ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ರಹಸ್ಯವಾಗಿ ಉಕ್ರೇನ್‌ಗೆ ಭೇಟಿ ನೀಡಿದ್ದು ಹೇಗೆ?

By Kannadaprabha News  |  First Published Feb 22, 2023, 2:12 PM IST

 ಅಮೆರಿಕದ ಕೆಲವೇ ಅಧಿಕಾರಿಗಳಿಗೆ ಮಾತ್ರ ಉಕ್ರೇನ್‌ ಭೇಟಿ ಬಗ್ಗೆ ಗೊತ್ತಿತ್ತು. ಶುಕ್ರವಾರವಷ್ಟೇ ಬೈಡೆನ್‌ ಇದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದರು. 7 ತಾಸು ಕಾಲ ವಾರ್ಸಾಗೆ ವಿಮಾನದಲ್ಲಿ ಪ್ರಯಾಣ ಮಾಡಲಿದ್ದು,ಬಳಿಕ 10 ಗಂಟೆ ರೈಲಿನಲ್ಲಿ ಸಂಚರಿಸಿ ಕೀವ್‌ಗೆ ಹೋಗಿದ್ದಾರೆ. 


ವಾಷಿಂಗ್ಟನ್‌ (ಫೆಬ್ರವರಿ 22, 2023): ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೋಮವಾರ ಯುದ್ಧ ಪೀಡಿತ ಉಕ್ರೇನ್‌ಗೆ ದಿಢೀರ್‌ ಭೇಟಿ ನೀಡಿದರು. ಬೈಡೆನ್‌ ಉಕ್ರೇನ್‌ ರಾಜಧಾನಿ ಕೀವ್‌ಗೆ ಬಂದಾಗಲೇ ಅನೇಕರಿಗೆ ಮಾಧ್ಯಮಗಳಿಗೆ ಅವರು ಬಂದಿದ್ದು ಗೊತ್ತಾಯಿತು. ಇಷ್ಟು ರಹಸ್ಯ ಕಾಪಾಡಿಕೊಂಡು ಅವರು ಉಕ್ರೇನ್‌ಗೆ ಬಂದಿದ್ದು ಹೇಗೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅನೇಕ ತಿಂಗಳಿಂದ ಜೋ ಬೈಡೆನ್‌ ಉಕ್ರೇನ್‌ ಭೇಟಿಗೆ ಚಿಂತನೆ ನಡೆದಿತ್ತು. ಆದರೆ ಸುರಕ್ಷತೆ ಕಾರಣ ಭೇಟಿ ಸಾಧ್ಯವಾಗಿರಲಿಲ್ಲ. ಶುಕ್ರವಾರವಷ್ಟೇ ಅವರು ಕೀವ್‌ಗೆ ಭೇಟಿ ನೀಡುವ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಸೋಮವಾರ ಭೇಟಿ ನೀಡುವ ಕಾರ‍್ಯಕ್ರಮ ನಿಗದಿ ಆಯಿತು. ಈ ವಿಷಯ ಕೆಲವೇ ಕೆಲವು ಅಧಿಕಾರಿಗಳಿಗೆ ಗೊತ್ತಿತ್ತು.

ಜೋ ಬೈಡೆನ್‌ ನೇರವಾಗಿ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಉಕ್ರೇನ್‌ಗೆ ಹೋಗುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಉಕ್ರೇನ್‌ ಪಕ್ಕದ ಪೋಲೆಂಡ್‌ನ ವಾರ್ಸಾಗೆ ಅವರು ಆಗಮಿಸಿದರು. ಮೇಲ್ನೋಟಕ್ಕೆ ಕೇವಲ ಪೋಲೆಂಡ್‌ ಪ್ರವಾಸ ಎಂದು ತೋರಿಸಲಾಯಿತು. ಭೇಟಿ ನಡುವೆ 1 ದಿನದ ರಜಾ ದಿನ ಇತ್ತು. ಉಕ್ರೇನ್‌ ಭೇಟಿಯೇ ಆ ‘ರಜಾ ದಿನ’ದ ಸೀಕ್ರೆಟ್‌ ಆಗಿತ್ತು. ವಾರ್ಸಾಗೆ 7 ತಾಸು ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಬಂದ ಜೋ ಬೈಡೆನ್‌, ಅಲ್ಲಿಂದ ರೈಲು ಹತ್ತಿ 10 ತಾಸು ಪ್ರಯಾಣಿಸಿ ಕೀವ್‌ಗೆ ಬಂದಿಳಿದರು. ಅಲ್ಲಿಗೆ ಜೋ ಬೈಡೆನ್‌ ರಹಸ್ಯ ಪ್ರವಾಸದ ಉದ್ದೇಶ ಈಡೇರಿತ್ತು.

Tap to resize

Latest Videos

ಇದನ್ನು ಓದಿ: ಅಮೆರಿಕದ ಮೇಲೆ ಏಲಿಯೆನ್‌ಗಳಿಂದ ಸತತ ಆಕ್ರಮಣ..? ಏರ್‌ಫೋರ್ಸ್‌ ಜನರಲ್‌ ಅನುಮಾನ

ಈ ನಡುವೆ, ಜೋ ಬೈಡೆನ್‌ ವಿಮಾನದಲ್ಲಿ ಇಬ್ಬರು ಪತ್ರಕರ್ತರಿದ್ದರು. ಆದರೆ ರಹಸ್ಯ ಕಾಪಾಡಿಕೊಳ್ಳುವ ಕಾರಣ ಅವರ ಮೊಬೈಲ್‌, ಕ್ಯಾಮರಾಗಳನ್ನೂ ಕಸಿದುಕೊಳ್ಳಲಾಗಿತ್ತು. ಆಧುನಿಕ ವಿಶ್ವದ ಇತಿಹಾಸದಲ್ಲಿ ಅಮೆರಿಕ ಅಧ್ಯಕ್ಷರೊಬ್ಬರು, ಅಮೆರಿಕ ವ್ಯಾಪ್ತಿಯ ಹೊರಗಿರುವ ಯುದ್ಧನೆಲೆಗೆ ಭೇಟಿಕೊಟ್ಟ ಮೊದಲ ಘಟನೆ ಇದಾಗಿತ್ತು ಎಂಬುದು ಕೂಡ ವಿಶೇಷ.

ಇದನ್ನೂ ಓದಿ: ಸ್ಪೈ ಬಲೂನ್‌ ಆಯ್ತು; ಈಗ 40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಮತ್ತೊಂದು ವಸ್ತು ಹೊಡೆದುರುಳಿಸಿದ ಅಮೆರಿಕ

click me!