ಜಪಾನ್‌ನ ಬೀದಿಗಳು ಎಷ್ಟು ಸ್ವಚ್ಛವಾಗಿವೆ ಎಂಬುದನ್ನು ತೋರಿಸಲು ಇನ್ಫ್ಲುಯೆನ್ಸರ್ ಒಬ್ಬರು ಬಿಳಿ ಸಾಕ್ಸ್ ಧರಿಸಿ ನಡೆದಾಡಿದ್ದಾರೆ. ಈ ವೀಡಿಯೋ 26 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಜಪಾನ್‌ನ ಶುಚಿತ್ವದ ಬಗ್ಗೆ ಜನರನ್ನು ಅಚ್ಚರಿಗೊಳಿಸಿದೆ.
ಸೂರ್ಯ ಹುಟ್ಟುವ ನಾಡು ಎಂದು ಖ್ಯಾತಿ ಗಳಿಸಿರುವ ಜಪಾನ್ ಅಲ್ಲಿನ ಜನರ ಕಾರ್ಯಕ್ಷಮತೆ ಅಧುನಿಕ ತಂತ್ರಜ್ಞಾನ ಕಾರ್ಯವೈಖರಿಯಿಂದ ಜಗತ್ತಿನ ಮುಂದುವರಿದ ದೇಶಗಳಲ್ಲಿ ಒಂದೆನಿಸಿದೆ. ತಂತ್ರಜ್ಞಾನದ ಜೊತೆ ಸಂಪ್ರದಾಯ ಹಾಗೂ ಅದ್ಭುತ ನಗರಗಳನ್ನು ಜೀವನದೊಂದಿಗೆ ಸಂಧಿಸುವ ಈ ಪುಟ್ಟ ದೇಶ ಶುಚಿತ್ವದ ಸಮರ್ಪಣೆಗಾಗಿ ಬಹಳ ಹಿಂದಿನಿಂದಲೂ ಜಗತ್ತಿನಿಂದ ಗುರುತಿಸಲ್ಪಟ್ಟಿದೆ. ಸ್ವಚ್ಛತೆಯಿಂದಾಗಿ ಸದಾ ಕಂಗೊಳಿಸುವ ಇಲ್ಲಿನ ಬೀದಿಗಳಿಂದ ನಿರ್ಮಲವಾದ ದೇವಾಲಯಗಳವರೆಗೆ, ಸ್ವಚ್ಛತೆಯ ಬಗ್ಗೆ ದೇಶದ ಜನರ ಉತ್ಸಾಹವು ನೋಡಲು ಅದ್ಭುತವಾಗಿದೆ.
ಜಪಾನ್ ಸ್ವಚ್ಛತೆಯ ಬಗ್ಗೆ ಇಂಟರ್‌ನೆಟ್‌ನಲ್ಲಿ ಇಷ್ಟೊಂದು ವಿವರಗಳಿದ್ದರೂ ನಿಜವಾಗಿಯೂ ಜಪಾನ್ ಹೇಗಿದೆ ಎಂಬ ವಿಚಾರ ಅಲ್ಲಿಗೆ ಹೋದವರಿಗಷ್ಟೇ ಗೊತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಇನ್‌ಫ್ಲುಯೆನ್ಸರ್ ಒಬ್ಬರು ಜಪಾನ್ ನಿಜವಾಗಿಯೂ ಹೇಗೆ ಎಂಬ ವಿಚಾರವನ್ನು ಪರೀಕ್ಷಿಸಿದ್ದು, ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಈಗ ಎಲ್ಲರ ಮೆಚ್ಚುಗೆ ಗಳಿಸಿದೆ. 26 ಮಿಲಿಯನ್ ಜನ ಈ ವೀಡಿಯೋನ್ನು ವೀಕ್ಷಿಸಿದ್ದಾರೆ.
ಈ ಪ್ರಯೋಗಕ್ಕಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಿಮ್ರಾನ್ ಬಾಲರಾಜನ್ ಅವರು ಎರಡು ಜೊತೆ ಸ್ವಚ್ಛ ಬಿಳಿ ಬಣ್ಣದ ಸಾಕ್ಸ್‌ಗಳನ್ನು ಕಾಲಿಗೆ ಧರಿಸಿ ಜಪಾನ್‌ನ ಬೀದಿಗಳಲ್ಲಿ ನಡೆದಾಡಿದ್ದಾರೆ. ಹೀಗೆ ಕೆಲ ಕಾಲ ನಡೆದಾಡಿದ ನಂತರ ಅವರು ತಮ್ಮ ಸಾಕ್ಷ್ಸ್ ಹಾಕಿದ ಕಾಲಿನ ಅಡಿಭಾಗವನ್ನು ಕ್ಯಾಮರಾಗೆ ತೋರಿಸಿದ್ದಾರೆ. ಈ ದೃಶ್ಯ ನೋಡಿ ಬಹುತೇಕರು ಅಚ್ಚರಿಗೊಂಡಿದ್ದಾರೆ. ಆಗಷ್ಟೇ ಒರೆಸಿ ಸ್ವಚ್ಛಗೊಳಿಸಿದ ನೆಲದಂತೆ ಜಪಾನ್‌ನ ಬೀದಿಯ ರಸ್ತೆಗಳಿದ್ದು, ಸಿಮ್ರಾನ್ ಶೂ ಧರಿಸದೇ ಕೇವಲ ಸಾಕ್ಸ್ ಧರಿಸಿ ರಸ್ತೆಯಲ್ಲಿ ನಡೆದಾಡಿದರೂ ಅವರ ಸಾಕ್ಸ್ ಸ್ವಲ್ಪವೂ ಕೊಳಕಾಗಿಲ್ಲ, ಧೂಳಾಗಲಿ ಮಣ್ಣಾಗಲಿ ಸಾಕ್ಸ್‌ಗೆ ಅಂಟಿಲ್ಲ, ಈ ದೃಶ್ಯ ನೋಡಿದ ವೀಕ್ಷಕರು ಅಚ್ಚರಿಯಿಂದ ಬೆರಗಾಗಿದ್ದಾರೆ. ಈ ವೀಡಿಯೋ ಈಗ 26 ಮಿಲಿಯನ್ ವೀಕ್ಷಣೆ ಗಳಿಸಿದೆ.
ಈ ವೀಡಿಯೋ ನೋಡಿದ ಜನ ಜಪಾನ್ ನಿಜವಾಗಿಯೂ ಎಷ್ಟೊಂದು ಸ್ವಚ್ಛ ನಗರಿ ಎಂದು ಬೆರಗಾಗಿದ್ದಾರೆ. ಅಲ್ಲದೇ ಸಿಮ್ರಾನ್ ಅವರ ಈ ವೀಡಿಯೋದಿಂದ ಜಪಾನ್‌ನ ಬೀದಿಗಳು ಕೂಡ ಮನೆಯ ಒಳಾಂಗಣದಂತೆ ಎಷ್ಟೊಂದು ಸೊಗಸಾಗಿವೆ ಎಂಬುದನ್ನು ತೋರಿಸಿಕೊಟ್ಟಿವೆ. ಆದರೆ ಮತ್ತೆ ಕೆಲವರು ಆಕೆ ತಮ್ಮ ನಡಿಗೆಯ ಫಲಿತಾಂಶವನ್ನು ಸರಿಯಾಗಿ ತೋರಿಸಿಲ್ಲ ಎಂದು ಟೀಕಿಸಿದ್ದಾರೆ. ಈ ದೃಶ್ಯ ನೋಡಿದರೆ ಡಿಟರ್ಜೆಂಟ್ ಕಂಪನಿಗಳು ಅಳಲು ಶುರು ಮಾಡುತ್ತವೆ ಎಂದು ಹಾಸ್ಯ ಮಾಡಿದ್ದಾರೆ.