ಕೊರಿಯಾ, ಇಟಲಿ, ಮಧ್ಯಪ್ರಾಚ್ಯಕ್ಕೂ ಹಬ್ಬಿದ ಕೊರೋನಾ ವೈರಸ್‌!

By Kannadaprabha NewsFirst Published Feb 23, 2020, 7:39 AM IST
Highlights

ಕೊರೋನಾ ಸೋಂಕು ಈಗ ಜಾಗತಿಕ ಪಿಡುಗು?| ಕೊರಿಯಾ, ಇಟಲಿ, ಮಧ್ಯಪ್ರಾಚ್ಯಕ್ಕೂ ಹಬ್ಬಿದ ವೈರಸ್‌| ಆಫ್ರಿಕಾದ ಸೋಂಕು ನಿಗ್ರಹ ದೌರ್ಬಲ್ಯ ಬಗ್ಗೆ ಆತಂಕ

ಟೆಹ್ರಾನ್‌[ಫೆ.23]: ಚೀನಾದಲ್ಲಿ 76000ಕ್ಕೂ ಜನರಿಗೆ ತಗುಲಿ, ಈಗಾಗಲೇ 2345 ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ಸೋಂಕು ನಿಧಾನವಾಗಿ ಜಾಗತಿಕ ಪಿಡುಗಾಗಿ ಹೊರಹೊಮ್ಮುತ್ತಿರುವ ಲಕ್ಷಣಗಳು ಕಂಡುಬಂದಿದೆ. ಸೋಂಕು ನಿಯಂತ್ರಣಕ್ಕೆ ನಾನಾ ಕ್ರಮ ಕೈಗೊಂಡ ಹೊರತಾಗಿಯೂ ದಕ್ಷಿಣ ಕೊರಿಯಾ, ಇರಾನ್‌, ಯುಇಎ, ಇಟಲಿಯಲ್ಲಿ ದಿನೇ ದಿನೇ ಸೋಂಕಿಗೆ ತುತ್ತಾದವರು ಮತ್ತು ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಆತಂಕ ಹುಟ್ಟುಹಾಕಿದೆ.

ಈ ನಡುವೆ ಆರೋಗ್ಯ ಸೇವೆಗಳು ಅಷ್ಟೇನು ಹೇಳಿಕೊಳ್ಳುವ ಮಟ್ಟದಲ್ಲಿ ಇರದ ಆಫ್ರಿಕಾ ದೇಶಗಳಲ್ಲಿ ಸೋಂಕು ಎದುರಿಸಲು ಸಜ್ಜಾಗಿರುವ ಸ್ಥಿತಿಗತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಮೂಲಕ ಆ ರಾಷ್ಟ್ರಗಳಲ್ಲಿ ಈಗಾಗಲೇ ಸೋಂಕು ಹಬ್ಬಿದ್ದರೂ ಅದು ಗಮನಕ್ಕೆ ಬರದೇ ಇರುವ ಸಾಧ್ಯತೆ ದಟ್ಟವಾಗಿದೆ ಎಂಬ ಸುಳಿವನ್ನು ನೀಡಿದೆ.

ದ.ಕೊರಿಯಾ:

ದಕ್ಷಿಣ ಕೊರಿಯಾದಲ್ಲಿ ಶನಿವಾರ ಒಂದೇ ದಿನ 142ರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ದೇಶದಲ್ಲಿ ವೈರಸ್‌ ತಗುಲಿದವರ ಸಂಖ್ಯೆ 346ಕ್ಕೆ ಏರಿದೆ. ಚೀನಾ ಹೊರತುಪಡಿಸಿ ಇಷ್ಟುದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿರುವ ಮತ್ತೊಂದು ದೇಶವಾಗಿ ಹೊರಹೊಮ್ಮಿರುವ ಕಾರಣ ದಕ್ಷಿಣ ಕೊರಿಯಾದಲ್ಲಿ ಭಾರೀ ಆತಂಕ ಕಂಡುಬಂದಿದೆ. ಇದುವರೆಗೆ ದೇಶದಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

ಇರಾನ್‌:

ಇರಾನ್‌ನಲ್ಲಿ 10 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಪೀಡಿತರ ಸಂಖ್ಯೆ 28ಕ್ಕೆ ಏರಿದೆ. ಜೊತೆಗೆ ಶನಿವಾರ ಸೋಂಕಿಗೆ ತುತ್ತಾಗಿದ್ದ ರೋಗಿಯೊಬ್ಬರು ಸಾವನ್ನಪ್ಪುವುದರೊಂದಿಗೆ 5 ಜನ ಸಾವನ್ನಪ್ಪಿದಂತಾಗಿದೆ. ಈ ನಡುವೆ ರಾಜಧಾನಿ ಟೆಹ್ರಾನ್‌ ಸೇರಿದಂತೆ ಹಲವು ನಗರಗಳಲ್ಲಿ ರೋಗ ಬರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತೊಡುವ ಮಾಸ್ಕ್‌ ಮತ್ತು ಇತರೆ ಕೆಲವು ಔಷಧಗಳ ಕೊರತೆ ಎದುರಾಗಿದೆ.

ಇಟಲಿ:

ಇಟಲಿಯ ಕೊಡೊಗ್ನೋ ಎಂಬ ಸಣ್ಣ ನಗರದಲ್ಲಿ ಕೊರೋನಾ ವೈರಸ್‌ ಶನಿವಾರ ಎರಡನೇ ಬಲಿ ಪಡೆದಿದೆ. ಇದು ಯುರೋಪ್‌ನಲ್ಲಿ ಸೋಂಕಿಗೆ ಬಲಿಯಾದ ಮೊದಲ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಮೂವರು ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ತುರ್ತು ಕೊಠಡಿಯಿಂದ ದೂರ ಇರುವಂತೆ ಸಾರ್ವಜನರಿಗೆ ಎಚ್ಚರಿಕೆ ನೀಡಲಾಗಿದೆ.

ಯುಇಎ:

ಕೊಲ್ಲಿ ದೇಶ ಯುಎಇನಲ್ಲಿ ಹೊಸದಾಗಿ ಇಬ್ಬರಲ್ಲಿ ಸೋಂಕು ತಗುಲಿದ್ದು, ಇದರೊಂದಿಗೆ ಒಟ್ಟು 11 ಜನರು ಕೊರೋನಾದಿಂದ ಬಳಲುತ್ತಿರುವಂತೆ ಆಗಿದೆ.

ಡಬ್ಲ್ಯುಎಚ್‌ಒ ಎಚ್ಚರಿಕೆ:

ಈ ನಡುವೆ ಆಫ್ರಿಕಾ ದೇಶಗಳು ಕೊರೋನಾ ಸೋಂಕು ಎದುರಿಸಲು ಇನ್ನಷ್ಟುಸಜ್ಜಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಆಫ್ರಿಕಾ ದೇಶಗಳ ಆರೋಗ್ಯ ಸಚಿವರನ್ನು ಉದ್ದೇಶಿಸಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಘೇಬ್ರಿಯೇಸುಸ್‌, ‘ನಮಗಿರುವ ಅತ್ಯಂತ ದೊಡ್ಡ ಕಳವಳವೆಂದರೆ, ಆರೋಗ್ಯ ವ್ಯವಸ್ಥೆ ದುರ್ಬಲವಾಗಿರುವ ದೇಶಗಳಲ್ಲಿ ಸೋಂಕು ಹರಡುವ ಬಗ್ಗೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆಫ್ರಿಕಾ ದೇಶಗಳು ಕೊರೋನಾ ಸೋಂಕನ್ನು ಇನ್ನಷ್ಟುಒಗ್ಗೂಡಿ ಎದುರಿಸಬೇಕಾದ ಅಗತ್ಯವಿದೆ. ಡಬ್ಲ್ಯುಎಚ್‌ ಗುರುತಿಸಿರುವ ಆಫ್ರಿಕಾ ದೇಶಗಳಲ್ಲಿ ಈಗಾಗಲೇ 200 ಶಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಈಜಿಪ್ಟ್‌ನಲ್ಲಿ ಒಂದು ಪ್ರಕರಣದಲ್ಲಿ ಮಾತ್ರವೇ ನೆಗೆಟಿವ್‌ ವರದಿ ಬಂದಿದೆ. ಒಂದು ವೇಳೆ ಉಳಿದ ಪ್ರಕರಣಗಳಲ್ಲಿ ಯಾವುದಾದರೂ ಪಾಸಿಟಿವ್‌ ವರದಿ ಬಂದಿದ್ದೇ ಆದಲ್ಲಿ ಆಫ್ರಿಕಾ ದೇಶಗಳಲ್ಲಿ ಅದರ ನಿಗ್ರಹ ದೊಡ್ಡ ಸವಾಲಾಗಬಹುದು’ ಎಂದು ಎಚ್ಚರಿಸಿದ್ದಾರೆ.

click me!