ಮಲೆಷಿಯಾದಲ್ಲಿ HMPV ವೈರಸ್ ಭೀತಿಯಿಂದ ಮಾಸ್ಕ್ ಧರಿಸಲು ಸೂಚನೆ, ದಿಲ್ಲಿ ಜನತೆಗೂ ಅಲರ್ಟ್

By Chethan Kumar  |  First Published Jan 6, 2025, 7:50 AM IST

ಚೀನಾದಲ್ಲಿ ಹ್ಯೂಮನ್ ಮೆಟಾನ್ಯೂಮೋ ವೈರಸ್(HMPV) ಸ್ಫೋಟಗೊಂಡಿದೆ. ಆತಂಕ ಹೆಚ್ಚಾಗುತ್ತಿದ್ದಂತೆ ಇದೀಗ ಮಲೆಷಿಯಾದಲ್ಲಿ HMPV ವೈರಸ್ ಭೀತಿ ಉಲ್ಬಣಿಸಿದೆ. ಇದರ ಬೆನ್ನಲ್ಲೇ ದೆಹಲಿ ಆರೋಗ್ಯ ಇಲಾಖೆ, ದಿಲ್ಲಿ ಜನತೆಗೆ ಮಾರ್ಗಸೂಚಿ ಪ್ರಕಟಿಸುವ ಮೂಲಕ ಮುನ್ನಚ್ಚೆರಿಕೆ ವಹಿಸಿದೆ.
 


ನವದೆಹಲಿ(ಜ.06) ಕೋವಿಡ್ ಬಳಿಕ ಚೀನಾದಲ್ಲಿ ಮತ್ತೊಂದು ವೈರಸ್ ಹ್ಯೂಮನ್ ಮೆಟಾನ್ಯೂಮೋ ವೈರಸ್(HMPV) ಸ್ಫೋಟಗೊಂಡಿದೆ. ಚೀನಾದ ಹಲವು ಪ್ರಾಂತ್ಯಗಳಲ್ಲಿ ಆಸ್ಪತ್ರೆಗಳು ಭರ್ತಿಯಾಗಿದೆ. ಜನರು ಭಯಗೊಂಡಿದ್ದಾರೆ. ಕೊರೋನಾ ರೀತಿ ಈ ವೈರಸ್ ಕ್ಷಿಪ್ರವೇಗದಲ್ಲಿ ಹರಡುವುದಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ ಮಲೇಷಿಯಾದಲ್ಲಿ HMPV ವೈರಸ್ ಭೀತಿ ಎದುರಾಗಿದೆ. ಹೀಗಾಗಿ ಮಲೆಷಿಯಾದಲ್ಲಿ ಆರೋಗ್ಯ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ದೆಹಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿ ಪ್ರಕಟಿಸಿದೆ. 

ಮಲೆಷಿಯಾದಲ್ಲಿ ಸರ್ಕಾರಿ ಅಧಿಕೃತ ಮಾಹಿತಿಗಳ ಪ್ರಕಾರ 2024 ಹಾಗೂ 2025ರ ಆರಂಭಿಕ ದಿನಗಳಲ್ಲಿ ಒಟ್ಟು 327 HMPV ವೈರಸ್ ಪ್ರಕರಣ ಪತ್ತೆಯಾಗಿದೆ. 2023ರಲ್ಲಿ 225 ಪ್ರಕರಣ ವರದಿಯಾಗಿತ್ತು. ಚೀನಾ ಹಾಗೂ ಮಲೆಷಿಯಾದಲ್ಲಿ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ವೈರಸ್ ಮೆಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಇತ್ತ ದೆಹಲಿ ಆರೋಗ್ಯ ಇಲಾಖೆ ಜನತೆಗೆ ಮಾರ್ಗಸೂಚಿ ಪ್ರಕಟಿಸಿದೆ.

Tap to resize

Latest Videos

ಚೀನಾ HMPV ವೈರಸ್ ಸ್ಫೋಟಕ್ಕೆ ಆರೋಗ್ಯ ಇಲಾಖೆ ಭಾರತೀಯರಿಗೆ ನೀಡಿದ ಸೂಚನೆ ಏನು?

ಶೀತ, ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಸೇರಿದಂತೆ HMPV ವೈರಸ್ ಗುಣಲಕ್ಷಣಗಳು ಕಂಡುಬಂದರೆ ತಕ್ಷಣವೇ IHIP ಪೋರ್ಟಲ್‌ನಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ. ಜನರು ಕೋವಿಡ್ ಸಂದರ್ಭದಲ್ಲಿ ಪಾಲಿಸಿರುವ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಕೈಗಳನ್ನು ಶುಚಿಯಾಗಿಡುವುದು, ಹೆಚ್ಚು ಜನಸಂದಣಿಯಿಂದ ದೂರವಿರುವುದು, ಅನಗತ್ಯ ಓಡಾಡಕ್ಕೆ ಕಡಿವಾಣ ಹಾಕಲು ಸೂಚಿಸಲಾಗಿದೆ. ವೈರಸ್ ಹರಡದಂತೆ ಹಾಗೂ ಬರದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. 

ದೆಹಲಿಯಲ್ಲಿ HMPV ವೈರಸ್ ಗುಣಲಕ್ಷಣಗಳು ಕಂಡ ಬಂದ ವ್ಯಕ್ತಿಯನ್ನು ಐಸೋಲೇಶನ್ ಮಾಡಲು ಚರ್ಚೆ ನಡೆದಿದೆ. ದೆಹಲಿ ಆರೋಗ್ಯ ಇಲಾಖೆ ಡೈರೆಕ್ಟರ್ ಡಾ.ವಂದನಾ ಬಗ್ಗಾ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಸಂಪೂರ್ಣ ದೆಹಲಿಯಲ್ಲಿ ಸೂಕ್ಷ್ಮವಾಗಿ HMPV ವೈರಸ್ ಮೆಲೆ ನಿಗಾ ಇಡಲು ಸೂಚಿಸಿದ್ದಾರೆ. ಸದ್ಯ ದೆಹಲಿ ಸೇರಿದಂತೆ ಭಾರತದಲ್ಲಿ ಯಾವುದೇ HMPV ವೈರಸ್ ಪತ್ತೆಯಾಗಿಲ್ಲ. ಆದರೆ ಚೀನಾದಲ್ಲಿ ವೈರಸ್ ಸ್ಫೋಟಗೊಂಡಿರುವ ಕಾರಣ, ಭಾರತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಇತ್ತ ಮಲೆಷಿಯಾದಲ್ಲಿ HMPV ವೈರಸ್ ಅಲರ್ಟ್ ನೀಡಲಾಗಿದೆ. ಮಲೆಷಿಯಾದಲ್ಲಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಕೈಗಳನ್ನು ಸೋಪಿನಿಂದ ತೊಳೆದು ಶುಚಿಯಾಗಿಡುವಂತೆ ಸೂಚಿಸಲಾಗಿದೆ. ಕೆಮ್ಮುವಾಗ ಬಾಯಿ ಹಾಗೂ ಮೂಗವನ್ನು ಬಟ್ಟೆ ಅಥವಾ ಮಾಸ್ಕ್ ಮೂಲಕ ಮುಚ್ಚಲು ಸೂಚಿಸಲಾಗಿದೆ. ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚಿಸಲಾಗಿದೆ. 

ಚಿಕ್ಕಮಕ್ಕಳು, ರೋಗ ನಿರೋಧಕ ಶಕ್ತಿ ಕಳೆದುಕೊಂಡವರು, ಹಿರಿಯರ ಮೇಲೆ ಬಹುಬೇಗ  HMPV ವೈರಸ್ ದಾಳಿಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ವರ್ಗದವರು ಹೆಚ್ಚು ಕಾಳಜಿ ವಹಿಸಲು ಸೂಚಿಸಲಾಗಿದೆ. 

ಚೀನಾದ ಹೊಸ ವೈರಸ್ ಆತಂಕದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಅಲರ್ಟ್!
 

click me!