
ನವದೆಹಲಿ: ಭಾರತಕ್ಕೆ ಬೇಕಾಗಿದ್ದ 25ಕ್ಕೂ ಹೆಚ್ಚು ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನಡುವೆಯೇ ಲಷ್ಕರ್ ಎ ತೊಯ್ಬಾದ ಕುಖ್ಯಾತ ಉಗ್ರ ಚೌಧರಿ ಮೊಹಮ್ಮದ್ ಸರ್ವಾರ್ ಕೂಡ ಲಾಹೋರ್‌ನಲ್ಲಿ ಕಟ್ಟಡದಿಂದ ಉರುಳಿಬಿದ್ದು ನಿಗೂಢವಾಗಿ ಸಾವು ಕಂಡಿದ್ದಾನೆ. ವಿಶೇಷವೆಂದರೆ, ಬಾಲಿವುಡ್‌ನ ‘ಧುರಂಧರ್’ ಚಿತ್ರದಲ್ಲಿ ಪಾಕ್‌ನ ಉಗ್ರ ಸಂಘಟನೆಗಳ ಹಣಕಾಸಿನ ವಹಿವಾಟು ಹೊತ್ತಿದ್ದ ಉಗ್ರ ಕೂಡ ಸರ್ವಾರ್ ರೀತಿಯಲ್ಲೇ ಕಟ್ಟಡದಿಂದ ಉರುಳಿಬಿದ್ದು ಸಾವನ್ನಪ್ಪಿರುತ್ತಾನೆ. ಹೀಗಾಗಿ ಚೌಧರಿ ಸಾವಿನಲ್ಲೂ ‘ಧುರಂಧರ್’ನ ಕೈವಾಡದ ಶಂಕೆ ವ್ಯಕ್ತವಾಗಿದೆ.
ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲ್ಪಟ್ಟಿರುವ, ಲಷ್ಕರ್‌ನ ಸ್ಥಾಪಕ ಸದಸ್ಯ ಚೌಧರಿ ಮೊಹಮ್ಮದ್ ಸರ್ವಾರ್ ಅಲಿಯಾಸ್ ಅಬು ಹಾಶಿಮ್ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಉಗ್ರನಾಗಿದ್ದಾನೆ. ‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನದ ನಕಲಿ ಕರೆನ್ಸಿ ಕಿಂಗ್‌ಪಿನ್ ಜಾವೇದ್ ಖನಾನಿ ಕೂಡಾ ನಿರ್ಮಾಣ ಹಂತದ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟ ರೀತಿಯಲ್ಲಿ ತೋರಿಸಲಾಗಿತ್ತು. ಅದೇ ರೀತಿ ಸರ್ವಾರ್ ಕೂಡ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಲಷ್ಕರ್‌ನ ರಾಜಕೀಯ ಘಟಕವಾದ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ ಹೆಸರಿನಡಿ ಪಂಜಾಬ್ ಪ್ರಾಂತ್ಯದಲ್ಲಿ ಈತ ಉಗ್ರ ಸಂಘಟನೆಗೆ ನಿಧಿ ಸಂಗ್ರಹಿಸುವ ಕಾರ್ಯ ನಿರ್ವಹಿಸುತ್ತಿದ್ದ. ಉಗ್ರ ಹಫೀಜ್ ಸಯೀದ್ ಹಾಗೂ ಎಲ್‌ಇಟಿಯ ಉಪಮುಖ್ಯಸ್ಥ ಸೈಫುಲ್ಲಾ ಕಸೌರಿಯ ಆತ್ಮೀಯನಾಗಿದ್ದ ಈತನ ಪುತ್ರ ಕೂಡ ಕೆಲ ತಿಂಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ.
2000ದ ಆರಂಭದಿಂದಲೂ ಎಲ್‌ಇಟಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಸರ್ವಾರ್‌ನನ್ನು 2016ರಲ್ಲಿ ಅಮೆರಿಕದ ಕಾನೂನು ಇಲಾಖೆಯು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಆಗ ಈತ ಎಲ್‌ಇಟಿಯ ಲಾಹೋರ್‌ನ ಮುಖ್ಯಸ್ಥನಾಗಿದ್ದ.
ಸರ್ವಾರ್ ಎಲ್‌ಇಟಿಯ ನಿಧಿ ಸಂಗ್ರಹ ಕಾರ್ಯದಲ್ಲಿ ನೇರವಾಗಿ ಪಾತ್ರ ವಹಿಸಿದ್ದ. ದೇಶದ ಸಾಂಪ್ರದಾಯಿಕ ಹಣಕಾಸು ವ್ಯವಸ್ಥೆಯನ್ನು ಬಳಸಿಕೊಂಡೇ ಈತ ಉಗ್ರ ಸಂಘಟನೆಗೆ ನಿಧಿ ಸಂಗ್ರಹಿಸುತ್ತಿದ್ದ ಎಂಬ ಆರೋಪವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ