
ನವದೆಹಲಿ: ಕ್ಷಣಕ್ಷಣಕ್ಕೂ ಅಮೆರಿಕ ದಾಳಿಯ ಭೀತಿ ಹೆಚ್ಚಾಗುತ್ತಿರುವ ನಡುವೆಯೇ ಇರಾನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ವಿಮಾನದ ಮೂಲಕ ತವರಿಗೆ ಕರೆತರಲು ಭಾರತ ಸರ್ಕಾರ ಸಜ್ಜಾಗಿದೆ. ಎಲ್ಲವೂ ಅಂದುಕೊಂಡರೆ ನಡೆದರೆ ಮೊದಲ ತಂಡ ಶುಕ್ರವಾರ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ರಾಜಧಾನಿ ಟೆಹ್ರಾನ್ ಸೇರಿದಂತೆ ಇರಾನ್‌ನ ವಿವಿಧ ಭಾಗಗಳಲ್ಲಿ 10000ಕ್ಕೂ ಹೆಚ್ಚು ಭಾರತೀಯರಿದ್ದಾರೆ. ಈ ಪೈಕಿ ತವರಿಗೆ ಮರಳಲು ಆಸಕ್ತಿ ಹೊಂದಿದವರನ್ನು ಆದ್ಯತೆ ಮೇರೆಗೆ ವಿಮಾನದ ಮೂಲಕ ಕರೆತರಲು ಸರ್ಕಾರ ಯೋಜನೆ ರೂಪಿಸಿದೆ.
ಈ ಸಂಬಂಧ ಈಗಾಗಲೇ ಭಾರತ ಸರ್ಕಾರ ಇರಾನ್ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳು ಸೇರಿದಂತೆ ತನ್ನ ನಾಗರಿಕರ ಸುರಕ್ಷಿತ ತೆರವು ಕಾರ್ಯಾಚರಣೆಗೆ ಅಗತ್ಯ ಬೆಂಬಲ ಕೋರಿದೆ. ಜೊತೆಗೆ ಇರಾನ್‌ನಲ್ಲಿ ಭಾರತೀಯರಿಗೆ ಆದಷ್ಟು ಬೇಗ ದೇಶ ತೊರೆಯುವಂತೆ ಮತ್ತೊಮ್ಮೆ ಮುನ್ನೆಚ್ಚರಿಕೆ ನೀಡಿದೆ.
ಭಾರತೀಯ ಅಧಿಕಾರಿಗಳ ತಂಡ ಈಗಾಗಲೇ ಇರಾನ್‌ನಲ್ಲಿ ಪರಿಸ್ಥಿತಿಗಳನ್ನು ಪರಿಶೀಲಿಸಿ ಏರ್‌ಲಿಫ್ಟ್‌ಗೆ ಅಗತ್ಯವಾದ ಸಿದ್ಧತೆ ಆರಂಭಿಸಿದೆ. ಆದರೆ ಬಹುತೇಕ ಕಡೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಂಡಿರುವುದರಿಂದ ಸಂವಹನಕ್ಕೂ ತೊಡಕಾಗಿದೆ.
ಇದರ ಹೊರತಾಗಿಯೂ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ಪಟ್ಟಿ ಅಂತಿಮಗೊಳಿಸುವಲ್ಲಿ ನಿರತವಾಗಿದೆ. ಮೂಲಗಳ ಪ್ರಕಾರ, ಶುಕ್ರವಾರ ತವರಿಗೆ ಮರಳುವ ಮೊದಲ ತಂಡದಲ್ಲಿ ಟೆಹ್ರಾನ್‌ನ ಗೊಲೆಸ್ಟಾನ್ ವಿವಿ ಮತ್ತು ಶಹೀದ್ ಬೆಹಷ್ತಿ ವಿವಿಯ ವಿದ್ಯಾರ್ಥಿಗಳು ಇರುವ ಸಾಧ್ಯತೆ ಇದೆ. ಅವರಿಗೆಲ್ಲಾ ಶುಕ್ರವಾರ ಬೆಳಗ್ಗೆ 8 ಗಂಟೆಗೆ ವೇಳೆಗೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರವು ಈ ಹಿಂದೆಯೂ ಭಾರತೀಯರು ಯುದ್ಧದ ಪರಿಸ್ಥಿತಿಯಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡಿದ್ದಾಗ ಅವರ ತೆರವಿಗೆ ಹಲವು ಬಾರಿ ಕಾರ್ಯಾಚರಣೆ ಕೈಗೊಂಡಿತ್ತು. ಇರಾನ್ - ಇಸ್ರೇಲ್ ಸಂಘರ್ಷದಲ್ಲಿ ‘ಆಪರೇಷನ್ ಸಿಂಧು’, ರಷ್ಯಾ- ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’, ಇಸ್ರೇಲ್ - ಹಮಾಸ್ ಸಮರದಲ್ಲಿ ‘ ಆಪರೇಷನ್ ಅಜಯ್’, ಅಫ್ಘಾನಿಸ್ತಾನ ತಾಲಿಬಾನ್ ವಶವಾದಾಗ ‘ಆಪರೇಷನ್ ದೇವಿ ಶಕ್ತಿ ’ ನಡೆಸಲಾಗಿತ್ತು.
- ರಾಜಧಾನಿ ಟೆಹ್ರಾನ್ ಸೇರಿ ಇರಾನ್ ವಿವಿಧ ಭಾಗಗಳಲ್ಲಿ 10 ಸಾವಿರಕ್ಕೂ ಅಧಿಕ ಭಾರತೀಯರು
- ಭಾರತಕ್ಕೆ ಮರಳಲು ಆಸಕ್ತಿ ಇರುವವರನ್ನು ಆದ್ಯತೆ ಮೇರೆಗೆ ಕರೆತರಲು ಕೇಂದ್ರದ ಯೋಜನೆ
- ಭಾರತೀಯರ ತೆರವು ಕಾರ್ಯಾಚರಣೆಗೆ ಇರಾನ್ ಸರ್ಕಾರದಿಂದ ಬೆಂಬಲ ಕೋರಿದ ಕೇಂದ್ರ
- ಶುಕ್ರವಾರ ಬೆಳಗ್ಗೆ 8ರ ವೇಳೆ ಸಿದ್ಧವಾಗಿರಲು ಭಾರತೀಯ ವಿದ್ಯಾರ್ಥಿಗಳಿಗೆ ಸರ್ಕಾರ ಸೂಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ