ಬ್ರಿಟನ್‌ಗೆ ಭಾರತ ತಿರುಗೇಟು: ಅಲ್ಲಿಂದ ಬಂದರೆ ಕ್ವಾರಂಟೈನ್‌!

By Kannadaprabha NewsFirst Published Oct 2, 2021, 8:07 AM IST
Highlights

* 72 ತಾಸಿನ ನೆಗೆಟಿವ್‌ ವರದಿ, 10 ದಿನ ಕ್ವಾರಂಟೈನ್‌ ಕಡ್ಡಾಯ

* ಭಾರತೀಯ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದ್ದಕ್ಕೆ ತಕ್ಕ ಶಾಸ್ತಿ

*  2 ವಾರ ಹಿಂದೆ ಪ್ರಯಾಣ ನೀತಿ ಪ್ರಕಟಿಸಿದ್ದ ಬ್ರಿಟನ್‌ ಸರ್ಕಾರ

* ಅಲ್ಲಿಗೆ ತೆರಳುವ ಭಾರತೀಯರು ಲಸಿಕೆ ಪಡೆದಿದ್ದರೂ ನಿರ್ಬಂಧ

ನವದೆಹಲಿ(ಸೆ.02): ಭಾರತದ ಕೋವಿಶೀಲ್ಡ್‌ ಲಸಿಕೆ ಮತ್ತು ಲಸಿಕೆ ಪಡೆದವರಿಗೆ ನೀಡುವ ಪ್ರಮಾಣದ ಪತ್ರದ ಬಗ್ಗೆ ಕ್ಯಾತೆ ತೆಗೆದಿದ್ದ ಬ್ರಿಟನ್‌ಗೆ(Britain) ಇದೀಗ ಭಾರತವೂ ಸಡ್ಡು ಹೊಡೆದಿದೆ. ಲಸಿಕೆ(Vaccine) ಪಡೆದ ಹೊರತಾಗಿಯೂ ತನ್ನ ದೇಶಕ್ಕೆ ಆಗಮಿಸುವ ಭಾರತೀಯರಿಗೆ ಬ್ರಿಟನ್‌ ಸರ್ಕಾರ(Britain Govt) ಯಾವ್ಯಾವ ನಿರ್ಬಂಧಗಳನ್ನು ಹೇರಿತ್ತೋ, ಅದೇ ನಿರ್ಬಂಧಗಳನ್ನು ಇದೀಗ ಭಾರತವೂ ಬ್ರಿಟನ್‌(Britain) ನಾಗರಿಕರ ಮೇಲೆ ಹೇರಿದೆ.

ಹೀಗಾಗಿ ಅ.4ರಿಂದ ಬ್ರಿಟನ್‌ನಿಂದ ಭಾರತಕ್ಕೆ(India) ಬರುವ ಯಾವುದೇ ವ್ಯಕ್ತಿಗಳು, ಯಾವುದೇ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದರೂ, 10 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು. ಜೊತೆಗೆ ಭಾರತಕ್ಕೆ ಆಗಮಿಸುವ 72 ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಿ ಅದರಲ್ಲಿ ನೆಗೆಟಿವ್‌ ವರದಿ ಪಡೆದಿರಬೇಕು. ಅಲ್ಲದೇ ಭಾರತಕ್ಕೆ ಬಂದ ತಕ್ಷಣ ಮತ್ತು ಬಂದ 8 ದಿನದ ಬಳಿಕ ಮತ್ತೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

ತಿರುಗೇಟು:

2 ವಾರದ ಹಿಂದೆ ಬ್ರಿಟನ್‌ ಸರ್ಕಾರ ತನ್ನ ಪ್ರಯಾಣ ನೀತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿತ್ತು. ಅದರಲ್ಲಿ ಭಾರತದಲ್ಲಿ ತಯಾರಿಸಲಾದ ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ನೀಡಿರಲಿಲ್ಲ. ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಕೋವಿಶೀಲ್ಡ್‌ಗೆ ಮಾನ್ಯತೆ ಇದೆ, ಆದರೆ ಲಸಿಕೆ ಪಡೆದವರಿಗೆ ನೀಡಲಾಗುವ ಪ್ರಮಾಣ ಪತ್ರದ ಬಗ್ಗೆ ತನ್ನ ತಕರಾರು ಇದೆ ಎಂದು ಹೇಳಿತ್ತು.

ಈ ಕಾರಣಕ್ಕಾಗಿಯೇ ಅ.4ರ ಬಳಿಕ ತನ್ನ ದೇಶಕ್ಕೆ ಬರುವ ಭಾರತೀಯರಿಗೆ ಆಗಮನಕ್ಕೂ 72 ಗಂಟೆ ಮೊದಲು ಆರ್‌ಟಿ-ಪಿಸಿಆರ್‌ ಪರೀಕ್ಷೆ, ಆಗಮನದ ಬಳಿಕ 10 ದಿನಗಳ ಕಡ್ಡಾಯ ಕ್ವಾರಂಟೈನ್‌ ಮತ್ತು ಆಗಮಿಸಿದ 10 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಕಡ್ಡಾಯಗೊಳಿಸಿತ್ತು. ಈ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೊರತಾಗಿಯೂ, ವಿವಾದ ಇತ್ಯರ್ಥಪಡಿಸುವಲ್ಲಿ ಬ್ರಿಟನ್‌ ಸರ್ಕಾರ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಭಾರತ ಸರ್ಕಾರವೂ ಕಠಿಣ ಕ್ರಮ ಘೋಷಿಸುವ ಮೂಲಕ ಬ್ರಿಟನ್‌ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯತ್ನ ಮಾಡಿದೆ.

click me!