ರಷ್ಯಾ-ಉಕ್ರೇನ್ ಯುದ್ಧದ ನಡುವೆ ಇನ್ಫೋಸಿಸ್‌ನಲ್ಲಿನ ಷೇರುಗಳ ವಿಚಾರದಿಂದಾಗಿ ಬ್ರಿಟನ್ ವಿತ್ತ ಸಚಿವ ರಿಷಿ ಸುನಕ್ ಚರ್ಚೆಯಲ್ಲಿದ್ದಾರೆ. ಹೀಗಿರುವಾಗ ಅವರ ಪತ್ನಿ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮಗಳು ಅಕ್ಷತಾ ಹೆಸರು ಕೂಡಾ ಭಾರೀ ಸದ್ದು ಮಾಡುತ್ತಿದೆ. ಅಕ್ಷತಾ ಬ್ರಿಟನ್ ರಾಣಿಗಿಂತಳು ದೊಡ್ಡ ಶ್ರೀಮಂತೆ ಎನ್ನಲಾಗಿದೆ.
ಲಂಡನ್(ಏ.09): ವಿವಾದದಲಲ್ಲಿ ಸಿಲುಕಿರುವ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿ ಭಾರತೀಯ ಮೂಲದ ಅಕ್ಷತಾ ಮೂರ್ತಿ ಅವರು ಬ್ರಿಟನ್ ರಾಣಿಗಿಂತ ಶ್ರೀಮಂತರಾಗಿದ್ದಾರೆ. ಸುದ್ದಿ ಸಂಸ್ಥೆ ಎಎಫ್‌ಪಿ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಿದೆ. ಅಕ್ಷತಾ ಮೂರ್ತಿ, ಭಾರತದ ಪ್ರಮುಖ ಐಟಿ ಸೇವಾ ಕಂಪನಿ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಮಗಳು ಎಂಬುವುದು ಉಲ್ಲೇಖನೀಯ. ಅಕ್ಷತಾ ಮೂರ್ತಿ ಮತ್ತು ಅವರ ಪತಿ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಇನ್ಫೋಸಿಸ್‌ನಲ್ಲಿನ ಷೇರುಗಳ ವಿಚಾರದಿಂದಾಗಿ ಚರ್ಚೆಯಲ್ಲಿದ್ದಾರೆ.
ಇದು ಅಕ್ಷತಾ ಮೂರ್ತಿಯ ಒಟ್ಟು ಆಸ್ತಿ ಇಷ್ಟು
ವರದಿಯ ಪ್ರಕಾರ, ಇನ್ಫೋಸಿಸ್‌ನಲ್ಲಿ ಅಕ್ಷತಾ ಶೇ.0.90 ಪಾಲನ್ನು ಹೊಂದಿದ್ದಾರೆ. ಇದರ ಮೌಲ್ಯ 43 ಮಿಲಿಯನ್ ಡಾಲರ್. ಇದಲ್ಲದೆ, ಅವರು ಸುಮಾರು 11.15 ಮಿಲಿಯನ್ ಪೌಂಡ್‌ಗಳ ವಾರ್ಷಿಕ ಲಾಭಾಂಶವನ್ನು ಸಹ ಪಡೆಯುತ್ತಾರೆ. ಈ ಮೂಲಕ 42 ವರ್ಷದ ಅಕ್ಷತಾ ಮೂರ್ತಿ ಅವರ ಒಟ್ಟು ಆಸ್ತಿ ಸುಮಾರು 69 ಮಿಲಿಯನ್ ಪೌಂಡ್ (6,834 ಕೋಟಿಗೂ ಹೆಚ್ಚು) ಅದೇ ಸಮಯದಲ್ಲಿ, '2021 ಸಂಡೇ ಟೈಮ್ಸ್ ರಿಚ್ ಲಿಸ್ಟ್' ಪ್ರಕಾರ, ಬ್ರಿಟನ್ ರಾಣಿ ಸುಮಾರು 350 ಮಿಲಿಯನ್ ಪೌಂಡ್‌ಗಳ ವೈಯಕ್ತಿಕ ಆಸ್ತಿಯನ್ನು ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದರ ಅನ್ವಯ ಅಕ್ಷತಾ ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ ಎಂಬುವುದು ಸ್ಪಷ್ಟ.
ಸುನಕ್ ದಂಪತಿ ಲಂಡನ್‌ನಲ್ಲಿ ಕನಿಷ್ಠ ನಾಲ್ಕು ಆಸ್ತಿ ಹೊಂದಿದ್ದಾರೆ, ಇದರಲ್ಲಿ 7 ಮಿಲಿಯನ್ ಪೌಂಡ್ ಮೌಲ್ಯದ ಐದು ಬೆಡ್‌ರೂಮ್ ಮನೆ ಸೇರಿದೆ. ಅವರು ಕ್ಯಾಲಿಫೋರ್ನಿಯಾದಲ್ಲಿ ಫ್ಲಾಟ್ ಕೂಡ ಹೊಂದಿದ್ದಾರೆ. ಅಕ್ಷತಾ ಅವರು ವೆಂಚರ್ ಕ್ಯಾಪಿಟಲ್ ಕಂಪನಿ ಕ್ಯಾಟಮರನ್ ವೆಂಚರ್ಸ್‌ನ ನಿರ್ದೇಶಕರೂ ಆಗಿದ್ದಾರೆ. ಅವರು ಸುನಕ್ ಅವರೊಂದಿಗೆ 2013 ರಲ್ಲಿ ಈ ಕಂಪನಿಯನ್ನು ಪ್ರಾರಂಭಿಸಿದರು.
ಈ ಕಾರಣದಲ್ಲಿ ವಿವಾದದಲ್ಲಿದ್ದಾರೆ ಸುನಕ್
ಕೆಲ ಸಮಯದ ಹಿಂದೆ ಸುನಕ್ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುತ್ತಾರೆಂಬ ಸುದ್ದಿ ಹರಿದಾಡಿತ್ತು. ಆದಾಗ್ಯೂ, ಯುಕೆಯಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಭಾರತೀಯ ಕಂಪನಿಯಲ್ಲಿ ಅಕ್ಷತಾ ಅವರ ಪಾಲು ವಿವಾದದಿಂದಾಗಿ ಸುನಕ್ ಅವರ ಜನಪ್ರಿಯತೆಯ ಕುಸಿಯಲಾರಂಭಿಸಿದೆ.
ಇನ್ಫೋಸಿಸ್ ಶುರುವಾಗಿದ್ದು ಹೀಗೆ
ಅಕ್ಷತಾ ಮೂರ್ತಿ ಅವರ ತಂದೆ ಎನ್. ಆರ್. ನಾರಾಯಣ ಮೂರ್ತಿ (75) ಅವರು ತಮ್ಮ ಇತರ ಸಹವರ್ತಿಗಳೊಂದಿಗೆ ಸೇರಿ 1981 ರಲ್ಲಿ ಇನ್ಫೋಸಿಸ್ ಅನ್ನು ಸ್ಥಾಪಿಸಿದರು. ಈ ಪ್ರಮುಖ ಕಂಪನಿಯು ಇಡೀ ಭಾರತದ ಐಟಿ ಸೇವಾ ಉದ್ಯಮದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಮೂರ್ತಿ ಅವರು ತಮ್ಮ ಪತ್ನಿಯಿಂದ 10 ಸಾವಿರ ರೂಪಾಯಿ ಸಾಲ ಪಡೆದು ಈ ಕಂಪನಿ ಸ್ಥಾಪಿಸಿದ್ದಾರೆ. ಈ ಕಂಪನಿಯ ಮೌಲ್ಯ ಈಗ ಸುಮಾರು $100 ಬಿಲಿಯನ್ ಆಗಿದೆ ಮತ್ತು ಇದು ವಾಲ್ ಸ್ಟ್ರೀಟ್‌ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ.