
ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ವಿರುದ್ಧ ಯುದ್ಧ ಮಾಡುವಂತೆ ಅಮೆರಿಕದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ಈ ಯುದ್ಧದ ಪ್ರಸ್ತಾಪವನ್ನು ಮೂವರು ಅಮೆರಿಕನ್ ಅಧ್ಯಕ್ಷರು ತಿರಸ್ಕರಿಸಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ಸ್ಫೋಟಕ ಸತ್ಯವನ್ನು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಇದೀಗ ಬಹಿರಂಗಪಡಿಸಿದ್ದಾರೆ.
ಕೆರಿ ಅವರು 'ದಿ ಲೇಟ್ ಶೋ ವಿತ್ ಸ್ಟೀಫನ್ ಕೋಲ್ಬರ್ಟ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಈ ವಿಷಯವನ್ನು ತಿಳಿಸಿದ್ದಾರೆ. ಬರಾಕ್ ಒಬಾಮ, ಜಾರ್ಜ್ ಬುಷ್ ಮತ್ತು ಜೋ ಬೈಡನ್ ಅವರು ನೆತನ್ಯಾಹು ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಆದರೆ ಟ್ರಂಪ್ ಮಾತ್ರ ಒಪ್ಪಿಕೊಂಡಿದ್ದರು ಎಂದು ಕೆರಿ ಸ್ಪಷ್ಟಪಡಿಸಿದ್ದಾರೆ. ಶಾಂತಿ ಮಾತುಕತೆಗೆ ಇನ್ನೂ ಅವಕಾಶವಿದೆ ಎಂದು ಹೇಳಿ ಹಿಂದಿನ ಅಧ್ಯಕ್ಷರು ಯುದ್ಧದ ಪ್ರಸ್ತಾಪವನ್ನು ಒಪ್ಪಿರಲಿಲ್ಲ. ವಿಯೆಟ್ನಾಂ ಮತ್ತು ಇರಾಕ್ ಯುದ್ಧಗಳು ನಮಗೆ ದೊಡ್ಡ ಪಾಠ ಕಲಿಸಿವೆ ಎಂದೂ ಕೆರಿ ವಿವರಿಸಿದ್ದಾರೆ.
"ನಾನೊಬ್ಬ ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದ ಯೋಧ. ಅಮೆರಿಕದ ಜನರನ್ನು ಎಂದಿಗೂ ವಂಚಿಸಬಾರದು ಎನ್ನುವುದು ಮುಖ್ಯ. ಸುಳ್ಳು ಹೇಳಿ ಅಮೆರಿಕದ ಜನರ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಬಾರದು. ಇದನ್ನೇ ನಾವು ವಿಯೆಟ್ನಾಂ ಮತ್ತು ಇರಾಕ್ ಯುದ್ಧಗಳಿಂದ ಕಲಿತ ಪಾಠ," ಎಂದು ಕೆರಿ ಹೇಳಿದ್ದಾರೆ.
ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ದಾಳಿ ಮಾಡಲು ನೆತನ್ಯಾಹು ಅವರು ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೇಗೆ ಒಪ್ಪಿಸಿದ್ದರು ಎಂಬುದರ ಬಗ್ಗೆ 'ನ್ಯೂಯಾರ್ಕ್ ಟೈಮ್ಸ್' ಈ ಹಿಂದೆ ವರದಿ ಮಾಡಿತ್ತು. ಫೆಬ್ರವರಿ 11 ರಂದು ನಡೆದ 'ಸಿಚುಯೇಷನ್ ರೂಮ್' ಸಭೆಯಲ್ಲಿ, ಇರಾನ್‌ನಲ್ಲಿ ಶೀಘ್ರದಲ್ಲೇ ಆಡಳಿತ ಬದಲಾವಣೆಯಾಗಲಿದೆ ಎಂದು ನಂಬಿಸಿ ಯುದ್ಧಕ್ಕೆ ಮುನ್ನುಡಿ ಬರೆಯಲಾಗಿತ್ತು. ನೆತನ್ಯಾಹು ಅವರ ಈ ಸಲಹೆಯನ್ನು ಟ್ರಂಪ್ ಒಪ್ಪಿಕೊಂಡಿದ್ದರು. ಯುದ್ಧ ಕೊನೆಗೊಳ್ಳದ ಹಿನ್ನೆಲೆಯಲ್ಲಿ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ನೆತನ್ಯಾಹು ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು ಎಂಬ ವರದಿಯೂ ಹೊರಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ