ರಷ್ಯಾ ಯುದ್ಧ ಪರಿಣಾಮ ತಡೆಗೆ 13 ದೇಶಗಳ ಮಹತ್ವದ ಒಪ್ಪಂದ, ಅಗತ್ಯ ವಸ್ತು ಪೂರೈಕೆಗೆ ಒಪ್ಪಂದ!

By Suvarna News  |  First Published May 24, 2022, 8:43 AM IST

* ರಷ್ಯಾ ಯುದ್ಧದ ಪರಿಣಾಮ ತಡೆಗೆ ಐಪಿಇಎಫ್‌ ಒಪ್ಪಂದ

* ಭಾರತ ಸೇರಿ 13 ದೇಶಗಳಿಂದ ಒಡಂಬಡಿಕೆ

* ಅಮೆರಿಕ ನೇತೃತ್ವದಲ್ಲಿ ಐಪಿಇಎಫ್‌ ರಚನೆ

* ಸ್ವಚ್ಛ ಇಂಧನ, ಅಗತ್ಯ ವಸ್ತು ಪೂರೈಕೆ ಸಹಕಾರ

* ಆರ್ಥಿಕತೆ ಮೇಲೆ ರಷ್ಯಾ ಯುದ್ಧದ ಪರಿಣಾಮ ತಡೆಗೆ ಈ ಕ್ರಮ


ಟೋಕಿಯೋ(ಮೇ.24): ಇಂಡೋ-ಪೆಸಿಫಿಕ್‌ ವಲಯದಲ್ಲಿ ಡಿಜಿಟಲ್‌ ವಹಿವಾಟು, ಸ್ವಚ್ಛ ಇಂಧನ, ಭ್ರಷ್ಟಾಚಾರ ನಿಗ್ರಹ ಮತ್ತು ಪೂರೈಕೆ ವ್ಯವಸ್ಥೆಗೆ ಪರಸ್ಪರರಿಗೆ ನೆರವಾಗುವ ‘ಇಂಡೋ-ಪೆಸಿಫಿಕ್‌ ಎಕನಾಮಿಕ್‌ ಫ್ರೇಮ್‌ವರ್ಕ್’(ಐಪಿಇಎಫ್‌) ಒಪ್ಪಂದಕ್ಕೆ ಅಮೆರಿಕ, ಭಾರತ ಸೇರಿದಂತೆ 13 ದೇಶಗಳು ಸಹಿ ಹಾಕಿವೆ. ವಿಶ್ವದ ಆರ್ಥಿಕತೆ ಮೇಲೆ ರಷ್ಯಾ ಯುದ್ಧದ ಕರಿನೆರಳು ಬೀಳುತ್ತಿದ್ದು, ಇದನ್ನು ತಡೆಗಟ್ಟಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ವಿಶ್ವದ ಒಟ್ಟು ಜಿಡಿಪಿಯಲ್ಲಿ ಶೇ.40ರಷ್ಟುಪಾಲು ಹೊಂದಿರುವ ಅಮೆರಿಕ, ಆಸ್ಪ್ರೇಲಿಯಾ, ಭಾರತ, ಬ್ರುನೈ, ಇಂಡೋನೇಷ್ಯಾ, ಜಪಾನ್‌, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌, ವಿಯೆಟ್ನಾಂ ಒಪ್ಪಂದಕ್ಕೆ ಸಹಿಹಾಕಿರುವ ದೇಶಗಳಾಗಿವೆ.

Tap to resize

Latest Videos

ಜಪಾನ್‌ನಲ್ಲಿ ಈಗ ಬ್ರಿಕ್ಸ್‌ ಶೃಂಗಕ್ಕೆ ವಿಶ್ವ ನಾಯಕರು ಆಗಮಿಸಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಐಪಿಇಎಫ್‌ ಘೋಷಣೆ ಆಯಿತು.

ಒಪ್ಪಂದದ ಮಹತ್ವ:

ಈ ಒಪ್ಪಂದವು, ಕೊರೋನಾ ಸಾಂಕ್ರಾಮಿಕ ಮತ್ತು ರಷ್ಯಾ ಹಾಗೂ ಉಕ್ರೇನ್‌ ಯುದ್ಧದಿಂದ ಆರ್ಥಿಕತೆ ಮೇಲೆ ಉಂಟಾಗಿರುವ ದುಷ್ಪರಿಣಾಮಗಳನ್ನು ಬದಿಗೆ ಸರಿಸಿ ಭವಿಷ್ಯದ ಆರ್ಥಿಕತೆಯನ್ನು ಕಟ್ಟುವ ಸಾಮೂಹಿಕ ಯತ್ನಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಎಲ್ಲಾ ದೇಶಗಳು ವಿಶ್ವಾಸ ವ್ಯಕ್ತಪಡಿಸಿವೆ.

ವಿವಿಧ ವಲಯಗಳಲ್ಲಿ ಏಷ್ಯಾ ದೇಶಗಳ ಜೊತೆ ಇನ್ನಷ್ಟುನಿಕಟವಾಗಿ ವ್ಯವಹರಿಸಲು ಈ ಒಪ್ಪಂದ ಅನುವು ಮಾಡಿಕೊಡಲಿದೆ ಎಂದು ಒಪ್ಪಂದದ ನೇತೃತ್ವ ವಹಿಸಿದ್ದ ಅಮೆರಿಕ ಹೇಳಿದೆ.

ಸಹಕಾರಕ್ಕೆ ಮೋದಿ ಕರೆ:

ಈ ವೇಳೆ ಮಾತನಾಡಿದ ಮೋದಿ, ಇಂಡೋ-ಪೆಸಿಫಿಕ್‌ ವಲಯದಲ್ಲಿ ಮುಕ್ತ, ಸ್ವತಂತ್ರ ಮತ್ತು ಸಮಗ್ರ ಒಳಗೊಳ್ಳುವಿಕೆಗೆ ಭಾರತ ಬದ್ಧ ಎಂದು ಘೋಷಿಸಿದರಲ್ಲದೆ, ಆರ್ಥಿಕ ಪ್ರಗತಿ, ಶಾಂತಿ ಮತ್ತು ಸಮೃದ್ಧಿಯ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ಇನ್ನಷ್ಟುಆಳವಾದ ಸಹಕಾರಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

click me!