
ಟೆಲ್ ಅವೀವ್: ಶುಕ್ರವಾರ ರಾತ್ರಿ ಇರಾನ್ ಮೇಲೆ ಇಸ್ರೇಲ್ ಬೃಹತ್ ವೈಮಾನಿಕ ದಾಳಿ ನಡೆಸಿದ್ದು, ಎರಡು ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸಿದೆ. ಸ್ರೇಲಿ ಯುದ್ಧ ವಿಮಾನಗಳು ಇರಾನ್‌ನ ಪರಮಾಣು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಲಿಪಣಿ ದಾಳಿ ನಡೆಸುತ್ತಿವೆ ಎಂದು ವರದಿಯಾಗಿವೆ. ಕೆಲವು ವಸತಿ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇದರಲ್ಲಿ ಇರಾನ್ ದೇಶದ ಪ್ರಮುಖ ಅಧಿಕಾರಿಗಳು ಮನೆ ಸೇರಿವೆ ಎನ್ನಲಾಗಿದೆ. ಇರಾನ್ ಮಾಧ್ಯಮಗಳ ವರದಿ ಪ್ರಕಾರ, ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಟೆಹ್ರಾನ್ ಸೇರಿದಂತೆ ಅನೇಕ ನಗರಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಪಾಸ್ಟರ್ ಸ್ಕ್ವೇರ್ ಸುತ್ತಲೂ ಭಾರೀ ಮಿಲಿಟರಿ ಚಟುವಟಿಕೆ ಹೆಚ್ಚಾಗಿದೆ.
ಇತ್ತ ಇರಾನ್‌ನಿಂದ ಕ್ಷಿಪಣಿ ದಾಳಿ ನಡೆದಿದೆ ಎಂದು ಇಸ್ರೇಲ್ ಹೇಳಿಕೆ ಬಿಡುಗಡೆ ಮಾಡಿದೆ. ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಎಲ್ಲಾ ನಾಗರಿಕರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.
ಇಸ್ಫಹಾನ್ ಮೇಲೆ ಪ್ರಮುಖ ದಾಳಿ
ಇಸ್ರೇಲ್ ಸೇನೆ ತನ್ನ ಯುದ್ಧವಿಮಾನಗಳು ಇಸ್ಫಹಾನ್‌ನಲ್ಲಿರುವ ಇರಾನ್‌ನ ಪರಮಾಣು ಸೌಲಭ್ಯದ ಮೇಲೆ ದಾಳಿ ಮಾಡಿದೆ. ಇಲ್ಲಿಯ ಪ್ರಮುಖ ವ್ಯವಸ್ಥೆಗಳನ್ನು ನಾಶಗೊಳಿಸಿದೆ. ಲೋಹದ ಯುರೇನಿಯಂ ತಯಾರಿಸುವ ಸೌಲಭ್ಯ, ಪುಷ್ಟೀಕರಿಸಿದ ಯುರೇನಿಯಂ ಮರುಬಳಕೆ ಮಾಡುವ ವ್ಯವಸ್ಥೆ, ಪ್ರಯೋಗಾಲಯಗಳು ಸೇರಿದಂತೆ ಹಲವು ಘಟಕಗಳನ್ನು ಇಸ್ರೇಲ್ ನಾಶಗೊಳಿಸಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತನಾಡುವ ಸಂದರ್ಭದಲ್ಲಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಯಸುವುದಿಲ್ಲ, ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಖಾತರಿ ನೀಡಲು ಸಿದ್ಧವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಶೆಕಿಯನ್ ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಇಸ್ರೇಲ್ ಮತ್ತು ಇರಾನ್ ವಿದೇಶಾಂಗ ಸಚಿವರೊಂದಿಗೆ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಮಾತನಾಡಿದರು. ಪ್ರಸ್ತುತ ಪರಿಸ್ಥಿತಿಯ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿರುವುದಾಗಿ ಅವರು ಎಕ್ಸ್‌ನಲ್ಲಿ ಬರೆದುಕೊಳ್ಳವ ಮೂಲಕ ಮಾಹಿತಿ ನೀಡಿದ್ದಾರೆ.
ಖಮೇನಿಯವರ ಕಟ್ಟುನಿಟ್ಟಿನ ಎಚ್ಚರಿಕೆ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಮಾಧ್ಯಮದಲ್ಲಿ ಮಾತನಾಡುತ್ತಾ , ಇರಾನ್ ಸೈನ್ಯವು ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸುತ್ತದೆ. ಇಸ್ರೇಲ್ ಅನ್ನು ಮಂಡಿಯೂರಿಸುತ್ತದೆ. ಈ ದಾಳಿಯನ್ನು ಸಹಿಸಲಾಗುವುದಿಲ್ಲ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ದಾಳಿಗಳನ್ನು ಖಂಡಿಸಿದ್ದು, ಪರಮಾಣು ಸ್ಥಾಪನೆಗಳ ಮೇಲಿನ ಹಿಂದಿನ ದಾಳಿ ಅಪಾಯ ಎಂದು ಉಲ್ಲೇಖಿಸಿದ್ದಾರೆ.
ಇಸ್ಫಹಾನ್ ನಗರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ಮೆಹರ್ ವರದಿ ಮಾಡಿದೆ. ಆದರೆ ಅದರ ನಿಖರವಾದ ಸ್ಥಳ ಮತ್ತು ಕಾರಣ ಇನ್ನೂ ತಿಳಿದುಬಂದಿಲ್ಲ. ಇರಾನ್‌ನ ಫೋರ್ಡೊ ಪರಮಾಣು ತಾಣದ ಬಳಿ ಎರಡು ದೊಡ್ಡ ಸ್ಫೋಟಗಳು ಕೇಳಿಬಂದಿವೆ. ಈ ಮಾಹಿತಿಯನ್ನು ಅಸೋಸಿಯೇಟೆಡ್ ಪ್ರೆಸ್ ಪ್ರಕಟಿಸಿದ ಸರ್ಕಾರಿ ಪರ ಮಾಧ್ಯಮ ವರದಿಯಲ್ಲಿ ನೀಡಲಾಗಿದೆ.
ಐಡಿಎಫ್ ಮುಖ್ಯಸ್ಥರ ಎಚ್ಚರಿಕೆ
ಇಸ್ರೇಲಿ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್, ಸೇನೆಯು ಸಂಪೂರ್ಣ ಬಲ ಮತ್ತು ವೇಗದಿಂದ ಕಾರ್ಯನಿರ್ವಹಿಸುತ್ತಿದೆ. ನಾಗರಿಕರು ಜಾಗರೂಕರಾಗಿರಲು ಮತ್ತು ಯಾವುದೇ ಪರಿಸ್ಥಿತಿಗೆ ಸಿದ್ಧರಾಗಿರಲು ಸೂಚನೆ ನೀಡಿದ್ದಾರೆ.
ಇಸ್ರೇಲ್‌ನಲ್ಲಿ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ
ಮಧ್ಯ ಇಸ್ರೇಲ್‌ನಲ್ಲಿ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಬಿದ್ದ ನಂತರ ಹಲವರು ಗಾಯಗೊಂಡಿದ್ದು, ಅನೇಕ ಮನೆಗಳಿಗೆ ಭಾರಿ ಹಾನಿಯಾಗಿದೆ. ತುರ್ತು ಸೇವೆ ಮಗನ್ ಡೇವಿಡ್ ಅಡೋಮ್ ತನ್ನ ವೈದ್ಯಕೀಯ ಸಿಬ್ಬಂದಿ 10 ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ