ಇರಾನ್‌ ಅಣ್ವಸ್ತ್ರ ನೆಲೆಗೆ ಇಸ್ರೇಲ್‌ ಭಾರಿ ದಾಳಿ

Published : Jun 14, 2025, 04:09 AM IST
iran attack israel

ಸಾರಾಂಶ

ಕಳೆದ 20 ತಿಂಗಳಿನಿಂದ ನೆರೆಯ ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ಪ್ರದೇಶದ ಮೇಲೆ ಸತತ ದಾಳಿ ನಡೆಸುತ್ತಿರುವ ಇಸ್ರೇಲ್‌, ಶುಕ್ರವಾರ ಬೆಳಗ್ಗೆ ಹಾಗೂ ರಾತ್ರಿ ತನ್ನ ಮತ್ತೊಂದು ಶತ್ರು ದೇಶವಾದ ಇರಾನ್‌ ಮೇಲೆ ‘ಆಪರೇಷನ್‌ ರೈಸಿಂಗ್ ಲಯನ್‌’ ಹೆಸರಲ್ಲಿ 2 ಬಾರಿ ಭೀಕರ ವೈಮಾನಿಕ ದಾಳಿ ನಡೆಸಿದೆ.

ದುಬೈ/ತೆಹ್ರಾನ್‌/ಟೆಲ್‌ ಅವೀವ್‌: ಕಳೆದ 20 ತಿಂಗಳಿನಿಂದ ನೆರೆಯ ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ಪ್ರದೇಶದ ಮೇಲೆ ಸತತ ದಾಳಿ ನಡೆಸುತ್ತಿರುವ ಇಸ್ರೇಲ್‌, ಶುಕ್ರವಾರ ಬೆಳಗ್ಗೆ ಹಾಗೂ ರಾತ್ರಿ ತನ್ನ ಮತ್ತೊಂದು ಶತ್ರು ದೇಶವಾದ ಇರಾನ್‌ ಮೇಲೆ ‘ಆಪರೇಷನ್‌ ರೈಸಿಂಗ್ ಲಯನ್‌’ ಹೆಸರಲ್ಲಿ 2 ಬಾರಿ ಭೀಕರ ವೈಮಾನಿಕ ದಾಳಿ ನಡೆಸಿದೆ.

ಇರಾನ್‌ನ ಯುರೇನಿಯಂ ಸಂಸ್ಕರಣಾ ಘಟಕ, ಅಣುಬಾಂಬ್‌ ಸಂಬಂಧಿ ಘಟಕಗಳು, ಸೇನಾ ನೆಲೆ, ಕ್ಷಿಪಣಿ ಸಂಗ್ರಹಾಗಾರ, ಅಣು ವಿಜ್ಞಾನಿಗಳು, ಸೇನಾ ಮುಖ್ಯಸ್ಥರನ್ನು ಗುರಿಯಾಗಿಸಿ 200 ಸ್ಥಳಗಳ ಮೇಲೆ 200ಕ್ಕೂ ಹೆಚ್ಚು ಯುದ್ಧ ವಿಮಾನ ಬಳಸಿ ಇಸ್ರೇಲ್‌ ದಾಳಿ ಮಾಡಿದೆ. ದಾಳಿಯಲ್ಲಿ 2 ಇರಾನಿ ಸೇನಾಧಿಕಾರಿಗಳು ಸೇರಿ 78 ಮಂದಿ ಬಲಿಯಾಗಿದ್ದಾರೆ.

ಇದಕ್ಕೆ ಇರಾನ್‌ ಕೂಡ ಎದಿರೇಟು ನೀಡಿದ್ದು, ಜೆರುಸಲೇಂ ಹಾಗೂ ಟೆಲ್‌ ಅವಿವ್‌ ಮೇಲೆ ಶುಕ್ರವಾರ ತಡರಾತ್ರಿ ಕ್ಷಿಪಣಿ ಮೂಲಕ ಪ್ರತಿದಾಳಿ ಮಾಡಿದೆ. ಆದರೆ ಕ್ಷಿಪಣಿಗಳನ್ನು ವಾಯುರಕ್ಷಣಾ ವ್ಯವಸ್ಥೆ ಬಳಸಿ ನಿಷ್ಕ್ರಿಯ ಮಾಡಿದ್ದಾಗಿ ಇಸ್ರೇಲ್‌ ಹೇಳಿಕೊಂಡಿದೆ. ಆದಾಗ್ಯೂ ಇಸ್ರೇಲ್‌ಗೆ ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡುವುದಾಗಿ ಇರಾನಿ ನಾಯಕ ಅಯತೋಲ್ಲಾ ಖಮೇನಿ ಗುಡುಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನ ಎಲ್ಲ ಜನತೆಗೆ ಸರ್ಕಾರ ಬಂಕರ್‌ನಲ್ಲಿ ಅಡಗುವಂತೆ ಸೂಚನೆ ನೀಡಿದೆ.

ಇರಾನ್‌ನ 78 ಜನ ಬಲಿ:

ರೈಸಿಂಗ್‌ ಲಯನ್‌ ಹೆಸರಿನ ಈ ದಾಳಿಯಲ್ಲಿ ಇರಾನ್‌ನ ಅರೆಸೇನಾಪಡೆ ರೆವಲ್ಯೂಷನರಿ ಗಾಡ್ಸ್ಸ್‌ನ ಮುಖ್ಯಸ್ಥ ಜ. ಹೊಸ್ಸೇನ್‌ ಸಲಾಮಿ ಮತ್ತು ಇರಾನ್‌ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಮೊಹಮ್ಮದ್‌ ಬಘೇರಿ ಸೇರಿದಂತೆ ಸೇನೆಯ ಹಲವು ನಾಯಕರು, ಪರಮಾಣು, ಕ್ಷಿಪಣಿ ಯೋಜನೆಯಲ್ಲಿ ಭಾಗಿಯಾಗಿದ್ದ ಹಲವು ವಿಜ್ಞಾನಿಗಳು ಸೇರಿದಂತೆ 78 ಜನರು ಸಾವನ್ನಪ್ಪಿದ್ದು, 350ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಇರಾನ್‌ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ಜೀವಂತಾಗಿದ್ದಾರೆ ಎಂದು ಇರಾನ್‌ ಖಚಿತಪಡಿಸಿದೆ.

ಇನ್ನೊಂದೆಡೆ ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಯುರೇನಿಯಂ ಸಂಸ್ಕರಣಾ ಘಟಕ ಸೇರಿದಂತೆ ಪರಮಾಣು ಬಾಂಬ್‌ ತಯಾರಿಕೆಗೆ ನೆರವಾಗುತ್ತಿದ್ದ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಅವುಗಳ ಬಳಿ ಭಾರೀ ಪ್ರಮಾಣದ ಕಪ್ಪುಹೊಗೆ ಮೇಲೇರಿದ್ದು ಕಂಡುಬಂದಿದೆ. ಈ ಘಟಕಗಳಿಂದ ವಿಕಿರಣ ಸೋರಿಕೆ ಕುರಿತು ಇದುವರೆಗೂ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದರ ಮೇಲೆ ನಿಗಾ ವಹಿಸಲಾಗಿದೆ ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ ಹೇಳಿದೆ.

ಇದರ ಬೆನ್ನಲ್ಲೇ ಇರಾನ್‌ ಕೂಡಾ ಇಸ್ರೇಲ್ ಮೇಲೆ ನೂರಾರು ಡ್ರೋನ್‌ ಬಳಸಿ ದಾಳಿ ನಡೆಸಿದ್ದು, ಅವಗಳೆಲ್ಲವನ್ನೂ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ನಮ್ಮ ಅಸ್ತಿತ್ವಕ್ಕೆ ಅಪಾಯ ಎದುರಾದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ನಮ್ಮ ಮೇಲಿನ ಅಪಾಯ ನಿಲ್ಲುವವರೆಗೂ ದಾಳಿ ಮುಂದುವರೆಯಲಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ. ಜೊತೆಗೆ ಘಟನೆ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ಗಣ್ಯರಿಗೆ ಕರೆ ಮಾಡಿ ನೆತನ್ಯಾಹು ಮಾಹಿತಿ ನೀಡಿದ್ದಾರೆ.

ಇಸ್ರೇಲ್‌ ನಡೆಸಿದ ದಾಳಿ 1980ರಲ್ಲಿ ಇರಾನ್‌- ಇರಾಕ್‌ ನಡುವೆ ನಡೆದ ಭೀಕರ ಯುದ್ಧದ ಬಳಿಕ ಇರಾನ್‌ನ ಮೇಲಿನ ಅತಿದೊಡ್ಡ ದಾಳಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ವೈರತ್ವ ಇನ್ನಷ್ಟು ಹೆಚ್ಚಿಸುವ ಜೊತೆಗೆ ಯುದ್ಧ ತೀವ್ರವಾಗುವ ಆತಂಕವನ್ನೂ ಹುಟ್ಟುಹಾಕಿದೆ.

ದಾಳಿ ಏಕೆ?:

ಕಳೆದ ಕೆಲ ತಿಂಗಳಿನಿಂದ ಇರಾನ್‌ ಭಾರೀ ಪ್ರಮಾಣದಲ್ಲಿ ಪರಮಾಣು ಬಾಂಬ್‌ ತಯಾರಿಸಲು ಅಗತ್ಯವಾದ ಯುರೇನಿಯಂ ಅನ್ನು ಸಂಸ್ಕರಿಸಿದೆ. ಇದು ಕೆಲವೇ ದಿನಗಳಲ್ಲಿ ಕನಿಷ್ಠ 15 ಪರಮಾಣು ಬಾಂಬ್‌ ಸಿದ್ಧಪಡಿಸುವ ಸಾಮರ್ಥ್ಯವನ್ನು ಇರಾನ್‌ಗೆ ನೀಡಿದೆ. ಇದು ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವಕ್ಕೆ ಭಂಗ ತರುವ ಸಂಗತಿ. ಹೀಗಾಗಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇರಾನ್‌ನ ಪರಮಾಣು ಬಾಂಬ್‌ ತಯಾರಿ ಸಾಮರ್ಥ್ಯ ನಾಶ ಮಾಡಬೇಕು ಎನ್ನುವ ಉದ್ದೇಶದಿಂದ ಇರಾನ್‌ನ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಸ್ರೇಲ್‌ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.

ಇದರ ಜೊತೆಗೆ ಇಸ್ರೇಲ್‌ ವಿರುದ್ಧ ಸದಾ ದಾಳಿ ನಡೆಸುವ ಹಮಾಸ್‌, ಹಿಜ್ಬುಲ್ಲಾ ಉಗ್ರರಿಗೂ ಇರಾನ್‌ ಆರ್ಥಿಕ ಮತ್ತು ಸೇನಾ ನೆರವು ನೀಡುತ್ತಿದೆ. ಜೊತೆಗೆ ತನ್ನ ವಿರುದ್ಧ ಸಂಚು ರೂಪಿಸುವ ಇರಾಕ್‌, ಲೆಬನಾನ್‌, ಸಿರಿಯಾ, ಗಾಜಾದಲ್ಲಿನ ವಿವಿಧ ಸಂಘಟನೆಗಳನ್ನು ಇರಾನ್‌ ನಾನಾ ರೀತಿಯಲ್ಲಿ ಬೆಂಬಲಿಸುತ್ತಿದೆ ಎಂಬುದು ಇಸ್ರೇಲ್‌ ಆಕ್ರೋಶಕ್ಕೆ ಕಾರಣ.

ಇರಾನ್‌ ಎಚ್ಚರಿಕೆ:

ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆಯತೊಲ್ಲಾ ಖೊಮೇನಿ, ‘ಇಸ್ರೇಲ್‌ ತನ್ನ ದುಷ್ಟ ಮತ್ತು ರಕ್ತಸಿಕ್ತ ಕೈಗಳ ಮೂಲಕ ನಮ್ಮ ಗೌರವಾನ್ವಿಯ ದೇಶದ ಮೇಲೆ ದಾಳಿ ನಡೆಸಿದೆ. ವಸತಿ ಪ್ರದೇಶಗಳ ಮೇಲೆ ದಾಳಿಯ ಮೂಲಕ ಹಿಂದೆಂದಿಗಿಂತಲೂ ತನ್ನ ದುರುದ್ದೇಶವನ್ನು ಪ್ರದರ್ಶಿಸಿದೆ. ಇದಕ್ಕೆ ಸೂಕ್ತ ತಿರುಗೇಟು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಮೆರಿಕಕ್ಕೆ ಮಾಹಿತಿ:

ಅಮೆರಿಕ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿನ ತನ್ನ ದೂತಾವಾಸ ಸಿಬ್ಬಂದಿಯನ್ನು ಗುರುವಾರವೇ ಹಿಂದಕ್ಕೆ ಕರೆಸಿಕೊಂಡಿತ್ತು. ಇದು ದಾಳಿ ಕುರಿತು ಅಮೆರಿಕಕ್ಕೆ ಮಾಹಿತಿ ಇತ್ತು ಎಂಬ ಸುಳಿವು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿರಿಯಾ: ಶುಕ್ರವಾರದ ನಮಾಜ್ ವೇಳೆ ಮಸೀದಿಯಲ್ಲಿ ಸ್ಫೋಟ, 8 ಸಾವು, 18 ಮಂದಿಗೆ ಗಾಯ, ಎಲ್ಲೆಡೆ ಆಂಬ್ಯುಲೆನ್ಸ್ ಸೈರನ್‌ಗಳದ್ದೇ ಸದ್ದು!
ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ