35 ದೇಶಗಳಲ್ಲಿ ಲಸಿಕೆ ವಿತರಣೆ| ವಿತರಣೆಯಲ್ಲಿ ಇಸ್ರೇಲ್ ನಂ.1| ಒಟ್ಟು ಜನಸಂಖ್ಯೆಯ ಪೈಕಿ ಶೇ.12 ಮಂದಿಗೆ ಲಸಿಕೆ ನೀಡಿಕೆ| ವೃದ್ಧರೇ ಇಸ್ರೇಲ್ ಗುರಿ
ನವದೆಹಲಿ(ಜ.04): ಕೊರೋನಾ ವೈರಸ್ ಹಾವಳಿ ವಿಶ್ವವ್ಯಾಪಿಯಾದ ಒಂದು ವರ್ಷದ ಬಳಿಕ ಸುಮಾರು 35 ದೇಶಗಳಲ್ಲಿ ಲಸಿಕೆ ಅಭಿಯಾನ ಪ್ರಾರಂಭವಾಗಿದೆ. ಶೇಕಡಾವಾರು ಜನಸಂಖ್ಯೆಯಲ್ಲಿ ಶೇ.12ರಷ್ಟುಮಂದಿಗೆ ಲಸಿಕೆ ವಿತರಿಸುವ ಮೂಲಕ ಇಸ್ರೇಲ್ ಉಳಿದೆಲ್ಲಾ ದೇಶಗಳಿಗಿಂತ ಮುಂದಿದೆ. ಆದರೆ ಜನಸಂಖ್ಯೆವಾರು ಲಸಿಕೆ ವಿತರಣೆಯಲ್ಲಿ 45 ಲಕ್ಷ ಮಂದಿಗೆ ಈವರೆಗೆ ಲಸಿಕೆ ನೀಡುವ ಮೂಲಕ ಚೀನಾ ವಿಶ್ವದಲ್ಲೇ ಮುಂದೆ ಸಾಗುತ್ತಿದೆ.
87 ಲಕ್ಷ ಜನಸಂಖ್ಯೆ ಇರುವ ಇಸ್ರೇಲ್‌ನಲ್ಲಿ ಡಿ.20ರಿಂದ ಲಸಿಕೆ ವಿತರಣೆ ಆರಂಭವಾಗಿದೆ. ಫೈಝರ್- ಬಯೋಎನ್‌ಟೆಕ್ ಕಂಪನಿಗಳ ಲಸಿಕೆಯ ವಿತರಣೆ ಆರಂಭವಾಗಿದ್ದು, ಈವರೆಗೆ 10.09 ಲಕ್ಷ ಮಂದಿಗೆ ವಿತರಿಸಲಾಗಿದೆ. ಇದು ಒಟ್ಟು ಜನಸಂಖ್ಯೆಯಲ್ಲಿ ಶೇ.12.59ರಷ್ಟು. ಮಿಕ್ಕಂತೆ ಬಹ್ರೇನ್ (ಶೇ.3.53), ಬ್ರಿಟನ್ (ಶೇ.1.39) ಹಾಗೂ ಅಮೆರಿಕ (ಶೇ.1.28) ನಂತರದ ಸ್ಥಾನದಲ್ಲಿವೆ.
ಇಸ್ರೇಲ್‌ನಲ್ಲಿ ಈವರೆಗೆ 60 ವರ್ಷ ಮೇಲ್ಪಟ್ಟಶೇ.41ರಷ್ಟುಮಂದಿಗೆ ಲಸಿಕೆ ಹಾಕಲಾಗಿದೆ. 65 ವರ್ಷದೊಳಗಿನ ಕೊರೋನಾ ರೋಗಿಗಳು ಮೃತಪಡುವ ಪ್ರಮಾಣ ಶೇ.0.5ರಷ್ಟಿದ್ದರೆ, 44 ವರ್ಷದೊಳಗಿನವರ ಮರಣ ಪ್ರಮಾಣ ಶೂನ್ಯ ಇದೆ. 65 ಮೇಲ್ಪಟ್ಟವರು ಸಾವಿಗೀಡಾಗುವ ಪ್ರಮಾಣ ಶೇ.3.1 ಹಾಗೂ 75 ಮೇಲ್ಪಟ್ಟವರ ಮರಣ ಪ್ರಮಾಣ ಶೇ.11ರಷ್ಟಿದೆ. ಹೀಗಾಗಿ ಆಸ್ಪತ್ರೆ ವಾಸ ಹಾಗೂ ಸಾವಿನ ಪ್ರಮಾಣ ತಗ್ಗಿಸಲು ಇಸ್ರೇಲ್ ಲಸಿಕೆ ವಿತರಣೆ ವೇಳೆ ವೃದ್ಧರಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಜನಸಂಖ್ಯೆವಾರು ಚೀನಾ ನಂ.1:
ಚೀನಾ ಈವರೆಗೆ ತನ್ನ ಜನಸಂಖ್ಯೆಯ ಪೈಕಿ 45 ಲಕ್ಷ ಮಂದಿಗೆ ಲಸಿಕೆ ನೀಡಿದೆ. ಇಷ್ಟೊಂದು ಮಂದಿಗೆ ಲಸಿಕೆಯನ್ನು ಯಾವುದೇ ದೇಶ ನೀಡಿಲ್ಲ. 42.3 ಲಕ್ಷ ಮಂದಿಗೆ ಲಸಿಕೆ ನೀಡಿ ಅಮೆರಿಕ, 10.09 ಲಕ್ಷ ಜನರಿಗೆ ಲಸಿಕೆ ವಿತರಿಸಿ ಇಸ್ರೇಲ್ ನಂತರದ ಸ್ಥಾನದಲ್ಲಿವೆ.
ಫೈಝರ್ ನಂ.1:
35 ದೇಶಗಳ ಪೈಕಿ 32 ದೇಶಗಳಲ್ಲಿ ಫೈಝರ್, 2 ದೇಶಗಳಲ್ಲಿ ಮಾಡೆರ್ನಾ, 2 ದೇಶಗಳಲ್ಲಿ ಸ್ಪುಟ್ನಿಕ್, 2 ದೇಶಗಳಲ್ಲಿ ಚೀನಾ ಕಂಪನಿಗಳ ಲಸಿಕೆ ಬಳಸಲಾಗುತ್ತಿದೆ.
ಅತಿ ಹೆಚ್ಚು ಲಸಿಕೆ ವಿತರಣೆ ಟಾಪ್ 3 ದೇಶಗಳು
ಇಸ್ರೇಲ್ ಶೇ.12
ಬಹ್ರೈನ್ ಶೇ.3.53
ಬ್ರಿಟನ್ ಶೇ.1.39