
ದುಬೈ: ತನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಿಂದ ಆಕ್ರೋಶಗೊಂಡಿರುವ ಇರಾನ್, ಶತ್ರು ದೇಶಗಳ ಮೇಲೆ ಭಾನುವಾರ ಪ್ರತೀಕಾರದ ದಾಳಿ ಆರಂಭಿಸಿದೆ. ಶನಿವಾರ ದಾಳಿ ನಡೆಸಿದ್ದ ಬಹುತೇಕ ಎಲ್ಲಾ ಕೊಲ್ಲಿ ದೇಶಗಳ ಮೇಲೆ ಭಾನುವಾರ ಕೂಡಾ ಕ್ಷಿಪಣಿ ಮತ್ತು ಡ್ರೋನ್ ಬಳಸಿ ದಾಳಿ ನಡೆಸಿದೆ. ಇದರಿಂದ ದುಬೈ ಸೇರಿದಂತೆ ಯುಎಇ, ಕುವೈತ್, ಬಹ್ರೈನ್, ಜೋರ್ಡನ್, ಸೌದಿ ಅರೇಬಿಯಾ ತತ್ತರಿಸಿವೆ.
ಇದಲ್ಲದೆ ಅಮೆರಿಕದ ಅತಿದೊಡ್ಡ ಯುದ್ಧನೌಕೆಗಳಲ್ಲಿ ಒಂದಾದ ಅಬ್ರಹಾಂ ಲಿಂಕನ್ ಮೇಲೂ ತನ್ನ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಇರಾನ್ ಸೇನೆ ಹೇಳಿದೆ. ಜತೆಗೆ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಇದೇ ಮೊದಲ ಬಾರಿ ಅಮೆರಿಕ ಯೋಧರು ಬಲಿಯಾಗಿದ್ದು, 3 ಯೋಧರು ಸಾವನ್ನಪ್ಪಿದ್ದಾರೆ.
ಮತ್ತೊಂದೆಡೆ ಇಸ್ರೇಲ್ ಕೂಡಾ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಇರಾನ್‌ನ ಹಲವು ಪ್ರದೇಶಗಳ ಮೇಲೆ ಭಾನುವಾರ ಬಾಂಬ್‌ಗಳ ಸುರಿಮಳೆಗೈದಿದೆ. ಅಮೆರಿಕವು ಇರಾನಿ ಯುದ್ಧನೌಕೆಯೊಂದನ್ನು ಮುಳುಗಿಸಿರುವುದಾಗಿ ಹೇಳಿಕೊಂಡಿದೆ. ಇದರೊಂದಿಗೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಶನಿವಾರ ಆರಂಭಗೊಂಡಿರುವ ಸಂಘರ್ಷ, ಸತತ 2ನೇ ದಿನವಾದ ಭಾನುವಾರ ಕೂಡಾ ಮುಂದುವರೆದಂತಾಗಿದೆ.
ಇರಾನ್ ಸೇನೆ, ಅಮೆರಿಕದ ಸೇನಾ ನೆಲೆಗಳಿರುವ ಕೊಲ್ಲಿ ದೇಶಗಳಾದ ದುಬೈ, ಕುವೈತ್, ಬಹ್ರೈನ್, ಜೋರ್ಡನ್, ಸೌದಿ ಅರೇಬಿಯಾದ ಮೇಲೆ ಭಾನುವಾರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ದುಬೈ ವಿಮಾನ ನಿಲ್ದಾಣ, ಹೋಟೆಲ್ ಒಂದರ ಮೇಲೆ ಕ್ಷಿಪಣಿ ಬಿದ್ದ ದೃಶ್ಯಗಳು ವೈರಲ್ ಆಘಿವೆ.
ಜೊತೆಗೆ ಒಮಾನ್‌ನ ತೈಲ ನೌಕೆಗಳ ಮೇಲೂ ದಾಳಿ ನಡೆಸಲಾಗಿದೆ. ಇದಲ್ಲದೆ ಬ್ರಿಟನ್‌ನ ನೌಕಾನೆಲೆ ಇರುವ ಸೈಪ್ರಸ್ ಮೇಲೂ ದಾಳಿ ನಡೆಸಲಾಗಿದೆ. ಸೇನಾ ನೆಲೆಗಳು, ವಿಮಾನ ನಿಲ್ದಾಣ, ಹೋಟೆಲ್‌ಗಳನ್ನು ಗುರಿಯಾಗಿಸಿ ಒಟ್ಟು 27 ಕಡೆ ದಾಳಿ ನಡೆಸಲಾಗಿದೆ ಎಂದು ಇರಾನ್ ಸೇನೆ ಹೇಳಿದೆ.
ಶನಿವಾರ ದುಬೈನ್ ಬುರ್ಜ್ ಅಲ್ ಅರಬ್ ಮತ್ತು ಪಾಮ್ ಜುಮೇರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಮೇಲಿನ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿತ್ತು.
ಕಳೆದೊಂದು ತಿಂಗಳಿಂದ ಇರಾನ್ ಹಿತ್ತಲಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ರೆವಲ್ಯೂಷ್ನರಿ ಗಾರ್ಡ್ಸ್(ಐಆರ್‌ಜಿಸಿ) ಘೋಷಿಸಿದೆ. ‘ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿದ್ದೇವೆ’ ಎಂದು ಐಆರ್‌ಜಿಸಿ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಅಮೆರಿಕದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
- ಅಮೆರಿಕ ಸಮರನೌಕೆ, ಇಸ್ರೇಲ್ ಮೇಲೆ ಕ್ಷಿಪಣಿ
- ದುಬೈ ಹೋಟೆಲ್, ಏರ್‌ಪೋರ್ಟ್ ಮೇಲೆ ದಾಳಿ
- ಒಮಾನ್‌ನ ನೌಕೆ, ಅಮೆರಿಕ ನೆಲೆಗಳು ಟಾರ್ಗೆಟ್
- ಇರಾನ್ ಸಮರ ನೌಕೆ ಮುಳುಗಿಸಿದ ಅಮೆರಿಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ