
ವಾಷಿಂಗ್ಟನ್ (ಜ.06): ಅಮೆರಿಕ ಕಳೆದ ವರ್ಷ ವಿತರಿಸಿದ ಎಚ್-1ಬಿ ವೀಸಾದಲ್ಲಿ ಶೇ.20ರಷ್ಟು ಭಾರತದ ಪ್ರಮುಖ ಟೆಕ್ ಕಂಪನಿಗಳ ಪಾಲಾಗಿವೆ. ಅದರಲ್ಲಿ ಅತೀ ಹೆಚ್ಚಿನ ವೀಸಾಗಳು ಇನ್ಫೋಸಿಸ್ ಮತ್ತು ಟಿಸಿಎಸ್‌ಗೆ ಸಿಕ್ಕಿವೆ ಎಂದು ಅಮೆರಿಕದ ವಲಸೆ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ. ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ 1,30,000 ಎಚ್-1ಬಿ ವೀಸಾ ವಿತರಿಸಲಾಗಿದೆ. ಇದರಲ್ಲಿ 24,766 ವೀಸಾಗಳು ಭಾರತೀಯ ಮೂಲದ ಕಂಪನಿಗಳ ಪಾಲಾಗಿವೆ. ಇನ್ಫೋಸಿಸ್ 8,140 ಮತ್ತು ಟಿಸಿಎಸ್ 5,274 ಮತ್ತು ಎಚ್‌ಸಿಎಲ್ ಅಮೆರಿಕ 2,953 ವೀಸಾಗಳನ್ನು ಪಡೆದಿದ್ದರೆ, ವಿತರಿಸಲಾಗಿದೆ.
ಅಮೆಜಾನ್ ಕಾಮ್ ಸರ್ವೀಸ್ ಎಲ್‌ಎಲ್‌ಸಿ ನಂತರ ಅತೀ ಹೆಚ್ಚು ಎಚ್-1ಬಿ ವೀಸಾ ಪಡೆದ ಕಂಪನಿ ಇನ್ಫೋಸಿಸ್ ಆಗಿದೆ. ಅಮೆಜಾನ್ 9265 ವೀಸಾಗಳನ್ನು ಪಡೆದಿದೆ. ಇನ್ನು ಚೆನ್ನೈನಲ್ಲಿ ಸ್ಥಾಪಿತ ಸದ್ಯ ನ್ಯೂಜೆರ್ಸಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಕಾಗ್ನಿಜೆಂಟ್ 6321 ವೀಸಾಗಳನ್ನು ಪಡೆಯುವ ಮೂಲಕ ಅತೀ ಹೆಚ್ಚು ವೀಸಾಗಳನ್ನು ಪಡೆದ ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ವಿಶೇಷ ಉದ್ಯೋಗಗಳಿಗೆ ತಾತ್ಕಾಲಿಕವಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಎಚ್-1ಬಿ ವೀಸಾ ಕಾರ್ಯಕ್ರಮ ಅವಕಾಶ ಮಾಡಿಕೊಡುತ್ತದೆ. ಭಾರತೀಯ ಕಂಪನಿಗಳು ಅದರಲ್ಲೂ ತಾಂತ್ರಿಕ ಕ್ಷೇತ್ರದ ಕಂಪನಿಗಳು ಈ ಯೋಜನೆಯಡಿ ಹೆಚ್ಚಿನ ಅನುಕೂಲ ಪಡೆದುಕೊಂಡಿವೆ.
ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ನಿರಂತರವಾಗಿ ಎಚ್-1ಬಿ ವೀಸಾ ಪಡೆಯವ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ವಿಪ್ರೋ ಈ ಬಾರಿ ಮಾತ್ರ 1634 ವೀಸಾಗಳನ್ನಷ್ಟೇ ಪಡೆದಿದ್ದರೆ, ಮತ್ತೊಂದು ಐಟಿ ಕಂಪನಿಯಾದ ಟೆಕ್ ಮಹೀಂದ್ರಾ 1,199 ವೀಸಾ ಪಡೆದಿದೆ. ಎಚ್-1ಬಿ ವೀಸಾದ ಕುರಿತು ಅಮೆರಿಕದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಹೊಸ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಟ್ರಂಪ್ ಅವರ ನಡೆ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರಂಪ್ ಅವರ ಕಟ್ಟಾ ಬೆಂಬಲಿಗರಾದ ಎಲಾನ್ ಮಾಸ್ಕ್ ಅವರು ಸಾರ್ವಜನಿಕವಾಗಿಯೇ ತಾಂತ್ರಿಕ ಕ್ಷೇತ್ರದಲ್ಲಿ ಕೌಶಲ್ಯಯುತ ವಿದೇಶಿ ಉದ್ಯೋಗಿಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಟ್ರಂಪ್ ದಿಢೀರ್ ಯೂಟರ್ನ್: ಎಚ್1ಬಿ ವೀಸಾ ನನಗಿಷ್ಟ ಎಂದ ಅಮೆರಿಕಾದ ನಿಯೋಜಿತ ಅಧ್ಯಕ್ಷ
ಕಂಪನಿಗಳು: ಎಚ್-1ಬಿ ವೀಸಾ
ಇನ್ಫೋಸಿಸ್ 8,140
ಟಿಸಿಎಸ್ 5,274
ಎಚ್‌ಸಿಎಲ್ ಅಮೆರಿಕ 2,953
ವಿಪ್ರೋ 1634
ಟೆಕ್ ಮಹೀಂದ್ರಾ 1,199
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ