ಅಹಮದಾಬಾದಲ್ಲಿ ನನ್ನ ಸ್ವಾಗತಕ್ಕೆ 1 ಕೋಟಿ ಜನ ಬರ್ತಾರೆ: ಟ್ರಂಪ್‌!

By Suvarna NewsFirst Published Feb 22, 2020, 4:43 PM IST
Highlights

ಪ್ರಧಾನಿ ಮೋದಿಯೇ ನನಗೆ ಈ ಮಾತು ಹೇಳಿದ್ದಾರೆ| ಅಹಮದಾಬಾದಲ್ಲಿ ನನ್ನ ಸ್ವಾಗತಕ್ಕೆ 1 ಕೋಟಿ ಜನ ಬರ್ತಾರೆ: ಟ್ರಂಪ್‌!| ದಾರಿಯುದ್ದಕ್ಕೂ ಕೋಟಿ ಜನ ನಿಲ್ಲಲಿದ್ದಾರೆ ಎಂದಿದ್ದಾರೆ| ಅಮೆರಿಕ ಅಧ್ಯಕ್ಷರ ಹೇಳಿಕೆಯಿಂದ ತೀವ್ರ ಕುತೂಹಲ

ವಾಷಿಂಗ್ಟನ್‌[ಫೆ.22]: ಚೊಚ್ಚಲ ಭಾರತ ಪ್ರವಾಸ ಕೈಗೊಳ್ಳುತ್ತಿರುವ ತಮಗೆ ಅದ್ಧೂರಿ ಸ್ವಾಗತ ಕೋರಲು ಗುಜರಾತಿನ ಅಹಮದಾಬಾದ್‌ನಲ್ಲಿ 1 ಕೋಟಿ ಜನರು ಬರಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಕೆಲ ದಿನಗಳಿಂದ 50ರಿಂದ 70 ಲಕ್ಷ ಜನ ತಮ್ಮ ಸ್ವಾಗತಕ್ಕೆ ಸೇರಲಿದ್ದಾರೆ ಎಂದು ಹೇಳಿಕೊಂಡು ಬಂದಿದ್ದ ಟ್ರಂಪ್‌, ಕೊಲರಾಡೋದಲ್ಲಿ ನಡೆದ ಸಮಾವೇಶವೊಂದರಲ್ಲಿ ಈ ಸಂಖ್ಯೆಯನ್ನು ಏಕಾಏಕಿ 1 ಕೋಟಿಗೆ ಹೆಚ್ಚಿಸಿದ್ದಾರೆ. ಈ ಕುರಿತು ಮೋದಿ ಅವರೇ ತಮಗೆ ಮಾಹಿತಿ ನೀಡಿದ್ದಾರೆ ಎಂದೂ ಹೇಳಿದ್ದಾರೆ.

ದೆಹಲಿ ಸರ್ಕಾರಿ ಶಾಲೆಗೆ ಮೆಲಾನಿಯಾ ಭೇಟಿ: ಸಿಸೋಡಿಯಾ, ಕೇಜ್ರಿವಾಲ್‌ಗಿಲ್ಲ ಆಹ್ವಾನ!

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ್ದ ಟ್ರಂಪ್‌, ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ 70 ಲಕ್ಷ ಜನರು ಸೇರಲಿದ್ದಾರೆ ಎಂದು ಮೋದಿ ಹೇಳಿದ್ದಾರೆ ಎಂದು ತಿಳಿಸಿದ್ದರು. ಅದಕ್ಕೂ ಮುನ್ನ 5ರಿಂದ 7 ದಶಲಕ್ಷ ಜನರಿಂದ ಸ್ವಾಗತ ದೊರೆಯಲಿದೆ ಎಂದು ಹೇಳಿಕೊಂಡು ಬಂದಿದ್ದರು. ಆದರೆ ಗುರುವಾರ ಕೊಲರಾಡೋದಲ್ಲಿ ಮಾತನಾಡಿ 1 ಕೋಟಿ ಜನರು ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

‘1 ಕೋಟಿ ಜನರು ನಿಮ್ಮ ಸ್ವಾಗತಕ್ಕೆ ಬರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಆದರೆ ಇಲ್ಲಿ ಸಮಸ್ಯೆಯಿದೆ. ಕ್ರೀಡಾಂಗಣ ಭರ್ತಿಯಾಗಿರುತ್ತದೆ. ಸಹಸ್ರಾರು ಜನ ಒಳ ಬರಲು ಆಗುವುದಿಲ್ಲ’ ಎಂದೂ ಹೇಳಿದ್ದಾರೆ.

ಅಹಮದಾಬಾದ್‌ನ ನಗರಪಾಲಿಕೆ ಅಧಿಕಾರಿಗಳ ಪ್ರಕಾರ, ಆ ನಗರದ ಜನಸಂಖ್ಯೆಯೇ 70 ಲಕ್ಷ! ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಅಂಗಳವಾಗಿರುವ ಮೊಟೆರಾ ಕ್ರೀಡಾಂಗಣ 22 ಕಿ.ಮೀ. ದೂರವಿದೆ. ಈ ಮಾರ್ಗದಲ್ಲಿ 1ರಿಂದ 2 ಲಕ್ಷ ಜನರು ಸೇರಬಹುದು ಎಂದು ಅಹಮದಾಬಾದ್‌ ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ ಟ್ರಂಪ್‌ 1 ಕೋಟಿ ಜನರು ಬರುತ್ತಾರೆ ಎಂದು ಹೇಳುತ್ತಿರುವುದು ಸ್ಥಳೀಯ ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ.

click me!