
ಟೆಹೆರಾನ್ (ಮಾ.01) ಇರಾನ್ ಸರ್ವೋಚ್ಚ ನಾಯಕ ಅಲ್ ಖಮೆನೇನಿ ಹತ್ಯೆ ಬಳಿಕ ಇರಾನ್ ಕೆರಳಿದೆ. ಸಿಕ್ಕ ಸಿಕ್ಕ ಕಡೆ ದಾಳಿ ಮಾಡುತ್ತಿದೆ. ಅಮೆರಿಕ ವಿರುದ್ದ ಪ್ರತಿದಾಳಿ ಸಂಘಟಿಸುತ್ತಿದೆ. ಇರಾನ್ ದೇಶದಿಂದ ಕೆಲವೇ ದೂರದಲ್ಲಿರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡುತ್ತಿದೆ. ಇತ್ತ ಇರಾನ್ ನಗರದ ಮೇಲೆ ದಾಳಿಗೆ ಆಗಮಿಸತ್ತಿರುವ ಅಮೆರಿಕ ಹಾಗೂ ಇಸ್ರೇಲ್ ವಾಯುಪಡೆಗಳನ್ನೇ ಇರಾನ್ ಹೊಡೆದುರುಳಿಸುವ ಪ್ರಯತ್ನ ಮಾಡುತ್ತಿದೆ. ಇರಾನ್ ಪ್ರತಿದಾಳಿಯಲ್ಲಿ ಅಮೆರಿಕ ಮೂವರು ಯೋಧರು ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ಸಾವು ನೋವಿನ ಮಾಹಿತಿಯನ್ನು ಅಮೆರಿಕ ಖಚಿತಪಡಿಸಿದೆ.
ತನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖೊಮೇನಿ ಹತ್ಯೆಗೆ ಪ್ರತೀಕಾರವಾಗಿ, ಅಮೆರಿಕ-ಇಸ್ರೇಲ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ದಾಳಿಯಲ್ಲಿ ಯುಎಇ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇರಾನ್, ಯುಎಇ ಮೇಲೆ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಈವರೆಗೆ 165 ಬ್ಯಾಲಿಸ್ಟಿಕ್ ಕ್ಷಿಪಣಿ, 2 ಕ್ರೂಸ್ ಕ್ಷಿಪಣಿ ಮತ್ತು 541 ಡ್ರೋನ್‌ಗಳನ್ನು ಯುಎಇಯನ್ನು ಗುರಿಯಾಗಿಸಿ ಹಾರಿಸಲಾಗಿದೆ. ಯುಎಇಯ ರಕ್ಷಣಾ ವ್ಯವಸ್ಥೆಯು ಇವುಗಳಲ್ಲಿ ಬಹುತೇಕವನ್ನು ಹೊಡೆದುರುಳಿಸಿದೆ. ಆದರೂ, ಕ್ಷಿಪಣಿಗಳ ಅವಶೇಷಗಳು ಜನವಸತಿ ಪ್ರದೇಶಗಳ ಮೇಲೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರು ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದ ಪ್ರಜೆಗಳು ಎಂದು ಅಧಿಕೃತವಾಗಿ ತಿಳಿದುಬಂದಿದೆ. ಈ ದಾಳಿಗಳಲ್ಲಿ 58 ಜನರಿಗೆ ಗಾಯಗಳಾಗಿದ್ದು, ಅವರಲ್ಲಿ ಭಾರತೀಯರೂ ಸೇರಿದ್ದಾರೆ ಎಂದು ಯುಎಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಯುಎಇ ರಕ್ಷಣಾ ಸಚಿವಾಲಯದ ಪ್ರಕಾರ, 152 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 506 ಡ್ರೋನ್‌ಗಳನ್ನು ಆಕಾಶದಲ್ಲೇ ನಾಶಪಡಿಸಲಾಗಿದೆ. ಆದರೆ, 21 ಡ್ರೋನ್‌ಗಳು ಜನವಸತಿ ಪ್ರದೇಶಗಳಲ್ಲಿ ಬಿದ್ದಿದ್ದರಿಂದ ಈ ಸಾವು-ನೋವು ಸಂಭವಿಸಿದೆ. ಸದ್ಯ ಗಲ್ಫ್ ವಲಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಯುಎಇ ಕಟ್ಟೆಚ್ಚರ ವಹಿಸಿದೆ.
ಇರಾನ್‌ನ ಕ್ಷಿಪಣಿ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ, ಯುಎಇ ಮುಂದಿನ ಮೂರು ದಿನಗಳ ಕಾಲ ಹೈ ಅಲರ್ಟ್ ಘೋಷಿಸಿದೆ. ಮಾರ್ಚ್ 2, 3 ಮತ್ತು 4 ರಂದು ದೇಶದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. 10 ಮತ್ತು 12ನೇ ತರಗತಿಯ ಐಸಿಎಸ್‌ಇ ಮತ್ತು ಐಎಸ್‌ಸಿ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಈ ದಿನಗಳಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯದ ನೌಕರರಿಗೆ 'ವರ್ಕ್ ಫ್ರಂ ಹೋಮ್' ಮಾಡಲು ಸೂಚಿಸಲಾಗಿದೆ. ಪ್ರಮುಖ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ಜನರು ಅತ್ಯಂತ ಜಾಗರೂಕರಾಗಿರಬೇಕು ಎಂದು ಯುಎಇ ಸರ್ಕಾರ ತಿಳಿಸಿದೆ. ದುಬೈ ಗ್ಲೋಬಲ್ ವಿಲೇಜ್ ಅನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಗ್ಲೋಬಲ್ ವಿಲೇಜ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದಿನಿಂದ ಮುಂದಿನ ಆದೇಶದವರೆಗೆ ಗ್ಲೋಬಲ್ ವಿಲೇಜ್‌ಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಗಲ್ಫ್ ವಲಯದಲ್ಲಿ ಇರಾನ್‌ನ ಸೇನಾ ಕಾರ್ಯಾಚರಣೆ ಮತ್ತು ಕ್ಷಿಪಣಿ ದಾಳಿಗಳಿಂದಾಗಿ ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ಲೋಬಲ್ ವಿಲೇಜ್‌ಗೆ ಪ್ರವಾಸಿಗರು ಮತ್ತು ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ, ಜನಸಂದಣಿಯನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇರಾನ್‌ನಿಂದ ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಮುಂದುವರಿದರೆ, ದೇಶವು ಬಲವಾದ ರಕ್ಷಣೆ ಮತ್ತು ಪ್ರತಿದಾಳಿಗೆ ಮುಂದಾಗಲಿದೆ ಎಂದು ಯುಎಇ ಅಂತರಾಷ್ಟ್ರೀಯ ಸಹಕಾರ ಖಾತೆ ರಾಜ್ಯ ಸಚಿವೆ ರೀಮ್ ಅಲ್ ಹಾಶಿಮಿ ಎಚ್ಚರಿಕೆ ನೀಡಿದ್ದಾರೆ. 'ಸಿಎನ್‌ಎನ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಯುಎಇಯ ಕಠಿಣ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಗಲ್ಫ್ ವಲಯದ ದೇಶಗಳಲ್ಲಿರುವ ಅಮೆರಿಕನ್ ಸೇನಾ ನೆಲೆಗಳ ಮೇಲೆ ಇರಾನ್ ನಿನ್ನೆಯಿಂದ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯುಎಇ ಈ ಕಠಿಣ ಪ್ರತಿಕ್ರಿಯೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ