
ನವದೆಹಲಿ: ಒಂದು ವೇಳೆ ನನ್ನನ್ನು ಭಾರತಕ್ಕೆ ಗಡೀಪಾರು ಮಾಡಿದರೆ, ನಾನು ಪಾಕಿಸ್ತಾನದ ಮೂಲದ ಮುಸ್ಲಿಂ ಎಂದು ನನಗೆ ಜೈಲಲ್ಲಿ ಹಿಂಸಾತ್ಮಕ ಕಿರುಕುಳ ನೀಡುವ ಸಾಧ್ಯತೆ ಇದೆ. ಇದರಿಂದ ನನ್ನ ಸಾವು ಸಂಭವಿಸಬಹುದು. ಹೀಗಾಗಿ ನನ್ನನ್ನು ಭಾರತಕ್ಕೆ ಗಡೀಪಾರು ಮಾಡಬೇಡಿ ಎಂದು 2008ರ ಮುಂಬೈ ಸರಣಿ ಸ್ಫೋಟ ಪ್ರಕರಣದ ರೂವಾರಿ ತಹವ್ವುರ್ ರಾಣಾ ಅಮೆರಿಕದ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ.
ಇತ್ತೀಚೆಗೆ ಅಮೆರಿಕ ಸುಪ್ರೀಂಕೋರ್ಟ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಸಮ್ಮತಿಸಿತ್ತು. ಜೊತೆಗೆ ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೇ ಶೀಘ್ರವೇ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಮತ್ತೆ ಮೇಲ್ಮನವಿ ಸಲ್ಲಿಸಿರುವ ರಾಣಾ, ನನ್ನ ಗಡೀಪಾರು, ಅಮೆರಿಕದ ಕಾನೂನು ಮತ್ತು ಕಿರುಕುಳದ ವಿರುದ್ಧದ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಲಿದೆ. ಏಕೆಂದರೆ ನಾನು ಪಾಕಿಸ್ತಾನಿ ಮೂಲದ ಮುಸ್ಲಿಂ. ಜೊತೆಗೆ ಪಾಕ್ ಸೇನೆಯಲ್ಲೂ ಕಾರ್ಯನಿರ್ವಹಿಸಿದ್ದೆ. ಈ ವಿಷಯಗಳು ಭಾರತದ ಜೈಲುಗಳಲ್ಲಿ ನಮ್ಮ ಮೇಲೆ ಹಿಂಸಾತ್ಮಕ ಕಿರುಕುಳಕ್ಕೆ ಕಾರಣವಾಗಬಹುದು. ಅದು ನನ್ನ ಸಾವಿಗೂ ಕಾರಣವಾಗಬಹುದು ಎಂದು ನಂಬಲು ಎಲ್ಲ ಕಾರಣಗಳೂ ಇವೆ ಎಂದಿದ್ದಾನೆ.
ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಣಾ
ಜೊತೆಗೆ, ನಾನು ಮೂತ್ರಕೋಶದ ಕ್ಯಾನ್ಸರ್, ಮೂತ್ರಕೋಶದ ಸಮಸ್ಯೆ, ಅಸ್ತಮಾ, ಕೋವಿಡ್ ಸೇರಿದಂತೆ ವಿವಿಧ ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ನನ್ನ ವಿರುದ್ಧ ಹೊರಿಸಲಾಗಿರುವ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಖಚಿತ. ಹೀಗಾಗಿ ನನ್ನನ್ನು ಭಾರತಕ್ಕೆ ಗಡೀಪಾರು ಮಾಡಲು ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ರಾಣಾ ಕೋರಿಕೆ ಸಲ್ಲಿಸಿದ್ದಾನೆ. ರಾಣಾ, 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಲಷ್ಕರ್-ಎ-ತೊಯ್ದಾದ ಡೇವಿಡ್ ಹೆಡ್ಲಿಯೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎನ್ನುವ ಆರೋಪ ಎದುರಿಸುತ್ತಿದ್ದಾನೆ.
26/11ರ ದಾಳಿ ರೂವಾರಿ ರಾಣಾ ಹಸ್ತಾಂತರಕ್ಕೆ ಮೋದಿಗೆ ಮಾತು ಕೊಟ್ಟ ಟ್ರಂಪ್, ಯಾರು ಈ ಟೆರರ್?
ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ರಾಣಾ ಗಡಿಪಾರಿಗೆ ಅಮೆರಿಕ ಕೋರ್ಟ್ ಸೂಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ