ನೇಪಾಳ ಪಿಎಂ ರೇಸಲ್ಲಿ ಕರ್ನಾಟಕದ ಎಂಟೆಕ್ ಪದವೀಧರ!

Kannadaprabha News   | Kannada Prabha
Published : Sep 10, 2025, 04:23 AM IST
Balendra Shah

ಸಾರಾಂಶ

ಹೊಸ ತಲೆಮಾರಿನ ಯುವಜನ(ಜನ್‌ ಝೀ) ದಂಗೆಯಿಂದಾಗಿ ರಾಜೀನಾಮೆ ನೀಡಿರುವ ನೆರೆಯ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಸ್ಥಾನಕ್ಕೆ ಕರ್ನಾಟಕದ ವಿಶ್ವೇಶ್ವರಯ್ಯ ವಿವಿಯ ಎಂಟೆಕ್‌ ಪದವೀಧರ, ರ್‍ಯಾಪರ್‌ ಬಲೇಂದ್ರ ಶಾ ಹೆಸರು ಗಟ್ಟಿಯಾಗಿ ಕೇಳಿಸುತ್ತಿದೆ.

ಕಾಠ್ಮಂಡು: ಹೊಸ ತಲೆಮಾರಿನ ಯುವಜನ(ಜನ್‌ ಝೀ) ದಂಗೆಯಿಂದಾಗಿ ರಾಜೀನಾಮೆ ನೀಡಿರುವ ನೆರೆಯ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಸ್ಥಾನಕ್ಕೆ ಕರ್ನಾಟಕದ ವಿಶ್ವೇಶ್ವರಯ್ಯ ವಿವಿಯ ಎಂಟೆಕ್‌ ಪದವೀಧರ, ರ್‍ಯಾಪರ್‌ ಬಲೇಂದ್ರ  ಶಾ ಹೆಸರು ಗಟ್ಟಿಯಾಗಿ ಕೇಳಿಸುತ್ತಿದೆ.

ಸದ್ಯ ನೇಪಾಳದ ರಾಜಧಾನಿ ಕಾಠ್ಮಂಡುವಿನ ಮೇಯರ್‌ ಆಗಿರುವ ಬಲೇಂದ್ರ ಅವರಿಗೆ ಯುವಜನರ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಬಲೇನ್‌ ಅವರೇ ಮುಂದಿನ ಪ್ರಧಾನಿ ಆಗಬೇಕು, ಯುವಜನರ ಆಶೋತ್ತರಗಳನ್ನು ಈಡೇರಿಸಲು ಅವರೇ ಸೂಕ್ತ ವ್ಯಕ್ತಿ ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಇವರ ಜತೆಗೆ ಸಂಸದೆ ಸುಮನಾ ಶ್ರೇಷ್ಠ ಹೆಸರೂ ಪಿಎಂ ಹುದ್ದೆ ರೇಸಲ್ಲಿದೆ.

ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಯುವಜನರು ಯುವ ಮುಖವೊಂದನ್ನು ದೇಶದ ಪ್ರಧಾನಿ ಸ್ಥಾನದಲ್ಲಿ ತಂದು ಕೂರಿಸುವ ಬೇಡಿಕೆ ಇಡುತ್ತಿದ್ದಾರೆ. ಸದ್ಯ 35 ವರ್ಷದ ಬಲೇಂದ್ರ ಅವರ ಪರ ದೊಡ್ಡಮಟ್ಟದ ಆನ್‌ಲೈನ್‌ ಕ್ಯಾಂಪೇನ್‌ ದೇಶಾದ್ಯಂತ ನಡೆಯುತ್ತಿದೆ.

ಕರ್ನಾಟಕದಲ್ಲಿ ಓದು:

1990ರಲ್ಲಿ ಜನಿಸಿರುವ ಬಲೇನ್‌ ಅವರು ಇಂಜಿನಿಯರಿಂಗ್‌ ಪದವೀಧರ. ಕಠ್ಮಂಡುವಿನಲ್ಲಿ ಎಂಜಿನಿಯರಿಂಗ್‌ ಮುಗಿಸಿರುವ ಅವರು, ಬಳಿಕ ಕರ್ನಾಟಕದ ಬೆಳಗಾವಿಯಲ್ಲಿ ಕೇಂದ್ರಸ್ಥಾನ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ನಲ್ಲಿ ಎಂಟೆಕ್‌ ಪದವಿ ಪಡೆದಿದ್ದಾರೆ. ರಾಜಕೀಯಕ್ಕೆ ಕಾಲಿಡುವ ಮೊದಲು ಶಾ ನೇಪಾಳದ ಭೂಗತ ಹಿಪ್‌ ಆಫ್‌ನಲ್ಲಿ ಸದ್ದು ಮಾಡಿದವರು. ರ್‍ಯಾಪರ್‌ ಆಗಿ, ಸಾಹಿತಿಯಾಗಿ ಯುವಜನರ ಗಮನಸೆಳೆದವರು. ಬಳಿಕ 2022ರಲ್ಲಿ ಕಾಠ್ಮಂಡು ಮೇಯರ್‌ ಚುನಾವಣೆಗೆ ಸ್ಪರ್ಧಿಸಿ ಸಿಪಿಎನ್‌(ಯುಎಂಎಲ್‌) ಅಭ್ಯರ್ಥಿ ವಿರುದ್ಧ 61,000 ಮತಗಳ ಅಂತರದಿಂದ ಗೆದ್ದಿದ್ದರು. ನೇಪಾಳಿ ರ್‍ಯಾಪ್‌ ಬ್ಯಾಟಲ್‌ ಲೀಗ್‌ನ 2ನೇ ಆವೃತ್ತಿಯ ವಿನ್ನರ್‌ ಕೂಡ ಆಗಿರುವ ಬಲೇಂದ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ.

ಆದಿಪುರುಷ್‌ ವಿವಾದ:

ಪ್ರಭಾಸ್‌ ನಟನೆಯ ಆದಿ ಪುರುಷ್‌ ಸಿನಿಮಾದಲ್ಲಿನ ಸೀತೆ ಭಾರತದ ಮಗಳು ಎಂಬ ಡೈಲಾಗ್ ವಿರುದ್ಧ ಬಲೇಂದ್ರ ತೀವ್ರ ಪ್ರತಿಭಟನೆ ನಡೆಸಿದ್ದರು. ಈ ಪದ ತೆಗೆದುಹಾಕದಿದ್ದರೆ ಭಾರತೀಯ ಸಿನಿಮಾವನ್ನು ನೇಪಾಳದಲ್ಲಿ ಬ್ಯಾನ್‌ ಮಾಡುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಬಳಿಕ ಆ ಡೈಲಾಗ್‌ ಎಡಿಟ್‌ ಮಾಡಿ ಸಿನಿಮಾ ಪ್ರದರ್ಶಿಸಲಾಗಿತ್ತು.

ಬಲೇನ್‌ ಅವರ ಮೊದಲ ಆದ್ಯತೆ ಯಾವತ್ತಿಗೂ ಸಂಗೀತವೇ ಆಗಿತ್ತು. ಆದರೆ, ನೇಪಾಳದಲ್ಲಿ ಸಂವಿಧಾನ ಬದಲಾವಣೆ ಬಳಿಕ ಭಾರತ ಹೇರಿದ್ದ ನಿರ್ಬಂಧ ಹಾಗೂ 2015ರ ಭಾರೀ ಭೂಕಂಪದ ಬಳಿಕ ಅವರು ರಾಜಕೀಯಕ್ಕೆ ಬರುವ ಆಸಕ್ತಿ ತೋರಿದರು. ಸದ್ಯ ಬಲೇನ್‌ ಅವರಿಗೆ ಫೇಸ್‌ಬುಕ್‌ನಲ್ಲಿ 1.41 ಲಕ್ಷ ಮಂದಿ, ಯೂಟ್ಯೂಬ್‌ನಲ್ಲಿ 3.28 ಲಕ್ಷ ಮಂದಿ ಹಾಗೂ ಇನ್‌ಸ್ಟಾಗ್ರಾಂನಲ್ಲಿ 1.23 ಲಕ್ಷ ಮಂದಿ ಸಬ್‌ಸ್ಕ್ರೈಬರ್ಸ್‌ ಮತ್ತು ಫಾಲೋವರ್ಸ್‌ ಇದ್ದಾರೆ.

ಜೈಲಲಿದ್ದ ಮಾಜಿ ಉಪಪ್ರಧಾನಿಗೆ ಬಂಧಮುಕ್ತಿ: 1,500 ಕೈದಿಗಳೂ ಪರಾರಿ

ಕಾಠ್ಮಂಡು: ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿ ನೇಪಾಳದ ನಕ್ಕು ಜೈಲಿನಲ್ಲಿದ್ದ ಮಾಜಿ ಉಪಪ್ರಧಾನಿ ಮತ್ತು ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ಅಧ್ಯಕ್ಷ ರಬಿ ಲಾಮಿಚಾನೆ ಅವರನ್ನು ಜೈಲಿಗೆ ನುಗ್ಗಿದ ಜೆನ್‌ ಝೀ ಪ್ರತಿಭಟನಾಕಾರರು ಜೈಲಿನಿಂದ ಬಿಡುಗಡೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಇದೇ ವೇಳೆ ಜೈಲಿನಲ್ಲಿದ್ದ ಕನಿಷ್ಠ 1,500 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.ಸಹಕಾರಿ ಉಳಿತಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಮಿಚಾನೆ ಜೈಲುಶಿಕ್ಷೆಗೆ ಒಳಗಾಗಿದ್ದರು. ಅವರನ್ನು ಜೈಲಿನಿಂದ ಹೊರತಂದ ಪ್ರತಿಭಟನಾಕಾರರು ರಸ್ತೆಗೆ ಕರೆತಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಂತೆ ಮಾಡಿದ್ದಾರೆ. ಶುದ್ಧ ಬಿಳಿ ಉಡುಗೆಯಲ್ಲಿ ಹೊರಬಂದ ಲಾಮಿಚಾನೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ್ದಾರೆ.-----

ಲಾಮಿನಾಚೆ ವಿವಾದದಿಂದ ದೂರ ಇರುವ ನಾಯಕರಾಗಿದ್ದು, ತಮ್ಮ ಪ್ರಾಮಾಣಿಕ ವ್ಯಕ್ತಿತ್ವದ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಓಲಿ ಸರ್ಕಾರದ ಭ್ರಷ್ಟ ಆಡಳಿತದಿಂದ ಬೇಸತ್ತಿರುವ ನೇಪಾಳದ ಜನತೆಗೆ ಇವರು ಹೊಸ ಆಶಾಕಿರಣವಾಗಿ ಗೋಚರಿಸಿದ್ದಾರೆ ಎನ್ನಲಾಗಿದೆ.

- ಯುವಜನರ ದಂಗೆಯಿಂದ ಬಲೇಂದ್ರ ಶಾಗೆ ಬೆಂಬಲ

- ರ್‍ಯಾಪರ್‌, ಯುವಮುಖ ಬಲೇಂದ್ರ ಪರ ಆಂದೋಲನ

- ವಿಶ್ವೇಶ್ವರಯ್ಯ ವಿವಿಯಲ್ಲಿ ಓದಿರುವಬಲೇಂದ್ರ  ಶಾ

- ಸದ್ಯ 2022ರಿಂದದಿ ಇವರು ಕಾಠ್ಮಂಡು ಮೇಯರ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!