಶ್ವಪ್ರಸಿದ್ಧ ಅಮೆರಿಕನ್ ಮಾಡೆಲ್, ರಿಯಾಲಿಟಿ ಟಿವಿ ತಾರೆ ಹಾಗೂ ಉದ್ಯಮಿ ಕಿಮ್ ಕರ್ದಾಶಿಯನ್ ಅವರಿಗೆ ಫ್ರಾನ್ಸ್‌ನ ಪ್ಯಾರಿಸ್ ನ್ಯಾಯಾಲಯವು ಕೇವಲ ಒಂದು ಯೂರೋ ಪರಿಹಾರ ನೀಡುವಂತೆ ಆದೇಶಿಸಿದೆ. ಪ್ರಸ್ತುತ ಭಾರತೀಯ ರೂಪಾಯಿ ಮೌಲ್ಯದಲ್ಲಿ ಒಂದು ಯೂರೋ ಎಂದರೆ ಸುಮಾರು 109 ರೂಪಾಯಿಗಳು. 1 ಸಾವಿರ ಕೋಟಿ ರೂಪಾಯಿ ಆಸ್ತಿಯೊಡತಿಯಾಗಿರುವ ಜಾಗತಿಕ ಗ್ಲಾಮರ್ ಐಕಾನ್‌ಗೆ ಕೇವಲ ₹109 ಪರಿಹಾರವೇ ಎಂಬ ಆಶ್ಚರ್ಯ ಮೂಡುವುದು ಸಹಜ. ಮೇಲ್ನೋಟಕ್ಕೆ ಇದು ಅವರಿಗೆ ನಡೆದ ಅವಮಾನದಂತೆ ಕಂಡರೂ, ಈ ವಿಚಿತ್ರ ಹಾಗೂ ಅಪರೂಪದ ತೀರ್ಪಿನ ಹಿಂದೆ ಸತ್ಯವಾದ ಕಾನೂನು ಕಾರಣವೊಂದಿದೆ.
ಈ ಪ್ರಕರಣಕ್ಕೆ ಮೂಲ ಕಾರಣವಾಗಿದ್ದು 2016ರ ಅಕ್ಟೋಬರ್ 2ರಂದು ನಡೆದ ಭೀಕರ ಘಟನೆ. ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಲು ಆಗಮಿಸಿದ್ದ ಕಿಮ್ ಕರ್ದಾಶಿಯನ್, ನಗರದ ಐಷಾರಾಮಿ 'ಹೋಟೆಲ್ ಡಿ ಪೋರ್ಟಾಲೆಸ್'ನಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ಪೋಲಿಸ್ ಸಮವಸ್ತ್ರದಲ್ಲಿ ಬಂದ ಸಶಸ್ತ್ರ ದರೋಡೆಕೋರರ ತಂಡವೊಂದು ಕಿಮ್ ತಂಗಿದ್ದ ಕೊಠಡಿಗೆ ದಿಢೀರ್ ನುಗ್ಗಿತ್ತು. ಕಿಮ್ ಅವರ ಮೇಲೆ ಬಂದೂಕು ತೋರಿಸಿ, ಪ್ಲಾಸ್ಟಿಕ್ ಜಿಪ್ ಟೈ ಮತ್ತು ಟೇಪ್‌ಗಳಿಂದ ಅವರ ಕೈಕಾಲುಗಳನ್ನು ಕಟ್ಟಿಹಾಕಿದ ದರೋಡೆಕೋರರು, ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಇದರಲ್ಲಿ ಘಟನೆಗೂ ಮುನ್ನ ಗಿವೆಂಚಿ ಫ್ಯಾಷನ್ ಪ್ರದರ್ಶನದಲ್ಲಿ ಕಿಮ್ ಧರಿಸಿದ್ದ ಅತ್ಯಂತ ಬೆಲೆಬಾಳುವ ವಜ್ರದ ಉಂಗುರವೂ ಸೇರಿತ್ತು. ದೋಚಲಾದ ಒಟ್ಟು ಆಭರಣಗಳ ಮೌಲ್ಯ ಸುಮಾರು ₹50 ಕೋಟಿಗೂ ಹೆಚ್ಚು ಅಧಿಕವಾಗಿತ್ತು. ಈ ದಾಳಿಯನ್ನು ಕಿಮ್ ಕರ್ದಾಶಿಯನ್ ತಮ್ಮ ಜೀವನದ ಅತ್ಯಂತ ಭಯಾನಕ ಅನುಭವ ಎಂದು ಬಣ್ಣಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ ಪ್ಯಾರಿಸ್ ಪೊಲೀಸರಿಗೆ ಆಘಾತಕಾರಿ ಸತ್ಯವೊಂದು ತಿಳಿದುಬಂದಿತ್ತು. ಈ ದರೋಡೆ ನಡೆಸಿದ ತಂಡದಲ್ಲಿದ್ದ ಹೆಚ್ಚಿನ ಆರೋಪಿಗಳು ಹಿರಿಯ ನಾಗರಿಕರಾಗಿದ್ದರು. ವಿಚಾರಣೆ ಎದುರಿಸಿದ ಆರೋಪಿಗಳಲ್ಲಿ ಆರು ಮಂದಿ 60 ರಿಂದ 70 ರ ವಯೋಮಾನದವರಾಗಿದ್ದರು. ಹಿರಿಯ ವಯಸ್ಸಿನವರಾಗಿದ್ದೂ ಇಂತಹ ಬೃಹತ್ ದರೋಡೆ ನಡೆಸಿದ್ದರಿಂದ, ಫ್ರೆಂಚ್ ಮಾಧ್ಯಮಗಳು ಈ ಪಡೆಗೆ 'ಲೆಸ್ ಪಾಪಿಸ್ ಬ್ರಾಕರ್ಸ್' (Les Papis Braqueurs) ಅಂದರೆ ಅಜ್ಜಂದಿರ ದರೋಡೆಕೋರರು ಎಂದೇ ನಾಮಕರಣ ಮಾಡಿದ್ದವು. ಅಂತಿಮವಾಗಿ ಪ್ರಕರಣದಲ್ಲಿ ಎಂಟು ಮಂದಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಬಂದೂಕಿನ ತುದಿಯಲ್ಲಿ ನಡೆದ ಈ ಭೀಕರ ದರೋಡೆಯು ಕಿಮ್ ಕರ್ದಾಶಿಯನ್ ಮತ್ತು ಅವರ ಜೊತೆಗಿದ್ದ ಸ್ಟೈಲಿಸ್ಟ್ ಸಿಮೋನ್ ಹಾರೋಶ್ ಅವರ ಮೇಲೆ ತೀವ್ರ ಮಾನಸಿಕ ಆಘಾತವನ್ನು ಉಂಟುಮಾಡಿತ್ತು. ಆದರೆ, ಈಗಾಗಲೇ ಅಪಾರ ಸಂಪತ್ತನ್ನು ಹೊಂದಿರುವ ಕಿಮ್ ಅವರಿಗೆ ದರೋಡೆಕೋರರಿಂದ ಹಣಗಳಿಸುವ ಉದ್ದೇಶವಿರಲಿಲ್ಲ. ಬದಲಿಗೆ, ತಮಗಾದ ಮಾನಸಿಕ ಕಿರುಕುಳ ಮತ್ತು ಆಘಾತಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಂಕೇತಿಕವಾಗಿ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ, ನನಗೆ ಕೇವಲ ಸಾಂಕೇತಿಕವಾಗಿ ಒಂದು ಯೂರೋ ಪರಿಹಾರ ನೀಡಿದರೆ ಸಾಕು ಎಂದು ಅವರು ಪ್ಯಾರಿಸ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
ಕಿಮ್ ಕರ್ದಾಶಿಯನ್ ಮತ್ತು ಸಿಮೋನ್ ಹಾರೋಶ್ ಅವರ ಮನವಿಯನ್ನು ಆಲಿಸಿದ ನ್ಯಾಯಾಲಯವು, ಇಬ್ಬರಿಗೂ ತಲಾ ಒಂದು ಯೂರೋ (ಸುಮಾರು ₹109) ಪರಿಹಾರ ನೀಡುವಂತೆ ಆದೇಶಿಸಿದೆ. ತೀರ್ಪಿನ ನಂತರ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಜಂಟಿ ಹೇಳಿಕೆಯಲ್ಲಿ ಕಿಮ್ ಮತ್ತು ಸಿಮೋನ್, ಈ ಆಘಾತಕಾರಿ ಘಟನೆಯ ನೋವು ಇಂದಿಗೂ ನಮ್ಮನ್ನು ಕಾಡುತ್ತಿದೆ. ಇಂದಿನ ನಿರ್ಧಾರವು ಹಣಕಾಸಿನ ಪರಿಹಾರಕ್ಕಾಗಿ ಅಲ್ಲ, ಬದಲಿಗೆ ತಪ್ಪಿತಸ್ಥರ ಹೊಣೆಗಾರಿಕೆ ಮತ್ತು ನಮಗಾದ ಆಘಾತದ ಅಧಿಕೃತ ಸ್ವೀಕೃತಿಗಾಗಿ. ನಮಗೆ ಬೆಂಬಲ ನೀಡಿದ ನ್ಯಾಯಾಲಯಕ್ಕೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ಇದೇ ಘಟನೆಯಲ್ಲಿ ಬಂದೂಕಿನ ತುದಿಯಲ್ಲಿ ಬೆದರಿಕೆಗೆ ಒಳಗಾಗಿ ದರೋಡೆಕೋರರನ್ನು ಕಿಮ್ ಅವರ ಕೊಠಡಿಗೆ ಕರೆದೊಯ್ಯಲು ನಿರ್ಬಂಧಿಸಲ್ಪಟ್ಟಿದ್ದ ಹೋಟೆಲ್‌ನ ಮಾಜಿ ಉದ್ಯೋಗಿಗೆ ಪ್ಯಾರಿಸ್ ನ್ಯಾಯಾಲಯವು ಸುಮಾರು ₹1 ಕೋಟಿಗೂ ಹೆಚ್ಚು ಪರಿಹಾರ ಘೋಷಿಸಿದೆ. ಆತ ಪ್ರಕರಣದಲ್ಲಿ ₹5 ಕೋಟಿಗೂ ಹೆಚ್ಚು ನಷ್ಟಪರಿಹಾರ ಕೋರಿದ್ದರೂ, ಕೋರ್ಟ್ ಆತನ ಸ್ಥಿತಿಯನ್ನು ಪರಿಗಣಿಸಿ ಈ ಮೊತ್ತವನ್ನು ನಿಗದಿಪಡಿಸಿದೆ. ಜೊತೆಗೆ ಹೋಟೆಲ್‌ಗೆ €50,000 ನೀಡಲು ಆದೇಶಿಸಲಾಗಿದೆ.
ಹಣಕ್ಕಿಂತ ಹೆಚ್ಚಾಗಿ ತತ್ವ ಮತ್ತು ಸತ್ಯದ ಗೆಲುವಿಗಾಗಿ ಕೇವಲ 1 ಡಾಲರ್ ಅಥವಾ 1 ಪೌಂಡ್ ಸಾಂಕೇತಿಕ ಪರಿಹಾರ ಕೋರುವುದು ಜಾಗತಿಕ ಮಟ್ಟದಲ್ಲಿ ಇದೇ ಮೊದಲೇನಲ್ಲ:
ಟೇಲರ್ ಸ್ವಿಫ್ಟ್: 2017ರಲ್ಲಿ ಅಮೆರಿಕದ ಪ್ರಸಿದ್ಧ ಗಾಯಕಿ ಟೇಲರ್ ಸ್ವಿಫ್ಟ್, ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾಜಿ ರೇಡಿಯೋ ಡಿಜೆ ಡೇವಿಡ್ ಮುಲ್ಲರ್ ವಿರುದ್ಧ ನ್ಯಾಯಾಲಯದಲ್ಲಿ ಕೇವಲ 1 ಡಾಲರ್ ಪರಿಹಾರ ಕೋರಿ ಗೆದ್ದಿದ್ದರು.
ಗ್ವಿನೆತ್ ಪಾಲ್ಟ್ರೋ: 2023ರಲ್ಲಿ ನಟಿ ಗ್ವಿನೆತ್ ಪಾಲ್ಟ್ರೋ, 2016ರ ಸ್ಕೀಯಿಂಗ್ ಅಪಘಾತಕ್ಕೆ ಸಂಬಂಧಿಸಿದ ದಾವೆಯಲ್ಲಿ ಎದುರಾಳಿಯಿಂದ ಕೇವಲ ಸಾಂಕೇತಿಕ 1 ಡಾಲರ್ ಮತ್ತು ತಮ್ಮ ವಕೀಲರ ವೆಚ್ಚವನ್ನು ಪರಿಹಾರವಾಗಿ ಪಡೆದಿದ್ದರು.
ಮೇಘನ್ ಮಾರ್ಕಲ್: ಬ್ರಿಟನ್ನಿನ ಡಚೆಸ್ ಆಫ್ ಸಸೆಕ್ಸ್ ಮೇಘನ್ ಮಾರ್ಕಲ್, ತಮ್ಮ ಖಾಸಗಿ ಪತ್ರವನ್ನು ಅಕ್ರಮವಾಗಿ ಪ್ರಕಟಿಸಿದ ಮಾಧ್ಯಮ ಸಂಸ್ಥೆಯ ವಿರುದ್ಧದ ಹಕ್ಕುಸ್ವಾಮ್ಯ ಹಾಗೂ ಖಾಸಗಿತನದ ಮೊಕದ್ದಮೆಯಲ್ಲಿ ಗೆದ್ದು ಕೇವಲ £1 (ಒಂದು ಪೌಂಡ್) ಸಾಂಕೇತಿಕ ಪರಿಹಾರ ಸ್ವೀಕರಿಸಿದ್ದರು.
ಒಟ್ಟಿನಲ್ಲಿ, ಕಿಮ್ ಕರ್ದಾಶಿಯನ್ ಪ್ರಕರಣದ ಈ ತೀರ್ಪು, ನ್ಯಾಯಾಲಯದ ಕಟ್ಟೆ ಏರುವುದು ಬರಿ ಹಣಗಳಿಕೆಗಾಗಿ ಅಲ್ಲ, ಬದಲಿಗೆ ನೈತಿಕ ಹೊಣೆಗಾರಿಕೆ ಮತ್ತು ಸತ್ಯದ ಉಳಿವಿಗಾಗಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ