
ಟೆಹ್ರಾನ್: ತನ್ನ ಮೇಲೆ ದಾಳಿ ಮಾಡುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತತ ಸುಳಿವುಗಳನ್ನು ನೀಡುತ್ತಿರುವ ಬೆನ್ನಲ್ಲೇ ಇರಾನ್ ಸಮರಾಭ್ಯಾಸ ಆರಂಭಿಸಿದೆ. ಇದೇ ವೇಳೆ, ‘ಅಮೆರಿಕವು ನಮ್ಮ ಮೇಲೆ ದಾಳಿ ಮಾಡಿದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿರುವ 3 ಸೇನಾ ನೆಲೆಗಳ ಮೇಲೆ ದಾಳಿ ಮಾಡಬೇಕಾಗುತ್ತದೆ ಎಂದು ಇರಾನ್ ಬುಧವಾರ ಎಚ್ಚರಿಸಿದೆ.
ಇರಾನ್ 3 ರಾಜತಾಂತ್ರಿಕರು ರಾಯಿಟರ್ಸ್ ಸುದ್ದಿ ಸಂಸ್ಥೆ ಜತೆ ಮಾತನಾಡಿ, ‘ನಾವು ಎಲ್ಲ ಶಸ್ತ್ರಾಸ್ತ್ರ, ಸೇನೆಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ ಕತಾರ್‌ನಲ್ಲಿನ ಅಮೆರಿಕದ ಸೇನಾನೆಲೆ ಸೇರಿ ಮಧ್ಯಪ್ರಾಚ್ಯದಲ್ಲಿನ 3 ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡಲಿದ್ದೇವೆ’ ಎಂದಿದ್ದಾರೆ.
ಇದರ ಬೆನ್ನಲ್ಲೇ ಕತಾರ್‌ನಲ್ಲಿರುವ ಅಮೆರಿಕದ ‘ಅಲ್ ಉದೈದ್’ ವಾಯುನೆಲೆಯಿಂದ ಹೊರಹೋಗುವಂತೆ ಕೆಲವು ಸಿಬ್ಬಂದಿಗೆ ಆ ದೇಶ ಸೂಚಿಸಿದೆ ಎಂದು ಮೂವರು ರಾಜತಾಂತ್ರಿಕರು ತಿಳಿಸಿದ್ದಾರೆ.
ರಾಷ್ಟ್ರವ್ಯಾಪಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮತ್ತು ಅಮೆರಿಕದ ದಾಳಿ ಮುನ್ಸೂಚನೆ ಹಿನ್ನೆಲೆಯಲ್ಲಿ ಇರಾನ್ ತನ್ನ ಪರ್ಷಿಯನ್ ಕೊಲ್ಲಿ ಕರಾವಳಿಯಲ್ಲಿ ಮತ್ತು ಇರಾಕ್ ಮತ್ತು ಅಜೆರ್ಬೈಜಾನ್ ಗಡಿಯಲ್ಲಿರುವ ಪ್ರದೇಶಗಳಲ್ಲಿ ನೇರ ಗುಂಡಿನ ಕವಾಯತು (ಗನ್‌ಫೈರ್ ಡ್ರಿಲ್) ನಡೆಸುತ್ತಿದೆ.
ರಕ್ಷಣಾ ವಿಶ್ಲೇಷಕರ ಪ್ರಕಾರ, ಈ ಸಮರಾಭ್ಯಾಸಗಳು ಶತ್ರು ವಿಮಾನಗಳನ್ನು ಹೊಡೆದುರುಳಿಸಲು ವಿನ್ಯಾಸಗೊಳಿಸಲಾದ ವಿಮಾನ ನಿಗ್ರಹ ಗನ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಹೀಗಾಗಿಯೇ ಇರಾನಿ ವಾಯುಯಾನ ಅಧಿಕಾರಿಗಳು ವಾಯುಪಡೆಯವರಿಗೆ 3-4 ದಿನದಲ್ಲಿ ಕನಿಷ್ಠ 20 ಸೂಚನೆಗಳನ್ನು (NOTAMs) ನೀಡಿದ್ದು, ನಾಗರಿಕ ವಿಮಾನಗಳು ಸಾಗುವ ದಕ್ಷಿಣ ಮತ್ತು ವಾಯವ್ಯ ಇರಾನ್‌ನ ಅಪಾಯದ ವಲಯಗಳಲ್ಲಿ ಸಮರಾಭ್ಯಾಸ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ