
ಟೆಹ್ರಾನ್/ದುಬೈ(ಏ.4): ಇರಾನ್ ಬಳಿಯಿರುವ ಶಸ್ತ್ರಾಸ್ತ್ರಗಳೆಲ್ಲಾ ಮುಗಿಯುತ್ತಾ ಬಂದಿದ್ದು, ಅವರು ಸಂಧಾನಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರನ್ನು ಶಿಲಾಯುಗಕ್ಕೆ ಇಳಿಸುತ್ತೇವೆ ಎಂಬ ಬೆದರಿಕೆ ಒಡ್ಡುತ್ತಿದ್ದಂತೆ ಇರಾನ್ ತನ್ನ ಬಲಪ್ರದರ್ಶನವನ್ನು ತೀವ್ರಗೊಳಿಸಿದೆ. ಇಸ್ರೇಲ್ ಮತ್ತು ಕೊಲ್ಲಿ ದೇಶಗಳನ್ನು ಗುರಿಯಾಗಿಸಿ ಶುಕ್ರವಾರವೂ ಭಾರೀ ದಾಳಿ ನಡೆಸಿದೆ.
ಯದ್ಧ 5ನೇ ವಾರಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೇ ಶುಕ್ರವಾರ, ಕುವೈತ್‌ನ ಮಿನಾ ಅಲ್ ಅಹ್ಮದಿ ತೈಲ ಸಂಸ್ಕರಣಾ ಘಟಕ ಮತ್ತು ನೀರು ಶುದ್ಧೀಕರಣ ಘಟಕ ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ. ದಾಳಿ ಬಳಿಕ ಸಂಸ್ಕರಣಾ ಘಟಕದಲ್ಲಿ ಭಾರೀ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಇನ್ನು ಸೌದಿ ಅರೇಬಿಯಾ, ಬಹ್ರೇನ್ ಮತ್ತು ಯುಎಇ ಮೇಲೂ ಇರಾನ್ ದಾಳಿ ನಡೆಸಿದೆ. ಯುಎಎನಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ಉತ್ಪಾದನಾ ಘಟಕವಾದ ಹಬ್‌ಶಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಇದನ್ನು ತಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಯುಎಇ ಹೇಳಿದೆ. ಆದರೆ ಈ ವೇಳೆ ಬಿದ್ದ ಅವಶೇಷಗಳಿಂದ ಘಟಕಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟಕದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಇದೇ ವೇಳೆ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಪರಮಾಣು ಕೇಂದ್ರ ಇರುವ ಇಸ್ಪ್‌ಹಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ.
ಈ ನಡುವೆ ಕ್ರೊವೇಷಿಯಾದಲ್ಲಿ ದುರಸ್ತಿಗೆ ಒಳಪಟ್ಟಿದ್ದ ಅಮೆರಿಕದ ಅತಿದೊಡ್ಡ ಯುದ್ಧನೌಕೆಯಾದ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಮರಳಿ ಇದೀಗ ರಾಷ್ಟ್ರೀಯ ಸೇವೆಗೆ ಅಣಿಯಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ. ಉಳಿದಂತೆ ಅಮೆರಿಕದ ಇನ್ನೆರೆಡು ಯುದ್ಧ ನೌಕೆಗಳಾದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಅರೇಬಿಯನ್ ಸಮುದ್ರದಲ್ಲಿ ಬೀಡುಬಿಟ್ಟಿದ್ದರೆ, ಯುಎಸ್‌ಎಸ್ ಜಾರ್ಜ್ ಎಚ್.ಡಬ್ಲ್ಯು ಬುಷ್ ನೌಕೆ ನೋರ್ಫಾಕ್‌ನಿಂದ ಮಧ್ಯಪ್ರಾಚ್ಯದತ್ತ ಪ್ರಯಾಣ ಬೆಳೆಸಿದೆ.
ಟೆಹ್ರಾನ್: ಅಮೆರಿಕ ಭೂದಾಳಿಗೆ ಸಜ್ಜಾಗುತ್ತಿರುವ ವರದಿಗಳ ನಡುವೆಯೇ, ಇರಾನ್‌ನ ಅರೆಸೇನಾಪಡೆಯಾದ ರೆವಲ್ಯೂನರಿ ಗಾರ್ಡ್ಸ್ ತನ್ನ ಬಸಿಜ್ ಪಡೆಗೆ 12 ವರ್ಷದ ಚಿಕ್ಕಮಕ್ಕಳನ್ನೂ ನೇಮಕ ಮಾಡಿಕೊಳ್ಳುತ್ತಿದೆ ಎಂದು ಆಮ್ನೆಸ್ಟಿ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಚಿಕ್ಕಮಕ್ಕಳ ಕೈಗೆ ಕಲಾಶ್ನಿಕೋವ್‌ನಂಥ ಅತ್ಯಾಧುನಿಕ ಗನ್‌ಗಳನ್ನು ಕೊಟ್ಟು ಅವರನ್ನು ತಪಾಸಣಾ ಕೇಂದ್ರಗಳ ಬಳಿಕ, ಪಹರೆಗೆ ನಿಯೋಜಿಸಲಾಗುತ್ತಿದೆ ಎಂದು ಸಂಸ್ಥೆ ಹೇಳೀದೆ.
ದುಬೈ: ಇರಾನ್ ಕಡೆಯಿಂದ ಹಾರಿಬಂದ ಕ್ಷಿಪಣಿಗಳನ್ನು ಯುಎಇ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಆದರೆ ಅವುಗಳ ಭಾಗಗಳು ಬಿದ್ದು ಅಬುಧಾಬಿಯಲ್ಲಿ 5 ಭಾರತೀಯರು ಸೇರಿ 6 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಶುಕ್ರವಾರ 18 ಬ್ಯಾಲಿಸ್ಟಿಕ್ ಕ್ಷಿಪಣಿ, 4 ಕ್ರೂಸ್ ಕ್ಷಿಪಣಿ ಮತ್ತು 47 ಯುಎಇಗಳನ್ನು ಇರಾನ್ ಹಾರಿಸಿದ್ದು, ಅವೆಲ್ಲವನ್ನು ಹೊಡೆದಿರುವುದಾಗಿ ಯುಎಇ ಹೇಳಿದೆ.
ಟೆಹ್ರಾನ್: ‘ಹೋರ್ಮುಜ್ ನಿಯಂತ್ರಣ ನಮ್ಮ ಮತ್ತು ಒಮಾನ್ ಕೈಲಿದೆ’ ಎಂದಿದ್ದ ಇರಾನ್, ಆ ಜಲಸಂಧಿಯ ನಿರ್ವಹಣೆಯನ್ನು ಒಮಾನ್ ಜತೆ ಸೇರಿ ನಡೆಸಲು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯ ಉದ್ದೇಶ, ಆ ಮಾರ್ಗದಲ್ಲಿ ಸುರಕ್ಷಿತ ಸಾಗಣೆ ಸುಗಮಗೊಳಿಸಲು ಹಡಗುಗಳಿಗೆ ಉತ್ತಮ ಸೇವೆ ಒದಗಿಸುವುದು ಎನ್ನಲಾಗಿದೆ. ಆದರೆ ಈ ಬಗ್ಗೆ ಒಮಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ