
ಟೆಲ್ ಅವೀವ್: ತನ್ನ ಸೇನಾ ಸಾಮರ್ಥ್ಯ ಮತ್ತು ಸುದೀರ್ಘ ಸಂಘರ್ಷದ ಇತಿಹಾಸಕ್ಕೇ ಹೆಸರುವಾಸಿಯಾಗಿರುವ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚಿನ ಇರಾನ್ ಮೇಲೆ ಇಸ್ರೇಲ್‌ನ ನಿಗೂಢ ಮತ್ತು ಭೀಕರ ದಾಳಿಯ ಹಿಂದೆ ಮಹಿಳಾ ಗೂಢಚಾರಿನಿಯೊಬ್ಬಳ ಯಶಸ್ವಿ, ರಹಸ್ಯ ಕಾರ್ಯಾಚರಣೆ ಅಡಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ಮಾಸ್ಟರ್ ಪ್ಲಾನ್?:
ಇರಾನ್‌ನ ರಹಸ್ಯ ಮಾಹಿತಿ ಕದಿಯಲು ಮಾಸ್ಟರ್ ಪ್ಲಾನ್ ರೂಪಿಸಿತ್ತು. ಅದರಂತೆ ಫ್ರಾನ್ಸ್ ಮೂಲದ ಕ್ಯಾಥರೀನ್ ಪೆರೆಜ್ ಶಕ್ದಮ್ ಎಂಬಾಕೆಯನ್ನು ತನ್ನ ಕಾರ್ಯಾಚರಣೆಗೆ ಬಳಸಿತ್ತು. ಕಾರ್ಯಾಚರಣೆ ಭಾಗವಾಗಿ ಇರಾನ್‌ಗೆ ತೆರಳಿದ ಶಕ್ದಮ್, ತನಗೆ ಇಸ್ಲಾಂ ಧರ್ಮದ ಬಗ್ಗೆ ತಿಳಿಯಲು ಅಪಾರ ಆಸಕ್ತಿಯಿದೆ ಎಂದು ಹೇಳಿಕೊಂಡು ಶಿಯಾ ಪಂಗಡಕ್ಕೆ ಮತಾಂತರಗೊಂಡಿದ್ದಳು. ಬಳಿಕ ಇರಾನ್‌ನ ಸರ್ಕಾರಿ ನೌಕರರ ಪತ್ನಿಯರ ಸ್ನೇಹ ಸಂಪಾದಿಸಿದರು. ಹೀಗೆ ಅವರ ಮನೆಗೆ ನಿತ್ಯದ ಅತಿಥಿಯಾದರು.
ಆಕೆ ಇರಾನ್ ಅಧಿಕಾರಿಗಳು ಮತ್ತು ಅವರ ಪರಿವಾರದವರಿಗೆ ಎಷ್ಟರ ಮಟ್ಟಿಗೆ ಮೋಡಿ ಮಾಡಿ ವಿಶ್ವಾಸ ಗಳಿಸಿದ್ದಳೆಂದರೆ, ಸಾಮಾನ್ಯವಾಗಿ ಯಾರಿಗೂ ಪ್ರವೇಶ ಇರದ ಅಥವಾ ಕಠಿಣ ಪರಿಶೀಲನೆಯ ಬಳಿಕವಷ್ಟೇ ಪ್ರವೇಶವಿದ್ದ ಖಾಸಗಿ ಸ್ಥಳಗಳಲ್ಲೆಲ್ಲಾ ಸಲೀಸಾಗಿ ಓಡಾಡುತ್ತಿದ್ದಳು. ಹೀಗೆ ಮಾಡುತ್ತಲೇ, ಅನೇಕ ಫೋಟೋ ಮತ್ತು ರಹಸ್ಯ ಮಾಹಿತಿಗಳನ್ನು ಮೊಸಾದ್‌ಗೆ ಕಳಿಸಿಕೊಡುತ್ತಿದ್ದಳು.
ಪತ್ತೆ ಹೇಗೆ?:
ಇಸ್ರೇಲ್ ಜತೆಗೆ ಸಂಘರ್ಷ ಶುರುವಾಗುತ್ತಿದ್ದಂತೆ ಹಿರಿಯ ನಾಯಕರೆಲ್ಲ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೂ, ಅವರಿದ್ದ ಜಾಗದ ಮೇಲೆಯೇ ನಿಖರವಾದ ದಾಳಿ ನಡೆಸಲಾಗಿತ್ತು. ಸಂದೇಹ ದಟ್ಟವಾಗುತ್ತಿದ್ದಂತೆ ಇರಾನ್ ಗುಪ್ತಚರ ಸಂಸ್ಥೆ ತನಿಖೆ ಶುರು ಮಾಡಿದಾಗ, ಅಧಿಕಾರಿಗಳ ಜತೆ ಶಕ್ದಮ್ ತೆಗೆಸಿಕೊಂಡಿದ್ದ ಫೋಟೋಗಳು ಪತ್ತೆಯಾಗಿದ್ದವು. ಆದರೆ ಕಾಲ ಮಿಂಚಿತ್ತು. ಆಕೆ ಇದ್ದಕ್ಕಿದ್ದಂತೆ ಇರಾನ್‌ನಿಂದಲೇ ಕಣ್ಮರೆಯಾಗಿದ್ದಾಳೆ. ಶಕ್ದಮ್‌ಳನ್ನು ಹುಡುಕಲು ಮಾಡಲಾಗುತ್ತಿರುವ ಯತ್ನಗಳೆಲ್ಲಾ ನಿಷ್ಪ್ರಯೋಜಕವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ