ಹಮಾಸ್‌ನ ಭಯೋತ್ಪಾದಕರು ಯುವತಿಯನ್ನು ಕೊಂದು ಆಕೆಯ ನಗ್ನ ದೇಹವನ್ನು ಮೆರವಣಿಗೆ ಮಾಡುತ್ತಿರುವ ಫೋಟೋ ತೆಗೆದಿದ್ದ ಅಸೋಸಿಯೇಟೆಡ್ ಪ್ರೆಸ್ ಇದಕ್ಕಾಗಿ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ, ಇಸ್ರೇಲಿಗರು ಮಾತ್ರ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಮಾ.29): ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹಮಾಸ್‌ನ ಭಯೋತ್ಪಾದಕರು ಇಸ್ರೇಲ್‌ನ ಗಡಿಗೆ ನುಗ್ಗಿ ಅಮಾಯಕ ವ್ಯಕ್ತಿಗಳನ್ನು ಕೊಂದು ಹಾಕಿದ್ದರು. ಈ ವೇಳೆ ಇಸ್ರೇಲ್‌ನ ಯುವತಿಯೊಬ್ಬಳನ್ನು ಕೊಂದು ಆಕೆಯ ದೇಹವನ್ನು ಕಾರಿನ ಹಿಂಬದಿಯಲ್ಲಿ ಹಾಕಿ ಗಾಜಾದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿತ್ತು. ಅಸೋಸಿಯೇಟೆಡ್ ಪ್ರೆಸ್ ತೆಗೆದ ಈ ಚಿತ್ರಕ್ಕೆ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿ ದೊರೆತಿದೆ. ಇದರ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯ ಈ ಚಿತ್ರಕ್ಕೆ ಪುರಸ್ಕಾರ ನೀಡಿರುವುದು "ಯಹೂದಿ ಜೀವನದ ಅತಿರೇಕದ ಅಪವಿತ್ರಗೊಳಿಸುವಿಕೆ" ಎಂದು ಟೀಕೆ ಮಾಡಿದ್ದಾರೆ. 22 ವರ್ಷದ ಶಾನಿ ಲೌಕ್ ಎಂದು ಗುರುತಿಸಲಾದ ಯುವತಿಯನ್ನು ಅಕ್ಟೋಬರ್ 7 ರಂದು ಹಮಾಸ್ ಅಪಹರಿಸಿತ್ತು. ಇದೇ ದಿನ ಭಯೋತ್ಪಾದಕ ಗುಂಪು ಇಸ್ರೇಲ್ ಮೇಲೆ ಮೊದಲ ದಾಳಿ ನಡೆಸಿತ್ತು.
ಈ ಚಿತ್ರದಲ್ಲಿ ಶಾನಿ ಲೌಕ್ ಅರೆನಗ್ನ ಸ್ಥಿತಿಯಲ್ಲಿ ಇದ್ದಿದ್ದಾಗಿ ತೋರಿಸಲಾಗಿತ್ತು. ಶಸ್ತ್ರಸಜ್ಜಿತ ಭಯೋತ್ಪಾದಕರಿಂದಲೇ ತುಂಬಿದ್ದ ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಕೊನೆಗೆ ಆಕೆ ಸಾವು ಕಂಡಿದ್ದಾಳೆ ಎಂದು ಘೋಷಿಸಲಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಅಕ್ಟೋಬರ್ 7 ರಂದು ಲೌಕ್, ಸೂಪರ್‌ನೋವಾ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಈ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ದಾಳಿ ಮಾಡಿದ್ದ ಹಮಾಸ್ ಭಯೋತ್ಪಾದಕರು ಗುಂಡು ಹಾಗೂ ಗ್ರೇನೇಡ್ ಮೂಲಕ ದಾಳಿ ಮಾಡಿ 360ಕ್ಕೂ ಅಧಿಕ ಜನರನ್ನು ಕೊಂದಿದ್ದರು. 12ಕ್ಕೂ ಅಧಿಕ ಮಂದಿಯನ್ನು ಅಪಹರಣ ಮಾಡಿದ್ದರು. ಇವರಲ್ಲಿ ಹೆಚ್ಚಿನವರು ನಾಗರೀಕರೇ ಆಗಿದ್ದರು. ಇವರ ಮೇಲೆ ಕ್ರೂರವಾಗಿ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯವನ್ನು ಎಸಗಲಾಗಿತ್ತು. ಆಕೆಯ ತಲೆಬುರುಡೆಯ ತುಂಡನ್ನು ಗುರುತಿಸಿದ ನಂತರ ಅಕ್ಟೋಬರ್ 30 ರಂದು ಲೌಕ್ ಸಾವು ಕಂಡಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಆಕೆಯ ದೇಹವನ್ನು ಇನ್ನೂ ಗಾಜಾದಲ್ಲಿಯೇ ಇರಿಸಲಾಗಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮಿಸೌರಿ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಡೊನಾಲ್ಡ್ ಡಬ್ಲ್ಯೂ ರೆನಾಲ್ಡ್ಸ್ ಜರ್ನಲಿಸಂ ಇನ್ಸ್ಟಿಟ್ಯೂಟ್ ನಡೆಸುತ್ತಿರುವ 'ಟೀಮ್ ಪಿಕ್ಚರ್ ಸ್ಟೋರಿ ಆಫ್ ದಿ ಇಯರ್' ಪ್ರಶಸ್ತಿಯನ್ನು ವಿಶ್ವದ ಅತ್ಯಂತ ಹಳೆಯ ಫೋಟೋ ಜರ್ನಲಿಸಂ ಸ್ಪರ್ಧೆ ಎಂದು ವಿವರಿಸಲಾಗಿದೆ. ಚಿತ್ರಕ್ಕೆ ಪ್ರತಿಕ್ರಿಯಿಸಿದ, ವಿಶ್ವಸಂಸ್ಥೆಗೆ ಇಸ್ರೇಲ್ ಮಿಷನ್‌ನಲ್ಲಿ ಭಾಷಣ ಬರವಣಿಗೆಯ ಮಾಜಿ ಮುಖ್ಯಸ್ಥ ಅವಿವಾ ಕ್ಲೋಂಪಾಸ್ ಚಿತ್ರವನ್ನು ಕ್ಲಿಕ್ ಮಾಡಿದ್ದಕ್ಕಾಗಿ ಛಾಯಾಗ್ರಾಹಕನಿಗೆ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.
ಮಣಿಪುರ ನಗ್ನ ಪರೇಡ್ ಬಗ್ಗೆ ಅಮೆರಿಕ ಕಳವಳ: ದಾಳಿಗೊಳಗಾದ ಬಿಜೆಪಿ ಶಾಸಕನ ಕೇಳೋರಿಲ್ಲ!
ಇಸ್ರೇಲ್ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ಜಿಹಾದಿ ಭಯೋತ್ಪಾದಕರ ಜೊತೆಗಿದ್ದ ಎಪಿ ಛಾಯಾಗ್ರಾಹಕನಿಗೆ ಪ್ರತಿಷ್ಠಿತ ಛಾಯಾಗ್ರಹಣ ಬಹುಮಾನವನ್ನು ನೀಡಲಾಗಿದೆ. ಶಾನಿ ಲೌಕ್ ಅವರ ವಿಕೃತ ದೇಹದೊಂದಿಗೆ ಅತ್ಯಾಚಾರಿ ಭಯೋತ್ಪಾದಕರ ಫೋಟೋ ತೆಗೆದ ಈ ಫೋಟೋಗ್ರಾಫರ್ ಬಗ್ಗೆ ಈಗ ಸಂಭ್ರಮಿಸಲಾಗುತ್ತಿದೆ. ಆದರೆ, ಈತ ಜೈಲಿಗೆ ಹೋಗಬೇಕು. ಯಾವುದೇ ಕಾರಣಕ್ಕೂ ಆತನಿಗೆ ಬಹುಮಾನ ನೀಡಬಾರದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈ ಚಿತ್ರ ಅತ್ಯಂತ ಆಘಾತಕಾರಿಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಣಿಪುರ ಮಹಿಳೆಯ ಬೆತ್ತಲೆ ಪರೇಡ್: ಪರೇಡ್‌ಗೆ ಆರ್‌ಎಸ್ಎಸ್ ನಂಟು ಎಂದವರ ವಿರುದ್ಧ ಕೇಸ್